ಯಾಕೆ ಇನ್ನೂ ಬಂದಿಲ್ಲ? ” ನಿನ್ನ ಅಪ್ಪನಿಗೆ ತುಂಬಾ ಹುಷಾರಿಲ್ಲ.” ಎಂದು ಚಿಕ್ಕಪ್ಪ ಫೋನಿನಲ್ಲಿ ಕೇಳಿದಾಗ ನನಗೆ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ. ಊರಿಗೆ ಹೋಗದೆ ಸರಿಸುಮಾರು ಹದಿನೈದು ದಿನಗಳಾಗಿದ್ದವು. ಹೋಗಲು ಹೆದರುತ್ತಿದ್ದೆ. ಅಪ್ಪನಿಗೆ ಹುಷಾರಿಲ್ಲ ಎಂಬುದು ಹೊಸ ವಿಷಯವೇನಲ್ಲ. ಬಹಳ ವರ್ಷಗಳಿ೦ದ ಅನುಭವದಲ್ಲಿದ್ದ ಹಳೇ ವಿಷಯ. ಆದರೆ, ಅಪ್ಪನಿಗೆ ಹುಶಾರಿಲ್ಲವೆಂದು ಅರಿವಾಗಲು ಶುರುವಾಗಿದ್ದು ಇದೇ ಕೆಲವು ತಿಂಗಳುಗಳ ಮೊದಲು! ಅವರ ಹಸನ್ಮುಖ ಕಣ್ಮರೆಯಾಗಿದ್ದು ತೀರ ಇತ್ತೀಚಿಗೆ !
ಪ್ರತೀ ವಾರ ಹೋಗಿ ನೋಡಿಬರುತ್ತೇನೆ ಎಂದು ನಿರ್ಧರಿಸಿದವಳನ್ನು ಹಿಂದೆ ಸರಿಯುವಂತೆ ಮಾಡಿದ್ದು ಅವರ ಸಹಾಯ ಯಾಚನೆ “ನನಗೆ ಸಾಯಲು ಸಹಾಯ ಮಾಡು”.. ಎಂದು ಅವರು ಕೇಳುವಾಗ ಪರಿಪರಿಯಾಗಿ ಬೇಡವೆಂದು ಹೇಳಲು ಪ್ರಯತ್ನ ಪಟ್ಟಿದ್ದೆ. ಆದರೆ ಅವರ ನೋವಿಗೆ ಸಾವಿನಿಂದ ಮಾತ್ರ ಮುಕ್ತಿ ಎಂದು ಮನಸ್ಸು ಹೇಳುತ್ತಲೇ ಇತ್ತು!. ಅವರ ಸ್ಥಿತಿ ನನಗೆ ತೋರ್ಪಡಿಸಲು, ನೋವು ತಡೆಯಲಾರದೆಯೋ… ರಾತ್ರಿಯಿಡೀ ಬಹಳ ನರಳುತ್ತಿದ್ದರು. ನನ್ನ ಹೆಸರು ಪದೇ ಪದೇ ಕೂಗುತ್ತಿದ್ದರು. ನನಗೆ ಹೆದರಿಕೆ. ಅಪ್ಪ ಸಾಯುತ್ತಾರೆಂದಲ್ಲ. ಹಸನ್ಮುಖಿಯಾದ ಅಪ್ಪನನ್ನು ನೋವಿನ ಮುಖಭಾವದಲ್ಲಿ ನೋಡಲು ಹೆದರಿಕೆ. ಮದುವೆಯಾಗಿ ನಾನು ತವರು ತೊರೆದು ಗಂಡನ ಮನೆಗೆ ಹೊರಟಾಗ ಕೂಡ “ಹೊಗಿಬರುತ್ತೀಯಾ? ಹೋಗಿ ಬಾ” ಎಂದು ಬೇಸರದ ಭಾವನೆಯೇ ಇಲ್ಲದ ತೆ ನಟಿಸಿ,ನಗಿಸಿ, ನಗುತ್ತಲೇ ಕಳುಸಿದ್ದರು. ತಮ್ಮದಲ್ಲದ ತಪ್ಪಿಗೆ ತಮ್ಮ ಜೀವನದ ಅಮೂಲ್ಯ ದಿನಗಳನ್ನು ನಾಲ್ಕು ಗೋಡೆಗಳ ಮದ್ಯೆ ಚಲಿಸಲಾಗದ ಸ್ಥಿತಿಯಲ್ಲಿ ಕಳೆದರೂ, ಒಂದು ದಿನವೂ ನಾನು ಕಷ್ಟದಲ್ಲಿದ್ದೇನೆ ಎಂದು ಹೇಳಿದವರಲ್ಲ. ಕಾರಣರಾದವರನ್ನು ಸುಮ್ಮನೆ ಬೈದವರಲ್ಲ. ನೋವನ್ನು ಮೀರಿ ನಿಂತಂತಿದ್ದವರು ನೋವಿಗೆ ಶರಣಾಗಿದ್ದು ನೋಡಲು ಸಂಕಟ. ಅಮ್ಮನ ನನ್ನ ಸಂಕಟ ಅರ್ಥಮಾಡಿಕೊಂಡು ನೀನು ಪ್ರತೀ ವಾರ ಬರುವುದು ಬೇಡ. ನಾನು ಹೇಳಿದಾಗ ಬಾ ಸಾಕು ಎಂದು ಹೇಳಿದ್ದರು.
ಚಿಕ್ಕಪ್ಪನ ಫೋನು ಬಂದ ಕೂಡಲೇ ಕಾರು ಮಾಡಿಕೊಂಡು ಊರಿಗೆ ಹೊರಟೆವು. ಮನೆ ಸೇರುವಷ್ಟರಲ್ಲಿ ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಆಸ್ಪತ್ರೆಗೆ ಹೋಗಿ ನೋಡಿದರೆ ಎಂದಿನ ಹಸನ್ಮುಖದಿಂದ “ಓ ಬಂದ್ಯನೇ? ಇವರೆಲ್ಲ ಸೇರಿ ಒಂದು ನಾಲ್ಕು ದಿನ ಆಸ್ಪತ್ರೆಯಲ್ಲಿದ್ದು ಪರೀಕ್ಷೆ ಮಾಡಿಸಿಕೊಂಡು ಹೋಗು ಎಂದರು. ಬಂದಿದ್ದೇನೆ.” ಎಂದು ಹೇಳಿ, ಅಲ್ಲಿದ್ದ ಚಿಕ್ಕಪ್ಪನಿಗೆ ಆಸ್ಪತ್ರೆಯ ರೂಮಿನಲ್ಲಿ ಅವರ ಮಂಚ ಎಲ್ಲಿರಬೇಕು? ಯಾವ ದಿಕ್ಕಿಗೆ ತಲೆ ಹಾಕಿ ಮಲಗುವಂತಿರಬೇಕು ಎಂದೆಲ್ಲ ನಿರ್ದೇಶನ ಕೊಡಲು ಶುರುಮಾಡಿದಾಗ ನನಗೆ ಒಂದು ರೀತಿ ನೆಮ್ಮದಿ. ಮಂಚ ಹಾಸಿಗೆ ಅವರು ಇಚ್ಚಿಸಿದ ಜಾಗದಲ್ಲಿ ತಯಾರಾದರೂ, ಆ ಹಾಸಿಗೆಯಲ್ಲಿ ಮಲಗಲು ಅವರು ಇನ್ನೂ ತಯಾರಿರಲಿಲ್ಲ. ಅವರನ್ನು ಮಂಚಕ್ಕೆ ಹತ್ತಿಸಲು ಇಬ್ಬರೂ ಮೂವರ ಜನರ ಸಹಾಯ ಬೇಕಿತ್ತು! ಅಲ್ಲಿದ್ದವರೆಲ್ಲ ತೆಳ್ಳಗಿದ್ದವರೇ ಅವರು ಎತ್ತಿದರೆ ಕೈಗ೦ಟು ಚುಚ್ಚುತ್ತದೆ. ಹಾಗಾಗಿ ಸ್ವಲ್ಪ ದಪ್ಪಗಿದ್ದ ನನ್ನ ಅತ್ತೆಯ ಮಗ ಬರೆಬೇಕೆಂದು ಕರೆದರು. ಅವನು ಬಂದು ಇವರನ್ನು ಮಂಚಕ್ಕೆ ಏರಿಸಿದಾಗ ಇವರಿಗೆ ಸ್ವಲ್ಪ ಸಮಾಧಾನ. ಡಾಕ್ಟರು ಬಂದು ನೋಡಿದರು. ವಿಸರ್ಜನೆಯ ಸಮಯದಲ್ಲಿ ಹೆಂಟೆ ಹೆಂಟೆಯಾಗಿ ರಕ್ತ ಹೋಗುತ್ತಿದ್ದುದು ಸ್ವತಃ ಅಪ್ಪನಿಗೆ ಗೊತ್ತಿರಲಿಲ್ಲ. ಅಮ್ಮ ಅವರಿಗೆ ಹೇಳಿರಲಿಲ್ಲ. ಮರುದಿನ ಸ್ಕ್ಯಾನ್ ಮಾಡುವುದೆಂದು ನಿರ್ಧಾರವಾಯಿತು. ರಾತ್ರಿ ಆಸ್ಪತ್ರೆಯಲ್ಲಿ ನಾನು ಅಮ್ಮ. ಮಧ್ಯ ನರ್ಸ್ ಬಂದು ಆಗಾಗ ನೋಡಿ ಹೋಗುತ್ತಿದ್ದಳು.
ಮರುದಿನ ಬೆಳಿಗ್ಗೆ ಸ್ಕಾನ್ನಿಂಗ್ ಮಾಡಿ ನೋಡಿದಾಗ ಅವರ ಲಿವರಿನಲ್ಲಿ ಸಾಕಷ್ಟು ಗೆಡ್ಡೆಗಳು ಇರುವುದು ಕಂಡುಬಂತು. ಚಿಕಿತ್ಸೆಯ ಮಟ್ಟ ಮೀರಿ ಕೊನೆಯ ಹಂತಕ್ಕೆ ಅದು ಬಂದಾಗಿತ್ತು! ಅವರ ಬದುಕು ಇನ್ನು ಬೆರಳು ಎಣಿಸುವಷ್ಟು ಕೆಲವೇ ದಿನಗಳು ಎಂದು ಡಾಕ್ಟರಿಗೆ ಖಚಿತವಾಗಿ ತಿಳಿದಿತ್ತು. ಆದರೆ ಅಪ್ಪನಿಗೆ ಇದ್ಯಾವುದನ್ನೂ ತಿಳಿಸಲಿಲ್ಲ. ನೋಡಲು ಬಹಳಷ್ಟು ಜನ ಬರುತ್ತಿದ್ದರು. ಅಪ್ಪ ಎಲ್ಲರೊಂದಿಗೂ ಗಂಟೆಗಟ್ಟಲೆ ನಗುತ್ತಾ ಮಾತನಾಡುತ್ತಿದ್ದರು. ನಿಜ ವಿಷಯ ಗೊತ್ತಿಲ್ಲದ ಅವರಿಗೆಲ್ಲ ಅಪ್ಪನನ್ನು ಯಾಕೆ ಆಸ್ಪತ್ರೆಗೆ ಸೇರಿಸಿದ್ದಾರೆಂದು ಆಶ್ಚರ್ಯ!
ದಿನ ಕಳೆದಂತೆ ಅಪ್ಪನ ನಿದ್ರೆಯ ಸಮಯ ಬದಲಾಯಿತು. ಹಗಲಿಡೀ ನಿದ್ರಿಸುತ್ತಿದ್ದರು. ರಾತ್ರಿ ಮಾತ್ರ ಜಾಗರಣೆ ಖಾತ್ರಿ. ಮಾತನಾಡಿದರೆ ಬಾಯಿ ಸ್ವಲ್ಪ ತೊದಲುತ್ತಿತ್ತು. ನಮ್ಮಿಬ್ಬರ ಯೋಚನಾ ಲಹರಿಯೂ ಒಂದೇ ರೀತಿ ಇದ್ದ ಕಾರಣ ಅವರ ತುಟಿಯ ಚಲನೆಯಿಂದಲೇ ನನಗೆ ಅವರ ಮಾತು ಅರ್ಥವಾಗುತ್ತಿತ್ತು. ಇಡೀ ದಿನ ನಿದ್ರಿಸುವುದು ನೋಡಿದಾಗ ಕೋಮ ಸ್ಥಿತಿಗೆ ಹೋಗಬಹುದೇನೋ ಎಂದು ಡಾಕ್ಟರು ಯೋಚಿಸುತ್ತದ್ದರು. ಸಂಜೆಯವರೆಗೂ ಎಚ್ಚರವಾಗದೆ ಇದ್ದಾಗ ಹಿರಿಯರ ಬಾಯಿಗೆ ನೀರು ಬಿಡುವ ಶಾಸ್ತ್ರಗಳೂ ಶುರುವಾದವು. ನನಗೆ ಸಿಟ್ಟು. ಅಪ್ಪ ನಿದ್ರೆ ಮಾಡುತ್ತಿದ್ದರೂ ಸುತ್ತ ಮುತ್ತ ನಡೆಯುವುದು ಅವರಿಗೆ ತಿಳಿಯುತ್ತಿದೆ ಎಂದು ನನಗೆ ಗೊತ್ತಿತ್ತು. ಕಣ್ಣು ಮುಚ್ಚಿಕೊಂಡು ಹೊರಗೆ ನಡೆಯುವುದನ್ನು ಅನುಭವಿಸಿ ಮನಸ್ಸಿನಲ್ಲಿ ನಗುವುದು ಅವರ ಅಭ್ಯಾಸ. ಚಿಕ್ಕಪ್ಪ ಬಂದ ಕೂಡಲೇ, “ನಿನಗೆ ಏನ್ ಹೇಳಿದ್ದೆ. “ಇವತ್ತು ನನ್ನ ಕೊನೆ ದಿನ ಅಂತ ಹೇಳಿರಲಿಲ್ಲವಾ” ಎಂದು ಅಪ್ಪ ನಗುತ್ತಾ ಹೇಳಿದಾಗ, ತಮ್ಮ ನೀರು ಬಿಡುವ ಶಾಸ್ತ್ರ ಅವರಿಗೆ ತಿಳಿಯಿತೆಂದು ಎಲ್ಲರಿಗೂ ತಬ್ಬಿಬ್ಬು! ಮರುದಿನ ಬಂದ ಅವರ ಆಪ್ತರೊಬ್ಬರು “ಹೆದರಬೇಡವೋ” ಎಂದು ಹೇಳಿದಾಗ “ನಿನಗೆ ಧೈರ್ಯ ಬೇಕಿದ್ದರೆ ಹೇಳು ಸ್ವಲ್ಪ ಕೊಡುತ್ತೇನೆ” ಎಂದಾಗ ಅವರ ಕಣ್ಣಲ್ಲಿ ಕಣ್ಣೀರು. ಸಾವನ್ನು ಸ್ವಾಗತಿಸಲು ಅಪ್ಪ ಮನಃಪೂರ್ವಕವಾಗಿ ತಯಾರಾಗಿಯೇ ಇದ್ದರು.
ಎಂಟನೆಯನೆಯ ದಿನ ಅಪ್ಪ ದೂರದಲ್ಲಿ ಮಲಗಿದ್ದಲ್ಲಿಯೇ ನಿರ್ದೇಶನ ಕೊಟ್ಟು ನಡೆಸುತ್ತಿದ್ದ ತೋಟದ ಕೆಲಸಗಾರರು ಆಸ್ಪತ್ರೆಗೆ ಬಂದಿದ್ದರು. ಅವರ ಬಳಿ “ನನ್ನ ತೋಟವನ್ನು ಮಾತ್ರ ಚೆನ್ನಾಗಿ ನೋಡಿಕೊಳ್ಳಿ.” ಎಂದು ಕೈ ಮುಗಿದು ಕಣ್ಣೀರು ಹಾಕಿ ಹೇಳಿದಾಗ ನನ್ನ ಕಣ್ಣುಗಳೂ ಒದ್ದೆಯಾದವು. “ಒಂದು ಕೊಟ್ಟರೆ ಹತ್ತು ವಾಪಾಸು ಕೊಡುವ ಗುಣ ಬರೀ ಭೂಮಿಗೆ ಮಾತ್ರ ಇರುವುದು” ಎಂದು ಯಾವಾಗಲೂ ಕೃಷಿಯ ಬಗ್ಗೆ ಎಲ್ಲರಿಗೂ ಆಸಕ್ತಿ ಬೆಳೆಸಲು ಪ್ರಯತ್ನಿಸುತ್ತಿದ್ದ ಅವರ ಮಾತು ನನಗೆ ನೆನಪಿಗೆ ಬಂತು.
ಆವತ್ತು ಅಪ್ಪ ಇನ್ನು ಜಾಸ್ತಿ ಬದುಕುವುದಿಲ್ಲ ಎಂದು ಖಚಿತವಾಗಿತ್ತು. ಇಷ್ಟರ ಮಧ್ಯೆ ಊರಿನ ಒಂದು ಸಂಘದವರು ಅಪ್ಪನಿಗೆ “ವರ್ಷದ ಅತ್ಯುತ್ತಮ ಕೃಷಿಕ” ಎಂದು ಸನ್ಮಾನ ಮಾಡುವುದಕ್ಕೆ, ಆಸ್ಪತ್ರೆಗೆ ಹಾರ ಮತ್ತು ಪಾರಿತೋಷಕ ತೆಗೆದುಕೊಂಡು ಬಂದಿದ್ದರು. ಏಳಲು ಆಗದಿದ್ದರೂ ನಿದಾನವಾಗಿ ಎದ್ದು ಹಾರ ಹಾಕಿಸಿಕೊಂಡು ಅಪ್ಪ ಹೆಮ್ಮೆಪಟ್ಟರು.
ಮನೆಯ ಹತ್ತಿರದಲ್ಲಿದ್ದ ಅಷ್ಟೊಂದು ಅನುಕೂಲಸ್ಥರೇನಲ್ಲದ ಮುದುಕರೊಬ್ಬರು ಪ್ರತಿದಿನ ಆಸ್ಪತ್ರೆಗೆ ನಡೆದುಕೊಂಡು ಬಂದು ಅಪ್ಪನನ್ನು ನೋಡಿ ಹೋಗುತ್ತಿದ್ದರು. ವಾಪಸು ಬನ್ನಿ ಎಂದು ಅಪ್ಪನಿಗೂ, ವಾಪಸು ಕರೆತನ್ನಿ ಎಂದು ನಮಗೂ ಪ್ರತಿದಿನ ಹೇಳುತ್ತಿದ್ದರು. ಅವರಿಗೆ ಐವತ್ತು ರೂಪಾಯಿ ಕೊಡು ಎಂದು ನನ್ನಿಂದ ಆ ಮುದುಕರಿಗೆ ದುಡ್ಡು ಕೊಡಿಸಿದರು.
ಆ ರಾತ್ರಿ ಡ್ಯೂಟಿಯ ನರ್ಸ್ ತನ್ನ ಮಗನ ವಿಧ್ಯಾಭ್ಯಾಸಕ್ಕಾಗಿ ಕೆಲಸ ಊರು ಬಿಟ್ಟು ಪರವೂರಿಗೆ ಹೊರಡುವ ನಿರ್ಧಾರ ಮಾಡುತ್ತಿದ್ದೇನೆ ಎಂದು ಅಮ್ಮನೊಂದಿಗೆ ಹೇಳಿಕೊಂಡಾಗ, ಮಂಪರಿನಲ್ಲಿದ್ದ ಇವರು “ಮಕ್ಕಳು ಓದುತ್ತಾರೋ ಬಿಡುತ್ತಾರೋ. ಓದುವವರು ಎಲ್ಲಿದ್ದರೂ ಇದ್ದ ಅವಕಾಶಗಳನ್ನೇ ಬಳಸಿಕೊಂಡು ಬೆಳೆಯುತ್ತಾರೆ. ಓದದೆ ಇರುವವರಿಗೆ ಯಾವ ಅವಕಾಶ ಸಿಕ್ಕಿದರೂ ಅಷ್ಟೇ..ಅವರಿಗಾಗಿ ನಮ್ಮ ನೆಲೆ ಕಳೆದುಕೊಳ್ಳುವುದು ಜಾಣತನವಲ್ಲ.” ಎಂದು ಬುದ್ಧಿಮಾತು ಹೇಳಿದ್ದರು.
ಅಪ್ಪ ಸ್ವತಃ ಅವರ ಕಣ್ಣುಗಳನ್ನು ದಾನಮಾಡಬೇಕೆಂದು ಆಸೆಪಟ್ಟಿದ್ದರು. ಆದರೆ ತೀರಿಕೊಂಡ ನಂತರ ಆರುಗಂಟೆಗಳ ಒಳಗಾಗಿ ಕಣ್ಣುಗಳನ್ನು ತೆಗೆಯದಿದ್ದರೆ ಅದನ್ನು ಬೇರೆಯವರಿಗೆ ಉಪಯೋಗಪಡಿಸಲು ಆಗುವುದಿಲ್ಲ ಎಂದು ತಿಳಿದಿದ್ದರಿಂದ,ಮೊದಲಾಗಿ ಕಣ್ಣಾಸ್ಪತ್ರೆಯವರಿಗೆ ತಿಳಿಸಬೇಕಿತ್ತು. ಸಾಯುವ ಮೊದಲೇ ಸಾವಿನ ಬಗ್ಗೆ ಮಾತನಾಡಲು ಎಲ್ಲರಿಗೂ ಹಿಂಜರಿಕೆ. ಈ ವಿಷಯ ಚಿಕ್ಕಪ್ಪನನ್ನು ಕೇಳಿದಾಗ “ನಾನು ಪಾಲಿಸುವ ಶಾಸ್ತ್ರಗಳ ನಿಯಮದ ಪ್ರಕಾರ, ದೇಹ ದಹನ ಮಾಡುವಾಗ ಇರುವ ಸ್ಥಿತಿಯಲ್ಲೇ ಮರುಜನ್ಮ, ಹಾಗಾಗಿ ನಾನು ಇದಕ್ಕೆ ಸಮ್ಮತಿಸುವುದಿಲ್ಲ. ಇನ್ನು ನಿನ್ನಿಷ್ಟ” ಎಂದರು. ಅಮ್ಮನನ್ನು ಕೇಳಿದಾಗ ದೊಡ್ಡಮ್ಮನನ್ನು ಕೇಳು. ಅವರ ಮಗ, ಅವರು ನಿರ್ಧರಿಸಬೇಕು ಎಂದು ತಿಳಿಸಿದರು. ಎಂಬತ್ತು ವರ್ಷ ವಯಸ್ಸಿನ ದೊಡ್ಡಮ್ಮನ ಬಳಿ ಅವರ ಕರುಳಿನ ಕುಡಿಯ ಸಾವಿನ ಬಗ್ಗೆ ಮಾತನಾಡುವುದು, ಕಣ್ಣು ದಾನ ಮಾಡುವುದರ ಬಗ್ಗೆ ಕೇಳುವುದು ಸುಲಭವಾಗಿರಲಿಲ್ಲ! ಜೊತೆಗೆ ಹಳೆಯ ಕಾಲದವರು. ಶಾಸ್ತ್ರಗಳ ಪ್ರಕಾರ ನಡೆಯುವವರು. ಧೈರ್ಯಮಾಡಿ ಒಬ್ಬರನ್ನೇ ಕೂರಿಸಿಕೊಂಡು ಕೇಳಿದೆ. ಚಿಕ್ಕಪ್ಪ ಹೀಗೆ ಅಭಿಪ್ರಾಯ ಪಡುತ್ತಾರೆ ಆದರೆ ದಾನ ಮಾಡಿದರೆ ಇನ್ನೊಬ್ಬರು ಆ ಕಣ್ಣುಗಳಲ್ಲಿ ಈ ಬೆರಗಿನ ಜಗವನ್ನು ನೋಡಬಹುದು. ನಿಮ್ಮ ಅಭಿಪ್ರಾಯದಂತೆ ನಡೆಯುತ್ತೇವೆ ಎಂದಾಗ, “ಜೀವ ಹೋದಮೇಲೆ ದೇಹ ಕಟ್ಟಿಗೆಯಂತೆ ಇವನ ಕಣ್ಣುಗಳಿಂದ ಬೇರೆಯವರು ನೋಡಬಹುದಾದರೆ, ದಾನ ಮಾಡುವುದಕ್ಕೆ ನನ್ನ ಅಭ್ಯಂತರವೇನಿಲ್ಲ ” ಎಂದವರು ಹೇಳಿದಾಗ, ಪ್ರತಿದಿನ ಅವರು ಭಗವದ್ಗೀತೆ ಒದುತ್ತಿದ್ದುದು ಸಾರ್ಥಕವೆನಿಸಿ ಮನಸ್ಸು ಭಾರವಾಯಿತು.
ಹೀಗೆ ಒಂಬತ್ತು ದಿನಗಳು ಕಳೆದವು. ಹತ್ತನೆಯ ದಿನ ಹಗಲೇ ಮಲಗಿದ್ದವರೂ ರಾತ್ರಿಯೂ ಏಳಲಿಲ್ಲ. ಕೈ ಮುಟ್ಟಿದರೆ ನೋವು ಎಂದು ಕೂಗುತ್ತಿದ್ದರು. ಕಣ್ಣು ಬಿಟ್ಟರೆ ದೃಷ್ಟಿ ಮೇಲೆ ಹೋಗಲು ಶುರುವಾಗಿದ್ದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಹನ್ನೊಂದನೇ ರಾತ್ರಿ ನಾಡಿಬಡಿತ ನೋಡಿದ ನರ್ಸ್ ಖತೀಜಾ ಇನ್ನು ಹೆಚ್ಚು ಹೊತ್ತಿಲ್ಲ, ಕರೆಸುವವರನ್ನೆಲ್ಲ ಕರೆಸಿ ಎಂದಾಗ ಮನೆಯವರೆಲ್ಲ ಬಂದು ಆಸ್ಪತ್ರೆ ರೂಮಿನಲ್ಲಿ ಕಾದು ಕುಳಿತರು. ಭಗವದ್ಗೀತೆ, ವಿಷ್ಣು ಸಹಸ್ರನಾಮ ಪಠಣ ಕೆಲವರು ಶುರುಮಾಡಿದರು. ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಅಪ್ಪನ ಅಮ್ಮ ಕಾಫಿ ಮಾಡಿಕೊಂಡು ಚಿಕ್ಕಪ್ಪನೊಂದಿಗೆ ಆಸ್ಪತ್ರೆಗೆ ಬಂದರು. ಅಪ್ಪನ ಅಕ್ಕ, ತಂಗಿ, ಇಬ್ಬರು ತಮ್ಮಂದಿರು ಮತ್ತು ಅವರ ಹೆಂಡತಿಯರು, ಹೆಣ್ಣು ಕೊಟ್ಟ ಅತ್ತೆ ಮಾವ, ಭಾವ, ಮೈದುನ, ನಾದಿನಿ, ಮಕ್ಕಳು, ಅಳಿಯ ಹೀಗೆ ಎಲ್ಲ ಬಂಧು-ಭಾಂಧವರ ಎಲ್ಲರ ನಡುವೆ ಅಪ್ಪ ನಿಸ್ತೇಜವಾಗಿ ಮಲಗಿದ್ದರು.
ನಾಲಕ್ಕೂವರೆ ಗಂಟೆರ ಸುಮಾರಿಗೆ ನರ್ಸ್ ಖತೀಜ ಬಂದು ಪರೀಕ್ಷೆ ಮಾಡಿ, ಇನ್ನು ಹೆಚ್ಚು ಹೊತ್ತಿಲ್ಲ…ನೀರು ಬಿಡಬಹುದು ಎಂದು ತಿಳಿಸಿದಳು. ಎಲ್ಲರೂ ಅಪ್ಪನ ಹಾಸಿಗೆಯ ಸುತ್ತ ನಿಂತು ಅವರನ್ನು ಬಲಕೈಯಿಂದ ಮುಟ್ಟಿಕೊಂಡು ವಿಷ್ಣು ಸಹಸ್ರನಾಮ ಪಠಣ ಮಾಡುತ್ತಿದ್ದೆವು. ಅಪ್ಪನ ಉಸಿರಾಟದ ನಡುವಿನ ಅಂತರ ಜಾಸ್ತಿಯಾಗುತ್ತಾ ಹೋಯಿತು. ಪ್ರತೀ ಉಸಿರು ಮುಗಿದಾಗಲೂ ಇನ್ನೊಂದು ಉಸಿರು ತೆಗೆದುಕೊಳ್ಳುವುದನ್ನು ಕಾಯುತ್ತಿದ್ದೆವು. ಕಾಯುತ್ತಲೇ ನಿಂತಿದ್ದೆವು. ಅವರು ಇನ್ನೊಂದು ಉಸಿರು ತೆಗೆದುಕೊಳ್ಳಲಿಲ್ಲ. ಬೆಳಗಿನ ಮುಂಜಾವಿನ ಶಾಂತತೆ ಆವರಿಸಿತ್ತು ಎಲ್ಲೂ ಸಾವಿನ ಕಳೆಯಿರಲಿಲ್ಲ. ಡಾಕ್ಟರು ಬಂದು ಜೀವ ಹೋಗಿದ್ದನ್ನು ಖಚಿತಪಡಿಸಿದರು. ಹತ್ತೊಂಬತ್ತು ವರ್ಷಗಳ ಚಲಿಸಲಾಗದ ಬದುಕನ್ನು ಅಪ್ಪ ಮುಗಿಸಿದ್ದರು. ಎಲ್ಲರೂ ಅಳಲು ಶುರುಮಾಡಿದರೆ, ನನಗೆ ಏನೋ ಕೆಲಸ ಮುಗಿಸಿದ ನಿಶ್ಚಿಂತೆ. ಸಾವಿನ ಬಗ್ಗೆ ನನಗಿದ್ದ ಹೆದರಿಕೆ ಅದಾಗಲೇ ಹೊರಟುಹೊಗಿತ್ತು. ಸಾವೆಂದರೆ ನೋವಿನ ಅಂತ್ಯ,ಅದೊಂದು ಪ್ರಶಾಂತ ಅನುಭೂತಿ ಎನ್ನುವ ಭಾವನೆ ಮನದಲ್ಲಿ ಬಂದಿತ್ತು. ಕಣ್ಣಲ್ಲಿ ಒಂದು ಹನಿ ನೀರೂ ಬರಲಿಲ್ಲ. ಸಮಾಧಾನ ಮಾಡಲು ಬಂದವರಿಗೆ ಕಸಿವಿಸಿಯಾಗುವಷ್ಟು ಮನಸ್ಸು ಗಟ್ಟಿಯಾಗಿತ್ತು.
ಅಪ್ಪನ ಆಸೆಯಂತೆ ಅವರ ಕಣ್ಣುಗಳನ್ನು ದಾನ ಮಾಡಲು ಆಸ್ಪತ್ರೆಗೆ ಫೋನು ಮಾಡಿ, ಡಾಕ್ಟರು ಬಂದು ಅವರ ಕಣ್ಣು ತೆಗೆದುಕೊಂಡು ದೇಹವನ್ನು ನಮಗೆ ಕೊಟ್ಟಾಗ, ಅಪ್ಪನ ಮುಖದಲ್ಲಿ ಮುಗುಳ್ನಗೆ. ಮುಖದಲ್ಲಿ ನೋವಿನ ಕಳೆಯಿದ್ದಂತೆ ಇರಲಿಲ್ಲ. ತುಟಿಗಳು ಆಗಲೂ ಮುಗುಳ್ನಗುತ್ತಿರುವಂತೆಯೇ ನನಗೆ ಕಾಣುತ್ತಿದ್ದವು. ದೇಹವನ್ನು ಮನೆಗೆ ಕೊಂಡೊಯ್ದು ಕ್ರಿಯಾ ಕರ್ಮಗಳನ್ನು ಮುಗಿಸಿ ಬೆ೦ಗಳೂರಿಗೆ ಹೊರಟಾಗ ಮನಸ್ಸು ಹತ್ತೊಂಬತ್ತು ವರ್ಷಗಳ ಹಿಂದೆ ಚಲಿಸಲಾರಂಬಿಸಿತ್ತು…
“ಪ್ರೀತಿಸುವುದೆಂದರೆ ಬರೀ ಪೋಷಿಸಿ ರಕ್ಷಿಸುವುದಲ್ಲ ಜೀವನದಲ್ಲಿ ಎದುರಾಗುವ ಪ್ರತಿ ಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಆತ್ಮಾಭಿಮಾನವನ್ನು ಕಳೆದುಕೊಳ್ಳದೆ ಎದುರಿಸುವಂತೆ ಕಲಿಸುವುದೂ ಹೌದು” ಎಲ್ಲೋ ಓದಿದ ನೆನಪು.
ಅಪ್ಪ ಹುಟ್ಟಿದ್ದು ಬೆಳೆದದ್ದು ಒಂದು ಕುಗ್ರಾಮದಲ್ಲಿ. ಮೂರು ಕಿಲೋ ಮೀಟರ್ ಸುತ್ತಳತೆಯಲ್ಲಿ ಅಜ್ಜನ ಅಣ್ಣನ ಮನೆಯೊಂದರ ಹೊರತು ಇನ್ಯಾವುದೂ ಮನೆಗಳಿರಲಿಲ್ಲ. ಅಜ್ಜನ ಆರು ಜನ ಮಕ್ಕಳಲ್ಲಿ ಇವರು ಎರಡನೆಯವರು. ಹಿರಿಯ ಮಗ,ಅಜ್ಜನಿಗೆ ಸಾಕಷ್ಟು ಗದ್ದೆ ತೋಟಗಳು ಇದ್ದವು. ಕೊಟ್ಟಿಗೆ ತುಂಬಾ ದನ ಕರುಗಳು. ಎಮ್ಮೆಗಳು. ಊಳಲು ಎರಡು ದೊಡ್ಡ ಜೋಡೆತ್ತುಗಳು. ಕೆಲಸಗಾರರ ಕೊರತೆ ಇದ್ದಿದ್ದರಿಂದ ಅಪ್ಪ ಚಿಕ್ಕಪ್ಪ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತಂತೆ. ಹಾಗಾಗಿ ವ್ಯವಸಾಯವೇ ಉದ್ಯೋಗವಾಯಿತು. ಬೆಳಿಗ್ಗೆ ಎದ್ದು ಸ್ನಾನ ಮಾಡಿ ಕೆಲಸಕ್ಕೆಂದು ಇಟ್ಟ ದೊಗಲೆ ಅಂಗಿ ಚಡ್ಡಿಗಳನ್ನು ಧರಿಸಿ, ತಲೆಗೊಂದು ರುಮಾಲು ಸುತ್ತಿ ಹೊರಟರೆ, ವಾಪಸು ಬರುತ್ತಿದ್ದುದು ಸಂಜೆಯೇ! ಸಂಜೆ ಬಂದು ಪುನಃ ಸ್ನಾನ ಮಾಡಿ ತಲೆ ಬಾಚಿ ರಾತ್ರಿಯ ಊಟಕ್ಕೆ ಬರಲು ತಯಾರಾಗುವಾಗ ಅವರ ಜೊತೆ ನಾನಿರುತ್ತಿದ್ದೆ.
ಊಟದ ಮನೆಯಲ್ಲಿ ಮೊದಲು ಅಜ್ಜ, ಅವರ ಪಕ್ಕದಲ್ಲಿ ಅಪ್ಪ. ಆಮೇಲೆ ದೊಡ್ಡ ಚಿಕ್ಕಪ್ಪ. ನಂತರ ಚಿಕ್ಕ ಚಿಕ್ಕಪ್ಪ. ಅವರಿಗೆ ಎದುರು ಇನ್ನೊಂದು ಪಂಕ್ತಿಯಲ್ಲಿ ಹೆಂಗಸರು. ರಾತ್ರಿ ಊಟವಾದಮೇಲೆ ಮನೆಯ ಹಜಾರದಲ್ಲಿ ಅಜ್ಜನ ಜೊತೆ ಕುಳಿತು ಎಲ್ಲರ ಹರಟೆ, ಸಮಾಲೋಚನೆ ನಡೆಯುತಿತ್ತು
“ನಮ್ಮ ಊರು ಊರು ಮುಳುಗಡೆ ಆಗುತ್ತಂತೆ ..!” ಎಂಬ ವಂದಂತಿ ನಿಜವಾಗಲು ಕೇವಲ ಐದು ವರ್ಷ ಸಾಕಾಯಿತು. ವಾರಾಹಿ ವಿದ್ಯುಚ್ಚಕ್ತಿ ಉತ್ಪಾದನ ಘಟಕಕ್ಕಾಗಿ ಹಾಕಿದ ಆಣೆಕಟ್ಟಿನಿಂದ ನಮ್ಮ ಜಮೀನು ಮನೆ ನೀರು ಪಾಲಾಗಿ, ಎಲ್ಲರೂ ಪೇಟೆಗೆ ಬಂದು ನೆಲೆಯೂರಿದರು. ಮುಂದೇನು ಮಾಡುವುದು ಎಂಬುದು ಎಲ್ಲರ ಮುಂದಿದ್ದ ಪ್ರಶ್ನೆ! ಅಪ್ಪ ಒಂದು ಅಂಗಡಿ ಹಾಕುವ ನಿರ್ಧಾರ ಮಾಡಿದರು. ಮನೆಯ ಹತ್ತಿರದಲ್ಲೇ ಒಂದು ಸ್ಟೇಷನರಿ ಅಂಗಡಿ ಹಾಕಿ ನಿರ್ವಹಿಸಲು ಶುರುಮಾಡಿ ಮೂರು ತಿಂಗಳಾಗಿತ್ತು ಅಷ್ಟೇ. ಜ್ವರ ಶುರುವಾಯಿತು. ಹದಿನೈದು ದಿನವಾದರೂ ಕಡಿಮೆಯಾಗಲಿಲ್ಲ. ನಾವಿದ್ದ ಊರಿನಲ್ಲಿದ್ದ ಡಾಕ್ಟರು ಪರವೂರಿನಲ್ಲಿದ್ದ ದೊಡ್ಡ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಲು ಹೇಳಿದರು.
ಹತ್ತಿರದ ಸಂಬಂಧಿ ಹುಡುಗನೊಬ್ಬನನ್ನು ಜೊತೆಗೆ ಕರೆದುಕೊಂಡು ಹೋಗಿ ದೊಡ್ಡ ಆಸ್ಪತ್ರೆಗೆ ಅಡ್ಮಿಟ್ ಆದರು. ಅಲ್ಲಿ ಒಂದಾದ ಮೇಲೊಂದು ಪರೀಕ್ಷೆಗಳ ಸುರಿಮಳೆ ಶುರುವಾಯಿತು. ವ್ಹೊಲ್ ಬಾಡಿ ಸ್ಕಾನ್ನಿಂಗ್ ಮುಂತಾದ ದೊಡ್ಡ, ಹೆಚ್ಚು ಹಣ ಬೇಕಾಗುವ ಪರೀಕ್ಷೆಗಳೆಲ್ಲ ಮಾಡಿ ಮುಗಿದಿತ್ತಂತೆ. ಆರೋಗ್ಯದಲ್ಲಿ ಏನೂ ತೊಂದರೆ ಇರಲಿಲ್ಲ. ಆರನೇ ದಿನ ಬಂದ ಡಾಕ್ಟರ್ ಒಬ್ಬರು ನಾಳೆ ಒಂದು ಚಿಕ್ಕ ಪರೀಕ್ಷೆ ಇದೆ ಮುಗಿಸಿಕೊಂಡು ಡಿಸ್ಚಾರ್ಜ್ ಆಗಬಹುದು ಎಂದು ಹೇಳಿದರಂತೆ. ಒಂದು ದಿನದಲ್ಲಿ ಇನ್ನೇನು, ಅದೂ ದೊಡ್ಡದೆಲ್ಲ ಮುಗಿದಿದೆ ಎಂದು ನಿಶ್ಚಿಂತೆಯಿಂದ ಇದ್ದರಂತೆ ಅಪ್ಪ. ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಪರೀಕ್ಷಾ ಕೊಡಿಗೆ ಬರಲು ಡಾಕ್ಟರ್ ತಿಳಿಸಿದ್ದರು ಅಪ್ಪ ಹೋಗಿ ಕಾಯುತ್ತಿದ್ದಾರೆ, ಒಂಬತ್ತೂವರೆ ಗಂಟೆ ಆದರೂ ಯಾರೂ ಅಲ್ಲಿ ಇರಲಿಲ್ಲ. ಸುಮಾರಿಗೆ ನರ್ಸ್ ಒಬ್ಬರು, ಇಬ್ಬರು ತರಬೇತಿಯಲ್ಲಿದ್ದ ಕೊಠಡಿಗೆ ಎಮ್. ಎಸ್. ಮಾಡುತ್ತಿದ್ದ ಲೇಡಿ ಡಾಕ್ಟರ್ ಗಳು ಬಂದು ಅಪ್ಪನ ಬಳಿ ಒಂದು ಫಾರ್ಮಿಗೆ ಸೈನ್ ಮಾಡಿಸಿಕೊಂಡು ಪರೀಕ್ಷೆಗೆ ತಯಾರು ಮಾಡಿದರು.
ಅಷ್ಟರಲ್ಲಿ ಬಂದ ಅವರ ಚೀಫ್ ಡಾಕ್ಟರ್ “ಇನ್ನೂ ತಯಾರಿ ಆಗಿಲ್ಲವಾ..?” ಎಂದು ಸಿಡುಕತೊಡಗಿದರು. ಅಪ್ಪನನ್ನು ಪರೀಕ್ಷಾ ಟೇಬಲ್ ಮೇಲೆ ಮಲಗಿಸಿ ಪರೀಕ್ಷೆ ಶುರು ಮಾಡಿದರಂತೆ. ಲೇಡಿ ಡಾಕ್ಟರ್ ಚೀಫ್ ಡಾಕ್ಟರ್ ನ ಸೂಚನೆಯಂತೆ, ಅಪ್ಪನ ತೊಡೆಯ ಜಾಗದಿಂದ ತಲೆಕೂದಲಿನಂತಹ ಒಂದು ತೆಳು ವಯರನ್ನು ದೇಹದೊಳಗೆ ನುಗ್ಗಿಸಿ ರಕ್ತನಾಳಗಳಲ್ಲಿ ಅದನ್ನು ಹೃದಯದ ಕಡೆಗೆ ಚಲಿಸುವಂತೆ ಮಾಡುವುದು ಅಪ್ಪನಿಗೆ ಪಕ್ಕದಲ್ಲಿದ್ದ ಟಿವಿಯಂತಹ ಸ್ಕ್ರೀನ್ ನಲ್ಲಿ ಕಾಣುತ್ತಿತ್ತಂತೆ. ಅಪ್ಪನಿಗೆ ಯಾರೋ ತಮ್ಮನ್ನು ಕಾಲ ಬದಿಯಿಂದ ಮತ್ತು ತಲೆಯ ಕಡೆಯಿಂದ ಎರಡು ಭಾಗ ಮಾಡಲು ಎಳೆಯುತ್ತಿದ್ದಂತೆ ಅನ್ನಿಸಲು ಶುರುವಾಯಿತು ಕೂಗಿದರು. ಅಷ್ಟರಲ್ಲಿ ಆ ಚೀಫ್ ಡಾಕ್ಟರ್ “ರಿಮೊವ್ ಆಲ್” ಎಂದು ಜೋರಾಗಿ ಹೇಳಿದರು.
ಅಜ್ಜ , ದೊಡ್ಡಮ್ಮ ಆದಿಯಾಗಿ ಮನೆಯಲ್ಲಿ ಎಲ್ಲರೂ ಟೆನ್ಶನ್ನಲ್ಲಿ ಇದ್ದಂತೆ ಭಾಸವಾಯಿತು. ಅಮ್ಮನ ಮುಖ ಬಾಡಿತ್ತು. ಎಲ್ಲರೂ ದೂರದೂರಿನಲ್ಲಿದ್ದ ದೊಡ್ಡಾಸ್ಪತ್ರೆಗೆ ಅಪ್ಪನನ್ನು ನೋಡಲು ಹೊರಡುವುದೆಂದು ನಿರ್ಧಾರವಾಗಿತ್ತು .ನಮಗೋ ತಾನಾಗೇ ಒದಗಿಬಂದ ತಕ್ಷಣದ ಪ್ರವಾಸದ ಅವಕಾಶ ಊಹಿಸದೇ ಬಂದೊದಗಿದ್ದು ಸಂತಸ ತಂದಿತ್ತು. ಆದರೂ ಎಲ್ಲರ ಕಣ್ಣಲ್ಲಿ ನಮ್ಮನ್ನು ನೋಡಿ ಒಂದು ರೀತಿಯ ಕನಿಕರದ ಭಾವನೆ! ಯಾಕೆ? ಎಂದು ಕೇಳುವಷ್ಟು ಬುದ್ದಿ ಬಲಿತಿರಲಿಲ್ಲ. ಎಲ್ಲರೂ ಆಸ್ಪತ್ರೆಗೆ ಹೋದೆವು. ಅಪ್ಪ ನಾಲ್ಕು ರೋಗಿಗಳಿದ್ದ ಜನರಲ್ ವಾರ್ಡಿನಲ್ಲಿ ಹಾಸಿಗೆ ಮೇಲೆ ಮಲಗಿದ್ದರು. ನನ್ನನ್ನು ನನ್ನ ತಮ್ಮನನ್ನು ನೋಡಿ ಎಲ್ಲರೂ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಏನೆಂದೇ ಗೊತ್ತಾಗಲಿಲ್ಲ. ಕೊನೆಗೆ ಯಾರೋ ಉದ್ಗರಿಸಿದರು “ ಕಾಲು ಒಂದು ದಿನದಲ್ಲೂ ಬರಬಹುದಂತೆ. ಒಂದು ವರ್ಷವೂ ಆಗಬಹುದಂತೆ”!.
ಚೀಫ್ ಡಾಕ್ಟರ್ “ರಿಮೂವ್ ಆಲ್ “ ಎಂದು ಕೂಗಿದ ಕೂಡಲೇ ಲೇಡಿ ಡಾಕ್ಟರ್ ಆಂಜಿಯೋಗ್ರಾಮ್ ಮಾಡಲು ದೇಹದಲ್ಲಿ ತೂರಿಸಿದ್ದ ತಲೆಗೂದಲಿನಂತಹ ವಯರನ್ನು ವಾಪಸು ಎಳೆದಂತೆ ಕಾಣಿಸಿತಂತೆ. ತಕ್ಷಣವೇ ಅಪ್ಪನಿಗೆ ಹೊಟ್ಟೆಯಿಂದ ಕೆಳಗಿನ ದೇಹ ಮರಗಟ್ಟಲು ಶುರುವಾದಂತೆ ಅನುಭವವಾಯಿತಂತೆ. ಅವರನ್ನು ಪುನಃ ಅವರು ಮೊದಲಿದ್ದ ವಾರ್ಡಿಗೆ ಕಳುಹಿಸಿದರಂತೆ. ಮರುದಿನ ಬಂದು ಅವರನ್ನು ಪರೀಕ್ಷಿಸಿದ ನರವೈದ್ಯ ತಜ್ಞರು ಅಪ್ಪನಿಗೆ ಪ್ಯಾರಾಪ್ಲೀಜಿಯ ಅಗಿದೆಯೆಂದು
ತಿಳಿಸಿದರಂತೆ. ನಮಗೆ ಗೊತ್ತಾಗಿದ್ದು ಮಾತ್ರ ಒಂದು ದಿನ ಬಿಟ್ಟು ಆಸ್ಪತ್ರೆಗೆ ಅಪ್ಪನ ಜೊತೆ ಹೋಗಿದ್ದ ನಮ್ಮ ಸಂಬಂದಿ ಫೋನ್ ಮಾಡಿ ತಿಳಿಸಿದಾಗಲೇ. ಮನೆಯವರಿಗೆಲ್ಲಾ ಈ ರೀತಿ ನಿರೀಕ್ಷಿಸದೆ ಆದ ಅವಗಢದಿಂದ ಶಾಕ್ ಆಗಿತ್ತು .
ಜಮೀನು ಮನೆ ಕೆಲಸಗಳಲ್ಲಿ ಸಮಯ ಸಿಗುವುದು ಕಷ್ಟಸಾಧ್ಯವಾದ್ದರಿಂದ ಅಪ್ಪ ನಮ್ಮನ್ನು ಹೊರಗೆ ಎಲ್ಲಿಗೂ ಕರೆದುಕೊಂಡು ಹೋಗುತ್ತಿರಲಿಲ್ಲ. ಅವರ ತಂಗಿಯೊಬ್ಬರು ಮದ್ರಾಸಿನಲ್ಲಿ ಇದ್ದರು. ಅವರ ಮನೆಗೆ ಹತ್ತು ದಿನಗಳ ಮಟ್ಟಿಗೆ ಹೋಗುವುದೆಂದು ನಿರ್ಧಾರವಾಗಿತ್ತು. ಹೋಗುವ ಮೊದಲು ಆರೋಗ್ಯ ಪರೀಕ್ಷೆಗಳನ್ನು ಮುಗಿಸಿಕೊಂಡು ಹೋಗುವುದು ಒಳ್ಳೆಯದೆಂದು ಅಪ್ಪ ನಿರ್ಧರಿಸಿದ್ದರಿಂದ, ಅಪ್ಪ ಆಸ್ಪತ್ರೆ ಸೇರಿದ್ದರು. ನನಗೆ ನನ್ನ ತಮ್ಮನಿಗೆ “ಛೆ ನಮ್ಮ ಮದ್ರಾಸ್ ಟ್ರಿಪ್ ಮುಂದೆಹೊಯಿತಲ್ಲ. ಇನ್ನೆಷ್ಟು ದಿನ ಕಾಯಬೇಕೋ? ಅಪ್ಪನಿಗೆ ಕಾಲು ಬಂದ ಕೂಡಲೇ ಹೊರಡುತ್ತಾರೋ ಇಲ್ಲವೋ” ಎಂಬ ಮುಗ್ಧ ಯೋಚನೆಗಳ ಹೊರತು ಬೇರೇನೂ ತಿಳಿಯುವ ಪ್ರೌಢತೆಯಿರಲಿಲ್ಲ.
ಅಪ್ಪ ಅಮ್ಮ ಆ ಆಸ್ಪತ್ರೆಯಲ್ಲಿ ಉಳಿದರು. ಅಲ್ಲಿಂದ ಎರಡುವರೆಗಂಟೆಯ ದಾರಿ ನಮ್ಮ ಮನೆ. ನಾವು ಅಜ್ಜ ದೊಡ್ಡಮ್ಮ ಚಿಕ್ಕಪ್ಪ ಚಿಕ್ಕಮ್ಮರ ಆಶ್ರಯಕ್ಕೆ ಸೇರಿದೆವು. ಅಮ್ಮ ಅಪ್ಪನೊಂದಿಗೆ ಆಸ್ಪತ್ರೆಯಲ್ಲೇ ಉಳಿದರು. ಪ್ರತಿದಿನ ಬೆಳಿಗ್ಗೆ ಊಟವನ್ನು ಒಂದು ಬಸ್ಸಿನ ಡ್ರೈವರ್ ಹತ್ತಿರ ಕೊಟ್ಟು ಕಳುಹಿಸುತಿದ್ದೆವು. ಅಮ್ಮ ಅಲ್ಲಿ ಬುತ್ತಿಯನ್ನು ತೆಗೆದುಕೊಂಡು ಸಂಜೆ ಖಾಲಿ ಡಬ್ಬಿಯನ್ನು ಪುನಃ ಅದೇ ಬಸ್ಸಿನಲ್ಲಿ ವಾಪಸು ಕಳಿಸುತ್ತಿದ್ದಳು. ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ನೋಡಿಬರುವ ಅನುಕೂಲ ಅಜ್ಜ ನಮಗೆ ಕಲ್ಪಿಸಿದ್ದರು. ಅಜ್ಜ ದೊಡ್ಡಮ್ಮನ , ಚಿಕ್ಕಪ್ಪ ಚಿಕ್ಕಮ್ಮಂದಿರ ಜೊತೆಯಲ್ಲಿದ್ದ ಕಾರಣ ಅಮ್ಮ ಅಪ್ಪ ಇಲ್ಲವೆಂಬ ಭಾವನೆ ಕಾಡಿದ್ದು ಬಹಳ ವಿರಳ.
ಆರು ತಿಂಗಳು ಕಳೆದರೂ ಅಪ್ಪನ ಕಾಲು ಬರಲೇ ಇಲ್ಲ. ಆಸ್ಪತ್ರೆಯ ಚಾರ್ಜು ಮಾತ್ರ ಹೆಚ್ಚಾಗುತ್ತಲೇ ಇತ್ತು . ಕೊನೆಗೆ ಇಲ್ಲಿದ್ದು ಪ್ರಯೋಜನವಿಲ್ಲವೆಂದು ಅರಿತ ಅಪ್ಪ, ವಾಪಸು ಮನೆಗೆ ಬರುವ ನಿರ್ಧಾರ ಮಾಡಿದರು. ಆಸ್ಪತ್ರೆಯಿಂದ ಬರುವಾಗ ಮನೆಯೊಳಗೆ ಓಡಾಡಲು ಅನುಕೂಲವಾಗುವಂತೆ ಒಂದು ವೀಲ್ ಚೇರ್ ಕೊಂಡುಕೊಂಡು, ಆಸ್ಪತ್ರೆಯ ಬಿಲ್ ಪಾವತಿಸಿ ಅಪ್ಪ ಮನೆಗೆ ಬಂದು ಸೇರಿದರು. ಆಸ್ಪತ್ರ್ರೆ ಸೇರುವಾಗ ನೆಡೆದುಕೊಂಡು ಹೋಗಿ ತಾನು ಮಾಡಿಲ್ಲದ ತಪ್ಪಿಗೆ , ಬೇರೊಬ್ಬರ ಪ್ರಯೋಗಕ್ಕೆ, ಹಣದ ದಾಹಕ್ಕೆ ಬಲಿಪಶುವಾಗಿ, ನೆಡೆಯುವ ಸಾಮರ್ಥ್ಯ ಕಳೆದುಕೊಂಡು ಜೀವನವನ್ನು ಎದುರಿಸಲು ಹೊರಟವರಿಗೆ ಪಾವತಿಸಬೇಕಾದ ಬಿಲ್ಲಿನಲ್ಲಿ ಕನಿಷ್ಠ ರಿಯಾಯಿತಿಯನ್ನಾದರೂ ತೋರಿಸುವ ಮನಸ್ಸನ್ನಾಗಲೀ ಬುದ್ದಿಯನ್ನಾಗಲೀ ದೊಡ್ಡಾಸ್ಪತ್ರೆಯವರಿಗೆ ಕೊಡದೇ , ಆ ದೇವರು ಮುಂಬರುವ ಸಂಘರ್ಷಗಳಿಗೆ ಹಾಗೂ ಅದಕ್ಕಾಗಿ ಅಪ್ಪನಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದ್ದ ಹಾಗೂ ಮನಸ್ಥೈರ್ಯಕ್ಕೆ, ಜೀವನಾಸಕ್ತಿಯ ಪ್ರಚೋದನೆಗೆ ನಾಂದಿ ಹಾಡಿದ್ದ.
ನಾವಿದ್ದ ಮನೆಯಲ್ಲಿ ನಮ್ಮ ನಾಲ್ವರ ಅಂದರೆ ಅಪ್ಪ ಅಮ್ಮ ನಾನು ಮತ್ತು ನನ್ನ ತಮ್ಮನದಾಗಿದ್ದ ರೂಮಿನಲ್ಲಿ ಅಪ್ಪನಿಗೆ ಬೇಕಾಗಿದ್ದ ಅನುಕೂಲತೆಗಳಿರಲಿಲ್ಲ. ಇದ್ದ ಮಂಚದ ಪಕ್ಕದಲ್ಲಿ ಒಂದು ಹಾಸಿಗೆ ಹಾಸುವಷ್ಟು ಮಾತ್ರ ಜಾಗವಿದ್ದುದರಿಂದ, ಅಪ್ಪನ ವೀಲ್ ಚೇರ್ ನೆಡೆದಾಡಲು ಸ್ಥಳ ಸಾಕಾಗುತ್ತಿರಲಿಲ್ಲ. ಜೊತೆಗೆ ಅಪ್ಪನಿಗೆ ಅಟ್ಯಾಚ್ಡ್ ಬಾತ್ರೂಮಿನ ಅಗತ್ಯವಿತ್ತು. ಹಾಗಾಗಿ ನಾವಿದ್ದ ಮನೆಯ ಹಿಂಭಾಗದಲ್ಲಿದ್ದ, ಮುಂಚೆ ಮರಕೆಲಸದ ಆಚಾರರು ವಾಸವಾಗಿದ್ದ ರೂಮನ್ನು ಅಪ್ಪನಿಗಾಗಿ ಅನುಕೂಲಪಡಿಸಿದರು.
ಅಪ್ಪ ಹಾಕಿದ್ದ ಅಂಗಡಿಯನ್ನು ಚಿಕ್ಕಪ್ಪ, ಅಮ್ಮ ಮತ್ತು ನಾನು ನೋಡಿಕೊಳ್ಳುತ್ತಿದ್ದೆವು. ಸಂಜೆ ಆಟವಾಡುವ ಸಮಯ ಅಂಗಡಿಯಲ್ಲಿ ಕೂರಲು ಬೇಸರವಾಗುತ್ತಿದ್ದುದು ಸಹಜ. ಅಮ್ಮ, ಅಪ್ಪನ ಮಲ ಮೂತ್ರ ತೆಗೆಯುವುದು, ಸ್ನಾನ ಮಾಡಿಸುವುದು ಮುಂತಾದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಳು. ಮೂರು ಗಂಟೆಗೊಮ್ಮೆ ಕ್ಯಾಥೆಟರ್ ಉಪಯೋಗಿಸಿ ಮೂತ್ರ ತೆಗೆಯಬೇಕಿತ್ತು. ಸಮಯ ಹೋದುದೇ ತಿಳಿಯಲಿಲ್ಲ. ಅಜ್ಜ ಮನೆ ಕಟ್ಟಲು ಶುರುಮಾಡಿ, ಮುಗಿಯುವ ಮೊದಲೇ ಕೊನೆಯುಸಿರೆಳೆದರು. ಕಾಲಾನಂತರ ಪಾಲಾಗಿ, ಅಜ್ಜ ಕಟ್ಟಿದ ಮನೆ ಚಿಕ್ಕಪ್ಪನದಾಯಿತು. ನಾವಿದ್ದ ಊರಿಗೆ 25km ದೂರದಲ್ಲಿದ್ದ ಒ೦ದು ಎಕರೆಗೆ ಸ್ವಲ್ಪ ಕಡಿಮೆಯಿದ್ದ ತೋಟ ಅಪ್ಪನ ಆಸೆಯ೦ತೆ ನಮ್ಮದಾಯಿತು. ಅಪ್ಪ ಸಾಲ ಮಾಡಿ ನಮಗಾಗಿ ನಾವಿದ್ದ ಊರಿನಲ್ಲಿ ಒಂದು ಸೂರು ಕಟ್ಟುವ ನಿರ್ಧಾರ ಮಾಡಿದರು. ಮನೆಯ ನೆಲಕ್ಕೆ ಹಾಕುವ ಕಲ್ಲುಗಳನ್ನು ಆರಿಸಲು ಚಿಕ್ಕಪ್ಪನೊಂದಿಗೆ ನಾನು ಹೋಗುವುದೆಂದು ತಿಳಿಸಿದಾಗ ನನಗೆ ಕುಶಿ. ಬೇರೆಯವರ ಮನೆಯಲ್ಲಿ ನೋಡಿದ್ದ, ಹೊಳೆಯುತ್ತಿದ್ದ ಸೆರಾಮಿಕ್ ಕಲ್ಲುಗಳು ನನ್ನ ಆಯ್ಕೆ. ಅಪ್ಪ ನನ್ನನ್ನು ಕೂರಿಸಿಕೊಂಡು, “ನೋಡು.. ಈ ಸೆರಾಮಿಕ್ ಕಲ್ಲುಗಳು ನನ್ನ ವ್ಹೀಲ್ ಚೀರ್ ಓಡಾಟ ಸಹಿಸಲಾರವು. ನಾಲ್ಕು ದಿನಕ್ಕೆ ಅಲ್ಲಲ್ಲಿ ಗಾಯವಾದರೆ ನೋಡಲು ಚೆನ್ನಾಗಿರುವುದಿಲ್ಲ. ಚೆಂದಕ್ಕಿಂತ ಉಪಯೋಗ ಮುಖ್ಯ. ಇರುವುದರಲ್ಲಿ ಕಡಪ ಕಲ್ಲು ಗಟ್ಟಿಯಂತೆ. ಬಹಳ ಕಾಲ ಬಾಳಿಕೆ ಬರುತ್ತಂತೆ.” ಎಂದೆಲ್ಲ ಹೇಳಿ ನಾನು ಕಡಪ ಕಲ್ಲು ಆಯ್ಕೆ ಮಾಡುವಂತೆ ಮನವೊಲಿಸಿದರು. ಅಪ್ಪನ ಅನಾರೋಗ್ಯ, ಬಡತನ ಅಥವಾ ಸಾಲದ ಕಾರಣ ಅವರ ಬಾಯಲ್ಲಿ ಬರಲಿಲ್ಲ. ಆದ್ದರಿಂದ ನನಗೂ ದುಡ್ಡಿನ ಕೊರತೆಯಿಂದ ಅಪ್ಪ ನನ್ನ ಆಸೆಯನ್ನು ಚಿವುಟಿದರು ಎಂದೂ ಅರಿವಾಗಲಿಲ್ಲ. ನಾನು ತಿಳಿದ ಹಾಗೆ ಇಂತಹ ಎಲ್ಲ ಚಿಕ್ಕ ಚಿಕ್ಕ ವಿಷಯಗಳಲ್ಲಿ, ಅಪ್ಪ ಸಹ ತಮ್ಮ ಪರಿಸ್ಥಿತಿಯಿಂದ ತಾವು ತಮ್ಮ ಆಸೆಗಳನ್ನು ತಡೆಹಿಡಿದದ್ದೆಂದು ಭಾವಿಸಿದ್ದೇ ಇಲ್ಲ. ಇದ್ದಿದ್ದರಲ್ಲಿ ಜಾಣತನದ ಆಯ್ಕೆ ಮಾಡಿದೆ ಎಂದೇ ತಮ್ಮನ್ನು ತಾವೂ ನಂಬಿಸಿಕೊಂಡು ನಡೆಯುತ್ತಿದ್ದರು. ಬೇರೆಯವರೊಡನೆ ತಮ್ಮನ್ನು ಹೋಲಿಸಿ ನೋಡಿದ್ದು ಕಡಿಮೆ. ನಮಗಿಂತ ಕಷ್ಟದಲ್ಲಿದ್ದವರನ್ನು ನೋಡಿ ನಾವೇ ಅದೃಷ್ಟವಂತರು ಎಂದು ಹೇಳುತ್ತಿದ್ದಿದ್ದು೦ಟು. ಕಷ್ಟದಲ್ಲಿ ಇರುವವರನ್ನು ಕಂಡರೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು.
ಪ್ರತಿ ಶನಿವಾರ ದಾನ ಕೇಳಲು ಬರುತ್ತಿದ್ದ ಗಂಟೆ ಹಿಡಿದ ದಾಸಯ್ಯನಿಗೆ ಮನೆಯ ಗೇಟಿನ ಹೊರಗೆ ನಿಲ್ಲಿಸಿ ಹಣ ಕೊಡಬಾರದು. ಗೇಟು ತೆಗೆದು ಒಳಕರೆದು ಒಂದು ಮುಷ್ಟಿಯಾದರೂ ಅಕ್ಕಿಯೊಂದಿಗೆ ಚಿಕ್ಕ ನಾಣ್ಯವೊಂದನ್ನು ಕೊಡಬೇಕೆಂದು ನಮಗೆ ಕಲಿಸಿದ್ದುಂಟು. ಔಷಧಿಗಳನ್ನು ಕೊಳ್ಳಲು ಅಂಗಡಿಗೆ ಹೋದಾಗ ಚಿಲ್ಲರೆ ಇಲ್ಲವೆಂದು ೧೦ ಪೈಸೆ ಬಿಟ್ಟು ಕಳಿಸಿದರೆ, ಪುನಃ ಹೋಗಿ ಕೊಟ್ಟು ಬರುವಂತೆ ಪ್ರೇರೇಪಿಸುತ್ತಿದ್ದರು. ಹಾಗಾಗಿ ನನಗಾಗಲಿ ನನ್ನ ತಮ್ಮನಿಗಾಗಲಿ, ಎಂದೂ ನಮ್ಮ ಅಪ್ಪ ಬೇರೆಯವರಂತಿಲ್ಲ ಎಂದಾಗಲೀ, ನಾವು ಏನೋ ಕಳೆದುಕೊಂಡಿದ್ದೇವೆ ಅಥವಾ ಕಳೆದುಕೊಳ್ಳುತ್ತಿದ್ದೇವೆ ಎಂದಾಗಲೀ ಆ ಸಮಯಗಳಲ್ಲಿ ಎಂದೂ ಎನಿಸಲಿಲ್ಲ.
ಎಲ್ಲರೊಡನೆ ಯಾವಾಗಲೂ ನಗುತ್ತಾ ಮಾತನಾಡುತ್ತಿದ್ದರು. ತಾವು ಮಲಗುವ ರೂಮಿನಲ್ಲಿ ಎದ್ದು ಕೂತರೆ ತಮ್ಮ ಮುಖ ಕಾಣುವಂತೆ ಒಂದು ಕನ್ನಡಿಯನ್ನು ಗೋಡೆಯಲ್ಲಿ ಹಾಕಿಸಿಕೊಂಡಿದ್ದರು. ಅದನ್ನು ಆಗಾಗ ನೋಡುತ್ತಾ ಮಾತನಾಡುತ್ತಿದ್ದಾರೆ ಬಹುಷಃ ಮನಸ್ಸಿನಲ್ಲಿ ತಾವು ಗಂಭೀರವಾಗಿದ್ದರೆ ಹೇಗೆ ಕಾಣುತ್ತೇನೆ, ನಗುತ್ತಿದ್ದರೆ ಹೇಗೆ ಕಾಣುತ್ತೇನೆ ಎಂದು ತಮ್ಮನ್ನು ತಾವೇ ನೋಡಿ, ತಾವು ಹೇಗಿದ್ದರೆ ಚೆನ್ನ ಎಂದು ನಿರ್ಧರಿಸುತ್ತಿದ್ದರು ಎನ್ನಿಸುತ್ತದೆ. (ಈ ಉಪಾಯವನ್ನು ನಾನು ಇಂದಿಗೂ ಬಳಸುತ್ತೇನೆ. ಸಿಟ್ಟು ಬಂದಾಗ ಕನ್ನಡಿ ಮುಂದೆ ೫ ನಿಮಿಷ ನಿಂತರೆ ಮನಸ್ಸು ತಾನಾಗೇ ಮುಖಭಾವ ನಿನಗೊಪ್ಪುವುದಿಲ್ಲವೆಂದು ಎಚ್ಚರಿಸಿ ಮುಗುಳ್ನಗುವಂತೆ ಮಾಡುತ್ತದೆ.) ಅಪ್ಪ ನೀವು ಫೋನಿನಲ್ಲಿ ಮಾತನಾಡುವಾಗ ಆಚೆ ಇರುವವರಿಗೆ ನಿಮ್ಮ ನಗುಮುಖ ಕಾಣಿಸುವುದಿಲ್ಲ ಎಂದು ನಾವು ಕೆಲವೊಮ್ಮೆ ತಮಾಷೆ ಮಾಡುತ್ತಿದ್ದೆವು .
ಅವರ ನಗುಮೊಗದ ಹಿಂದಿದ್ದ ಆಲೋಚನೆಗಳು, ಪ್ಲಾನುಗಳು ನಮಗೆ ತಿಳಿಯುತ್ತಿರಲಿಲ್ಲ. ಸಮಮನಸ್ಕರೊಂದಿಗೆ ಮಾತ್ರ ಮುಂದಿನ ಚಿಂತನೆಗಳನ್ನು ಚರ್ಚಿಸುತ್ತಾ ತಮ್ಮ ಜೀವನದ ದೊಡ್ಡ ಹೋರಾಟಕ್ಕೆ ತಯಾರಾಗಿದ್ದರು. ಅದರಲ್ಲಿ ನಮ್ಮ ಪಾತ್ರವೂ ಇರುತ್ತದೆಂಬ ಅರಿವು ಆಗ
ನಮಗಿರಲಿಲ್ಲ.
ಸದಾ ಚಟುವಟಿಕೆಯಲ್ಲಿ ಇರುತ್ತಿದ್ದ ಅಪ್ಪನಿಗೆ, ತನ್ನ ಜೀವನವನ್ನು ನಾಲ್ಕು ಗೋಡೆಗಳ ಮಧ್ಯೆ , ಹಾಸಿಗೆ ಮತ್ತು ವ್ಹೀಲ್ ಚೇರ್ ಗೆ ಸೀಮಿತಗೊಳಿಸಿಕೊಳ್ಳಲು ಸಾಕಷ್ಟು ದಿನಗಳೂ, ಪ್ರಯತ್ನವೂ ಬೇಕಾಯಿತು. ಹಾಸಿಗೆಗೆ ಹತ್ತಿಸಲು, ಹಾಸಿಗೆಯಿಂದ ಇಳಿಸಲು ಹೀಗೆ ಪ್ರತಿಯೊಂದಕ್ಕೂ ಬೇರೆಯವರ ಸಹಾಯ ಬೇಕಾಗಿತ್ತು. ಅಂಗಾತನೆ ಮಲಗಿದಲ್ಲಿಂದ ಮಗುಲು ಮಗುಚುವುದಕ್ಕೂ ಬೇರೆಯವರು ಕಾಲನ್ನು ಪಕ್ಕಕ್ಕೆ ಮಗುಚಿ ಸಹಾಯ ಮಾಡಬೇಕಿತ್ತು. ಅವರು ಮಲಗಿದಲ್ಲಿ ಮುಚ್ಚಿಗೆಗೆ ಒಂದು ಹಗ್ಗವನ್ನು ಕಟ್ಟಿ ನೇತುಬಿಟ್ಟಿದ್ದರು. ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಎದ್ದು ಕೂರುತ್ತಿದ್ದರು. ಹಾಗೇ ಹಗ್ಗಕ್ಕೆ ಜೋತಾಡಿ ವೀಲ್ ಚೇರಿಗೆ ಜಾರುವಾಗ ಅವರ ಕಾಲುಗಳೆರಡನ್ನು ಜಾರಿಸಲು ಪರಾವಲಂಬನೆ ಬೇಕಾಗುತ್ತಿತ್ತು.
ಈ ಎಣ್ಣೆ ಹಚ್ಚಿದರೆ ಕಾಲಿಗೆ ಶಕ್ತಿ ಬರುತ್ತದೆ, ಅಲ್ಲಿ ಹರಕೆ ಹೇಳಿಕೊಂಡರೆ ಕಾಲು ಸರಿಯಾಗುತ್ತೆ, ಸರ್ಪಶಾಪ ಇರಬಹುದು…ಹೀಗೆ ಬರುತ್ತಿದ್ದ ಸಲಹೆಗಳಿಗೆ ಕೊನೆಯಿರಲಿಲ್ಲ. ಅಪ್ಪ ಈ ಎಲ್ಲ ಸಲಹೆಗಳ ಮಧ್ಯೆ ತಮ್ಮದೇ ಆದ ದಾರಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಯಾರಿಗೂ ಅವರ ಜೊತೆ ಸರ್ವಕಾಲವೂ ಕುಳಿತು ಮಾತನಾಡುತ್ತಿರಲು ಸಮಯ ಅಥವಾ ವ್ಯವಧಾನ ಇರುತ್ತಿರಲಿಲ್ಲ. ನಾವು ನಮ್ಮ ಆಟೋಟಗಳಲ್ಲಿ ನಿರತರಾಗಿರುತ್ತಿದ್ದೆವು. ಅಮ್ಮನಿಗೆ ಮನೆಯ ಕೆಲಸಗಳು ಸಾಕಷ್ಟು ಇರುತ್ತಿದ್ದವು.ಅಪ್ಪ ತಮ್ಮ ಹತ್ತಿರ ಒಂದು ವಿಸಲ್ ಇಟ್ಟುಕೊಂಡಿದ್ದರು. ಏನಾದರೂ ಬೇಕಾದಾಗ ಆ ವಿಸಲ್ ಊದಿ ಕರೆಯುತ್ತಿದ್ದರು.
ಬೆಳಿಗ್ಗೆ ಎದ್ದ ನಂತರ ಸ್ನಾನ ಮಾಡಿ ಸ್ವಲ್ಪ ವ್ಯಾಯಾಮ ಮಾಡಿ ತಿಂಡಿ ತಿಂದು ಏನಾದರೂ ಓದುತ್ತ ಬರೆಯುತ್ತ ವ್ಹೀಲ್ ಚೇರ್ ಮೇಲೆ ಬಾಗಿಲ ಬಳಿ ಕೂರುತ್ತಿದ್ದರು. ಆಚೀಚೆ ಓಡಾಡುವವರು ನಾಲ್ಕು ಮಾತನಾಡಿಸಿದರೆ ಅದೇ ಇವರಿಗೆ ಸಂತೋಷ. 10 ಗಂಟೆಯ ಸುಮಾರಿಗೆ ಪುನ ಹಾಸಿಗೆ ಹತ್ತಿ ಜಪ ಮಾಡುತ್ತಾ ಮಲಗಿದರೆ ಹಾಗೆಯೇ ಒಂದು ಚಿಕ್ಕ ನಿದ್ರೆ.ಮದ್ಯಾನ್ಹ ಊಟ ಆದಮೇಲೆ ಪುನಃ ಸ್ವಲ್ಪ ಹೊತ್ತು ಏನಾದರೂ ಓದುತ್ತ, ಯೋಚನೆ ಮಾಡುತ್ತಾ ಕೂರುತ್ತಿದ್ದರು. ಸಂಜೆ ಪುನಃ ಸ್ವಲ್ಪ ಹೊತ್ತು ಬಾಗಿಲ ಬಳಿ ವ್ಹೀಲ್ ಚೇರ್ ಮೇಲೆ ಕುಳಿತು ಸಮಯ ಕಳೆಯುತ್ತಿದ್ದರು. ಸಂಜೆ ಮಕ್ಕಳನ್ನೆಲ್ಲ ಒಟ್ಟುಗೂಡಿಸಿ ಭಜನೆ ಮಾಡುವಂತೆ ಪ್ರೇರೇಪಿಸಿ ತಾವು ಕೇಳುತ್ತ ಮಲಗುತ್ತಿದ್ದರು.
ಆರೋಗ್ಯವಂತನಾಗಿ ನಡೆದುಕೊಂಡು ಹೋಗಿ ಆಸ್ಪತ್ರೆ ಸೇರಿದ ತನ್ನನ್ನು, ದುಡ್ಡು ಎಳೆಯುವ ಸಲುವಾಗಿ ಹಾಗೂ ಇನ್ನೂ ಕಲಿಯುತ್ತಿರುವ ವಿಧ್ಯಾರ್ಥಿಗಳಿಗೆ ಕಲಿಕೆಯ ಸಾಧನವನ್ನಾಗಿ ಉಪಯೋಗಿಸಿಕೊಂಡು ತನ್ನ ನಡೆಯಲಾರದ ಈ ಸ್ಥಿತಿಗೆ ಕಾರಣರಾದ್ದರಿಂದ ತನ್ನ ಜೀವನ ನಿರ್ವಹಣೆಗೆ ಪರಿಹಾರ ಕೊಡುವುದು ದೊಡ್ಡ ಆಸ್ಪತ್ರೆಯವರ ಜವಾಬ್ದಾರಿ ಎಂದು ಯೋಚಿಸಿದ ಅಪ್ಪ, “ನನ್ನ ಮಕ್ಕಳಿಗೆ ಫ್ರೀಯಾಗಿ ವಿಧ್ಯಾಭ್ಯಾಸ ಕೊಡಿ ಮತ್ತು ನನಗೆ ಫ್ರೀಯಾಗಿ ಚಿಕಿತ್ಸೆ ಕೊಡಿ” ಎಂದು ದೊಡ್ಡ ಆಸ್ಪತ್ರೆಯವರಿಗೆ ಹಲವಾರು ಪತ್ರಗಳನ್ನು ಬರೆದರು.ಆದರೆ ಈ ಅಸಹಾಯಕನ ಕೂಗು ದೊಡ್ಡ ಆಸ್ಪತ್ರೆಯವರಿಗೆ ಕೇಳುವಷ್ಟು ಶಕ್ತಿಯುತವಾಗಿರಲಿಲ್ಲ. ಕೊನೆಗೆ ತಾವು ಆಸ್ಪತ್ರೆಯವರಿಗೆ ಬರೆದ ಎಲ್ಲ ಪತ್ರಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಕಳುಹಿಸಿದರು. ಆ ನಂತರ ದೊಡ್ಡ ಆಸ್ಪತ್ರೆಯವರಿಂದ “ನಿಮಗೆ ಇನ್ನು ಮುಂದೆ ನಮ್ಮ ಆಸ್ಪತ್ರೆಗೆ ಬಂದಾಗ ಫ್ರೀಯಾಗಿ ಚಿಕಿತ್ಸೆ ಕೊಡುತ್ತೇವೆ.” ಎಂಬಂತಹ ಪತ್ರವೊಂದು ಬಂದಿತು. ಮಕ್ಕಳ ವಿಧ್ಯಾಭ್ಯಾಸವನ್ನಾಗಲೀ, ಇವರ ಜೀವನ ನಿರ್ವಹಣೆಯ ಹೊಣೆಯನ್ನಾಗಲೀ ತೆಗೆದುಕೊಳ್ಳಲು ದೊಡ್ಡ ಆಸ್ಪತ್ರೆಯವರು ತಯಾರಿರಲಿಲ್ಲ.
ಅಷ್ಟರಲ್ಲಿ ಯಾರೋ ಕನ್ಸ್ಯೂಮರ್ ಕೋರ್ಟ್ ಗೆ ಹೋಗುವ ಸಲಹೆ ಕೊಟ್ಟರು. ಹಲವರಲ್ಲಿ ವಿಚಾರಿಸಿದಾಗ ಇಂತಹ ಕೇಸುಗಳಲ್ಲಿ ನೊಂದವರ ಪರವಾಗಿ ತೀರ್ಪು ಬರುವುದು ಕಷ್ಟಸಾಧ್ಯ ಎಂಬ ಅನಿಸಿಕೆಗಳೇ ಹೆಚ್ಚು ಬಂದವು. ಜೊತೆಗೆ ಕೋರ್ಟ್ ಗೆ ಹೋಗುವ ಸಲುವಾಗಿ ಕಟ್ಟಬೇಕಾದ ಸ್ಟ್ಯಾಂಪ್ ಚಾರ್ಜ್, ವಕೀಲರ ಫೀ ಎಲ್ಲ ಕಟ್ಟುವ ಶಕ್ತಿ ತನಗಿದೆಯೇ? ಎಂದು ಕೂಡ ಅಪ್ಪ ಯೋಚನೆ ಮಾಡಬೇಕಾಗಿತ್ತು. ಆದರೆ ಕನ್ಸ್ಯೂಮರ್ ಕೋರ್ಟ್ ನಲ್ಲಿ ಹೆಚ್ಚು ಸ್ಟ್ಯಾಂಪ್ ಡ್ಯೂಟಿ ಕೊಡಬೇಕಾಗಿರಲಿಲ್ಲ.ಜೊತೆಗೆ ಪರಿಚಯದ ವಕೀಲರೊಬ್ಬರು ಅಪ್ಪನ ಪರವಾಗಿ ಕೇಸ್ ತೆಗೆದುಕೊಳ್ಳಲು ಒಪ್ಪಿಕೊಂಡರು. ಗೆಲ್ಲದಿದ್ದರೂ ಬೇಡ, ಆದರೆ ತನ್ನನ್ನು ಪರೀಕ್ಷೆಗೆ ಉಪಯೋಗಿಸಿಕೊಂಡು ತನ್ನ ಜೀವನವನ್ನು ಹಾಳು ಮಾಡಿದಂತೆ, ಪರರಿಗೆ ಮಾಡಬಾರದಂತೆ ದೊಡ್ಡ ಆಸ್ಪತ್ರೆಯವರಿಗೆ ಪಾಠ ಕಲಿಸುವೆ, ಅವರನ್ನು ಕೋರ್ಟ್ ಗೆ ಅಲೆಯುವಂತೆ ಮಾಡುವೆ ಎಂದು ಅಪ್ಪ ನಿರ್ಧರಿಸಿದರು. ಸ್ಟೇಟ್ ಕನ್ಸ್ಯೂಮರ್ ಕೋರ್ಟ್ ನಲ್ಲಿ ದೊಡ್ಡ ಆಸ್ಪತ್ರೆಯವರ ವಿರುಧ್ಧ ಕೇಸ್ ಹಾಕಿದರು.
ತಾವು ಆಸ್ಪತ್ರೆಯಿಂದ ಹೊರಬರುವಾಗ ತಂದ ಡಿಸ್ಚಾರ್ಜ್ ಹಿಸ್ಟರಿ ರಿಪೋರ್ಟ್, ತಮಗೆ ಮಾಡಿದ ಟೆಸ್ಟ್ ಗಳ ರಿಪೋರ್ಟ್ ಎಲ್ಲಾ ಅಪ್ಪನ ಬಳಿ ಇದ್ದವು. ಜೊತೆಗೆ ಈ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವ ಪುಸ್ತಕಗಳನ್ನು ತರಿಸಿಕೊಂಡು ತಾವೂ ಅಧ್ಯಯನ ಮಾಡಲು ಪ್ರಾರಂಭಿಸಿದರು. ತಮ್ಮ ವಕೀಲರಿಗೆ ತಮ್ಮ ಕೇಸನ್ನು ಸರಿಯಾಗಿ ಅಧ್ಯಯನ ಮಾಡಲು ಸಮಯ ಸಾಕಷ್ಟು ಇರುತ್ತದೆಯೋ ಇಲ್ಲವೋ ಎಂದರಿತ ಅಪ್ಪ, ತಮ್ಮ ಕೇಸಿಗೆ ತಾವೇ ವಾದ ಬರೆಯಲು ಶುರು ಮಾಡಿದರು. ಎಸ್ ಎಸ್ ಎಲ್ ಸಿ ಓದಿದ ಅಪ್ಪನ ಇಂಗ್ಲಿಷ್ ಅಷ್ಟೇನೂ ಚೆನ್ನಾಗಿರಲಿಲ್ಲ. ಆದರೆ ಅವರ ಆತ್ಮವಿಶ್ವಾಸ ಆ ದೌರ್ಬಲ್ಯವನ್ನೆಲ್ಲಾ ಮೆಟ್ಟಿ ನಿಂತಿತ್ತು. ನಾನೂ ಆಗ ೧೦ನೇ ತರಗತಿಯಲ್ಲಿದ್ದೆ. ಅಪ್ಪ ಏನು ಬರೆಯಬೇಕೆಂದಿದ್ದರೋ ಅದನ್ನು ಉತ್ತಲೇಖನ ಕೊಡುತ್ತಿದ್ದರೆ, ನಾನು ನನಗೆ ಗೊತ್ತಿದ್ದ ಅಲ್ಪ ಸ್ವಲ್ಪ ಇಂಗ್ಲೀಷಿನಲ್ಲಿ ಅವರು ಹೇಳಿದ್ದನ್ನು ಬರೆದುಕೊಡುತ್ತಿದ್ದೆ. ಇಂದು ಆ ಪೇಪರುಗಳನ್ನು ನೋಡಿದರೆ ಸಂಕೋಚವೆನಿಸುತ್ತದೆ.
ಕೇಸ್ ಒಂದು ಸ್ಥಿತಿಗೆ ಬರಲು ಹಲವಾರು ವರ್ಷಗಳೇ ಸಂದವು. ಆದರೆ ಅಪ್ಪನಿಗೆ 25 ಕಿಲೋಮೀಟರು ದೂರದಲ್ಲಿದ್ದ ತನ್ನ ತೋಟವನ್ನು ನಿರ್ವಹಿಸುವುದರ ಜೊತೆಗೆ ಈ ಕೇಸಿನಿಂದ ಇನ್ನೊಂದು ಆಸಕ್ತಿಯ ಕೆಲಸ ದೊರೆತಂತಾಗಿತ್ತು.
ಕೊನೆಗೊಮ್ಮೆ ಕೋರ್ಟಿನ ಹಿಯರಿಂಗಿಗೆ ಅಪ್ಪ ಬೆಂಗಳೂರಿಗೆ ಹೋಗುವುದೆಂದು ನಿರ್ಧಾರವಾಯಿತು. ಮಾರುತಿ ಒಮ್ನಿ ವ್ಯಾನಿನಲ್ಲಿ ಬೆಂಗಳೂರಿಗೆ ತಮ್ಮ ವೀಲ್ ಛೇರಿನೊಂದಿಗೆ ಹೊರಟೇಬಿಟ್ಟರು. ಇವರ ಕೇಸ್ ಇದ್ದ ದಿನ ಕೋರ್ಟ್ ಗೆ ಹೋಗಿ ಕಾದರೆ, ಎದುರು ಪಾರ್ಟಿಯ ಕಿರಿಯ ವಕೀಲರು “ಇವತ್ತು ನಮ್ಮ ಸೀನಿಯರ್ ಬಂದಿಲ್ಲ, ಕೇಸನ್ನು ಮುಂದೆ ದೂಡಿ” ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಆದರೆ ಮಾನವತೆಯನ್ನು ಮೆರೆದ ನ್ಯಾಯಾಧೀಶರು “ಇವರ ಸ್ಥಿತಿಯನ್ನು ನೋಡಿಯೂ ಹೀಗೆ ಕೇಳುತ್ತಿದ್ದೀರಲ್ಲ. ಮನುಷ್ಯತ್ವ ಇದೆಯೇ ನಿಮ್ಮಲ್ಲಿ? ಹೋಗಿ ನಿಮ್ಮ ಸೀನಿಯರನ್ನು ಕರೆತನ್ನಿ, ಇಲ್ಲದಿದ್ದರೆ ನೀವೇ ವಿಚಾರಣೆ ನಡೆಸಿ” ಎಂದು ಆ ವಕೀಲರಿಗೆ ಹೇಳಿದರಂತೆ. ಅದು ಸಾಧ್ಯವಿಲ್ಲವೆಂದು ತಿಳಿದ ಮೇಲೆ, “ಒಂದು ಕಮಿಶನ್ನನ್ನು ನೇಮಕ ಮಾಡುತ್ತೇನೆ. ಇವರ ಮನೆಗೇ ಹೋಗಿ ಇವರ ವಿಚಾರಣೆ ನೆಡೆಸಿಕೊಂಡು ಬನ್ನಿ ” ಎಂದು ನಿರ್ಧರಿಸಿದರಂತೆ.
ಸ್ಟೇಟ್ ಕನ್ಸ್ಯೂಮರ್ ಕೋರ್ಟ್ ನೇಮಕ ಮಾಡಿದ ಕಮಿಶನ್ನಿನವರು ನಮ್ಮ ಮನೆಗೆ ನಮ್ಮ ಪರ ವಕೀಲರು ಮತ್ತು ಆಸ್ಪತ್ರೆಯವರ ಪರ ವಕೀಲರ ಜೊತೆಗೆ ಬಂದು ಅಪ್ಪನ ಹೇಳಿಕೆಗಳನ್ನು ತೆಗೆದುಕೊಂಡು ಹೋದರು. ಮನೆಯಲ್ಲೇ ಕೋರ್ಟಿನ ವಿಚಾರಣೆಗಳು ನಡೆದವು.
ನಮ್ಮ ಕಡೆಯ ವಕೀಲರು, ತಮ್ಮ ವೃತ್ತಿ ಪ್ರಪಂಚದಲ್ಲಿ ಕೇಳಿದ ಪ್ರಶ್ನೆಗಳನ್ನೇ ತಿರುಗಿಸಿ ಮುರುಗಿಸಿ ಕೇಳಿ ಬೇರೆಬೇರೆಯ ಉತ್ತರ ಪಡೆಯುವ ಪ್ರಯತ್ನ ಮಾಡುವುದನ್ನೂ, ಅದನ್ನು ತಮಗೆ ಅನುಕೂಲವಾಗುವಂತೆ ಉಪಯೋಗಿಸಿಕೊಳ್ಳುವ ಬಗ್ಗೆಯೂ ಅಪ್ಪನಿಗೆ ಮಾಹಿತಿ ನೀಡಿ, ಮೊದಲೇ ಅಪ್ಪನನ್ನು ವಿಚಾರಣೆಗೆ ತಯಾರು ಮಾಡಿದ್ದರು. ಅವರು ಹೇಳಿದಂತೆಯೇ ಎದುರು ಪಾರ್ಟಿಯ ವಕೀಲರು ಆಸ್ಪತ್ರೆಯಲ್ಲಿ ಏನೇನು ನೆಡೆಯಿತು, ನರ್ಸ್ ಇಂಜೆಕ್ಷನ್ ಕೊಟ್ಟಳೋ ಡಾಕ್ಟರ್ ಕೊಟ್ಟರೋ? ಒಪ್ಪಿಗೆ ಪಾತ್ರಕ್ಕೆ ನರ್ಸ್ ಸಹಿ ಹಾಕಿಸಿಕೊಂಡಳೋ ಅಥವಾ ಡಾಕ್ಟರೋ? ಹೀಗೆ ನೂರಾರು ಪ್ರಶ್ನೆಗಳನ್ನು ಪುನಃ ಪುನಃ ಕೇಳುತ್ತ ಹೋದರು. ಅಪ್ಪ ಉತ್ತರಿಸಿದ್ದನ್ನು ಕಮಿಶನ್ನಿನವರು ದಾಖಲಿಸಿಕೊಳ್ಳುತ್ತಾ ಹೋದರು. ಆ ದಿನ ಅಪ್ಪನಿಗೆ ಆಂಜಿಯೋಗ್ರಾಮ್ ಮಾಡಿದ ಲೇಡಿ ಡಾಕ್ಟರ್ ಕೂಡ ಮನೆಗೆ ಬಂದಿದ್ದರು. ಅವರ ವಿಚಾರಣೆ ಕೂಡ ನಮ್ಮ ಕಡೆಯ ವಕೀಲರಿಂದ ಅಲ್ಲೇ ನೆಡೆಯಿತು.
ನಾವೆಲ್ಲ ಮಕ್ಕಳು ಆಗುತ್ತಿದ್ದ ವಿಚಾರಣೆಯನ್ನು ಕುತೂಹಲದಿಂದ ಕಿಟಕಿಯಿಂದ ಇಣಕಿ ನೋಡುತ್ತಿದ್ದೆವು. ಬಂದವರಿಗೆ ನಮ್ಮ ಮನೆಯಲ್ಲಿಯೇ ಊಟ ಉಪಚಾರ ನೆಡೆಯಿತು. ಆ ದಿನದ ನೆನಪುಗಳಲ್ಲಿ ಮನಸ್ಸಿಗೆ ನಾಟಿದ್ದೆಂದರೆ, ಅಪ್ಪ ಆ ಲೇಡಿ ಡಾಕ್ಟರ್ ಜೊತೆಗೆ ಮಾತನಾಡಿದ ರೀತಿ. ಆ ಲೇಡಿ ಡಾಕ್ಟರಿಗೆ ಆಗ ಪುಟ್ಟ ಮಕ್ಕಳಿದ್ದರೆಂದು ಕಾಣುತ್ತದೆ. ಅಪ್ಪ ಅವರ ಸಂಸಾರದ ಬಗ್ಗೆ ಮಕ್ಕಳ ಬಗ್ಗೆ ಯಾರೋ ಪರಿಚಿತರೊಂದಿಗೆ ಮಾತನಾಡುವಂತೆ ವಿಚಾರಿಸುತ್ತಿದ್ದರು. “ಮಕ್ಕಳನ್ನು ಯಾರೊಂದಿಗೆ ಬಿಟ್ಟು ಬಂದಿದ್ದೀರಿ? ಕಾಯುತ್ತಿರುತ್ತಾರೆ ಎನ್ನಿಸುತ್ತದೆ ಅಲ್ಲವೇ?” ಆ ಲೇಡಿ ಡಾಕ್ಟರ್ ಮಕ್ಕಳಿಗಾಗಿ ತಾವು ಬೇಗ ವಾಪಸು ಹೋಗಬೇಕಾದ ಕಾತುರತೆಯನ್ನೂ , ವಿಚಾರಣೆ ಮುಗಿಯುವುದೋ ಇಲ್ಲವೋ ಎಂಬ ಚಿಂತೆಯನ್ನೂ ವಿವರಿಸುತ್ತಿದ್ದರೆ ಅಪ್ಪನ ಮುಖದಲ್ಲಿ ಅವರ ಬಗ್ಗೆ ಕಾಳಜಿ. ಇವರೇ ತಮ್ಮ ಅಂಗವೈಕಲ್ಯಕ್ಕೆ ಕಾರಣರಾದವರು ಎಂಬ ಯಾವ ರೀತಿಯ ಅಸಹನೆಯಾಗಲೀ ಸಿಟ್ಟಾಗಲೀ ಅವರ ಮುಖದಲ್ಲಾಗಲೀ, ಮಾತುಗಳಲ್ಲಾಗಲೀ ಇರಲಿಲ್ಲ. ಆದದ್ದು ಆಗಿಹೋಗಿದೆ. ಸಿಟ್ಟು ಅಥವಾ ದ್ವೇಷದಿಂದ ಪ್ರಯೋಜನವಿಲ್ಲ. ಮುಂದೇನು ಎನ್ನುವುದು ಬಿಟ್ಟು ಬೇರೆ ಯಾವುದೇ ಭಾವನೆಗಳಿಗೂ ಅವರಲ್ಲಿ ಆಸ್ಪದವಿರಲಿಲ್ಲ.
ಕೇಸನ್ನು ಹಾಕಿ ವರ್ಷಗಳು ಕಳೆದವು. ಅಷ್ಟರಲ್ಲಿ ನಮ್ಮ ಕೇಸನ್ನು ಆಲಿಸಿದ ನ್ಯಾಯಾಧೀಶರು ಮತ್ತು ಇನ್ನಿತರ ಕಮಿಶನ್ನಿನ ಬೆಂಚಿನಲ್ಲಿದ್ದವರನ್ನು ಬದಲಿಸಲಾಗಿತ್ತು. ಅಂತೂ ೧೯೯೭ ರಲ್ಲಿ ಕೇಸಿನ ತೀರ್ಪು ಬಂದಿತು.ಅಪ್ಪ ಸೋತಿದ್ದರು. ತೀರ್ಪಿನಲ್ಲಿ ಬರೆದಿದ್ದರು “ಡಾಕ್ಟರ್ಸ್ ಡು ನಾಟ್ ಹ್ಯಾವ್ ಸೂಪರ್ ನ್ಯಾಚುರಲ್ ಪವರ್ಸ್ ಅಂಡ್ ಪೇಷಂಟ್ಸ್ ಕ್ಯಾನ್ ನಾಟ್ ಎಕ್ಸ್ಪೆಕ್ಟ್ ಮಿರಾಕಲ್ಸ್ ಫ್ರಮ್ ದೆಮ್ ”
ಆ ಸಮಯದಲ್ಲಿ ನಾನು ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದೆ. ಕೇಸಿನ ತೀರ್ಪು ಬಂದ ದಿನ ನನ್ನ ತಮ್ಮ ನನ್ನನ್ನು ನೋಡಲು ಶಿವಮೊಗ್ಗಕ್ಕೆ ಬಂದಿದ್ದ. ನಾವಿಬ್ಬರೂ ಸಂಜೆ ಮನೆಗೆ ಬರುವುದೆಂದು ನಿರ್ಧಾರವಾಗಿತ್ತು. ಕೇಸಿನ ವಿಷಯ ತಿಳಿಯುತ್ತಿದ್ದಂತೆಯೇ ನಮಗಿಬ್ಬರಿಗೂ ಮನೆಗೆ ಹೋಗಿ ಅಪ್ಪನ ಮುಖ ನೋಡಲು ಸಂಕಟ ಮತ್ತು ಭಯ. ಅಪ್ಪ ಎಂದರೆ ಧೈರ್ಯದ ಸಂಕೇತ. ಹಾಗಾಗಿ ಅಪ್ಪನನ್ನು ದುಃಖದಲ್ಲಿ ನೋಡುವುದು ನಮಗಿಬ್ಬರಿಗೂ ಸಹಿಸಲಸಾಧ್ಯವಾಗಿತ್ತು. ಇಬ್ಬರೂ ಬ್ಯಾಗ್ ತೆಗೆದುಕೊಂಡು ಬಸ್ ಸ್ಟಾಂಡ್ ಹತ್ತಿರ ಬಂದರೆ ನನ್ನ ತಮ್ಮ ಪಕ್ಕದಲ್ಲೇ ಇದ್ದ ಥಿಯೇಟರ್ ಒಂದರ ಕಡೆಗೆ ನನ್ನನ್ನು ಕೈ ಹಿಡಿದು ಎಳೆದುಕೊಂಡು ಹೋಗಿದ್ದ. ಯಾವುದೊ ಗೊತ್ತಿಲ್ಲದ ಫಿಲಂ ನೋಡುತ್ತಾ ತಂದೆಯವರನ್ನು ಎದುರಿಸುವ ಸಂದರ್ಭವನ್ನು ಮುಂದೂಡುವುದು ಅವನ ಪ್ಲಾನ್ ಆಗಿತ್ತು. ಫಿಲಂ ಮುಗಿಸಿ ಸಂಜೆ ಮನೆಗೆ ಬರುವಾಗ ಸಂಜೆ ೭ ಗಂಟೆ. ಅಪ್ಪನ ರೂಮಿಗೆ ಯಾವ ಭಾವನೆಯನ್ನು ಮುಖದಲ್ಲಿರಿಸಿಕೊಂಡು ಹೋಗಬೇಕು ನಮಗೆ ಗೊತ್ತಿರಲಿಲ್ಲ. ಒಳಗೊಳಗೇ ಸಂಕಟ. ಬೇಸರದೊಡಗೂಡಿದ ಹೆದರಿಕೆ. ಯಾವ ಭಾವನೆಗಳೂ ಇಲ್ಲದ ಮುಖಭಾವದೊಂದಿಗೆ ಅಪ್ಪನ ರೂಮಿಗೆ ಕಾಲಿರಿಸಿ ಅಪ್ಪನ ಮುಖ ನೋಡಿದರೆ, ಅದೇ ಮಂದಹಾಸ. “ವಿಷಯ ತಿಳಿಯಿತಾ? ಆಗುವುದೆಲ್ಲ ಒಳ್ಳೆಯದಕ್ಕೆ. ನ್ಯಾಷನಲ್ ಕನ್ಸ್ಯೂಮರ್ ಕೋರ್ಟಿನಲ್ಲಿ ಇನ್ನೂ ಹೆಚ್ಚು ಪರಿಹಾರ ಕೇಳಬಹುದಂತೆ. ಹೆಚ್ಚು ಮೆಡಿಕಲ್ ಫೆಸಿಲಿಟಿ ಕೇಳಬಹುದಂತೆ. ಮುಂದೆ ಯಾವ ವಕೀಲರನ್ನು ಹಿಡಿಯುವುದು ಎಂದೆಲ್ಲ ಯೋಚಿಸಬೇಕು.” ಕುಂದದ ಆಶಾವಾದದೊಂದಿಗೆ ಅಪ್ಪ ಮಾತನಾಡುತ್ತಿದ್ದರೆ ನಮಗೆ ಆಶ್ಚರ್ಯ. ಆಮೇಲೆ ತಿಳಿದ ವಿಷಯವೆಂದರೆ, ನ್ಯಾಯಾದೀಶರು ದೊಡ್ಡ ಆಸ್ಪತ್ರೆಯ ಊರಿನ ಹತ್ತಿರದವರಂತೆ. ಆಸ್ಪತ್ರೆಗಳನ್ನು, ಡಾಕ್ಟರುಗಳನ್ನು ಎದುರು ಹಾಕಿಕೊಳ್ಳುವುದು ಕಷ್ಟವೇ. ಆದರೆ, ಬರೆದ ಜಡ್ಜ್ ಮೆಂಟಿನಲ್ಲಿ ಆಸ್ಪತ್ರೆಯವರು ಮಾಡಿದ ಅಲಕ್ಷ್ಯತೆಯನ್ನು ಸರಿಯಾಗಿ ತೋರಿಸಿದ್ದರು. ಕೊನೆಯ ಪುಟದವರೆಗೂ ನಮಗೆ ಪರವಾಗಿ ಬರೆದಂತಿತ್ತು ಜಡ್ಜ್ ಮೆಂಟ್. ಕೊನೆಯ ಪುಟದಲ್ಲಿ ಮಾತ್ರ “ಡಾಕ್ಟರ್ಸ್ ಡು ನಾಟ್ ಹ್ಯಾವ್ ಸೂಪರ್ ನ್ಯಾಚುರಲ್ ಪವರ್ಸ್ ಅಂಡ್ ಪೇಷಂಟ್ಸ್ ಕ್ಯಾನ್ ನಾಟ್ ಎಕ್ಸ್ಪೆಕ್ಟ್ ಮಿರಾಕಲ್ಸ್ ಫ್ರಮ್ ದೆಮ್ ” “ಕೇಸ್ ಈಸ್ ಡಿಸ್ಮಿಸ್ಸ್ಡ್” ಎಂದು ಬರೆದಿದ್ದರು. ಆದರೆ ಆಸ್ಪತ್ರೆಯವರು ಮಾಡಿದ ಅಲಕ್ಷ್ಯತೆಯನ್ನು
ಕೋರ್ಟಿನವರು ಸರಿಯಾಗಿ ದಾಖಲಾತಿಸಿದ್ದರಿಂದ, ಮುಂದಿನ ಕೋರ್ಟಿಗೆ ಹೋಗಲು ನಮಗೆ ಅನುಕೂಲವಾಯಿತು. ಅಪ್ಪನಿಗೆ ಆಂಜಿಯೋಗ್ರಾಮ್ ಮಾಡಿದ ಲೇಡಿ ಡಾಕ್ಟರ್ ೧೯೮೭ ರಿಂದ ೧೯೮೯ ವರೆಗೆ ಪೋಸ್ಟ್ ಗ್ರಾಜುಯೇಟ್ ಸ್ಟೂಡೆಂಟ್ ಆಗಿದ್ದರು ಎಂದು ಅವರೇ ತಮ್ಮ ವಿಚಾರಣೆಯಲ್ಲಿ ಹೇಳಿಕೊಂಡಿದ್ದರು. ೧೯೮೯ ನಂತರ ಅದೇ ಡೆಪಾರ್ಟ್ಮೆಂಟಿನಲ್ಲಿ ಲೆಕ್ಚರರ್ ಆಗಿ ಸೇರಿಕೊಂಡಿದ್ದರಂತೆ. ಚೀಫ್ ಡಾಕ್ಟರ್ ತಮ್ಮ ಹೇಳಿಕೆಯಲ್ಲಿ “She was a trainee under me” ಎಂದು ಹೇಳಿಕೆ ಕೊಟ್ಟಿದ್ದರು. “ಆಂಜಿಯೋಗ್ರಾಫಿ ಮತ್ತು ಥೆರಪೆಟಿಕ್ ಆಂಜಿಯೋಗ್ರಾಫಿ ” ಎಂಬ ಮೆಡಿಕಲ್ ಸೈನ್ಸ್ ಬುಕ್ಕಿನಲ್ಲಿ “Transaxillary catheterization should only be undertaken by senior experienced angiographers” ಎಂದು ನಮೂದಿಸಿದ್ದರು. ಪ್ರಯೋಗ ಮಾಡದೆ ಜೂನಿಯರ್ ಡಾಕ್ಟರುಗಳಿಗೆ ಅನುಭವ ಬರುವುದಾದರೂ ಹೇಗೆ? ಇಂತಹ ಒಂದು ಪ್ರಯೋಗಕ್ಕೆ ಸಿಕ್ಕಿಹಾಕಿಕೊಂಡು ಕಾಲು ಕಳೆದುಕೊಳ್ಳುತ್ತೇನೆಂದು ಅಪ್ಪ ಕನಸಿನಲ್ಲೂ ಯೋಚಿಸಿರಲಿಲ್ಲ.
ಆದ ಅವಗಢದಿಂದ ಅಪ್ಪ ಬರೀ ಕಾಲು ಕಳೆದುಕೊಂಡಿರಲಿಲ್ಲ. ಆದ ಅನುಭವಗಳನ್ನು ಅವರು ಬರೆದಿಟ್ಟಿರುವುದನ್ನು ಓದಿದರೆ ಅವರಿದ್ದ ಪರಿಸ್ಥಿತಿಯ ಗಾಂಭೀರ್ಯ ಅರ್ಥವಾಗುತ್ತದೆ. ಕಣ್ಣಿನಲ್ಲಿ ನೀರು ತುಂಬುತ್ತದೆ.
“ಮೇ ೭, ೧೯೯೦ ರಂದು ಸುಮಾರು ೧೦ ಗಂಟೆಯ ಹೊತ್ತಿಗೆ ನನ್ನ ಬದುಕನ್ನು ಕಾರ್ಗತ್ತಲಿಗೆ ದೂಡಿದ ಘಟನೆ ನೆಡೆದದ್ದು. ವೈದ್ಯರಿಬ್ಬರ ಕೈಗೆ ಸಿಕ್ಕಿ “ಮಂಗನ ಕೈಗೆ ಸಿಕ್ಕಿದ ಮಾಣಿಕ್ಯ” ದಂತಾಗಿದ್ದೆ.
ಮೇ ೭ ೧೯೯೦ ಮದ್ಯಾಹ್ನ ೧೨ ಗಂಟೆ ಹೊತ್ತಿಗೆ ನನ್ನನ್ನು ಮೆಡಿಸಿನ್ ಡೆಪಾರ್ಟ್ಮೆಂಟಿನ ವಾರ್ಡಿಗೆ ಸಾಗಿಸಲಾಯಿತು. ಡ್ರಿಪ್ ಹಾಕಲಾಯಿತು. ಎದೆಯಿಂದ ಕೆಳಭಾಗ ಕಲ್ಲು ಬಂಡೆಯಂತಾಗಿತ್ತು. ತಡೆಯಲಾರದ, ಅನುಭವಿಸಲಾರದ, ಹೇಳಲಾಗದ ವೇಧನೆ. ೨೪ ಗಂಟೆಯಲ್ಲಿ ಎಲ್ಲಾ ಸರಿ ಹೋಗುತ್ತೆ ಎಂದು ನನಗೆ ಸಮಾಧಾನ ಹೇಳಿದರು. ಮದ್ಯಾಹ್ನ ೩ ಗಂಟೆ ಹೊತ್ತಿಗೆ ಯೂರೋಲಾಜಿ ವೈದ್ಯರು ಬಂದರು. ಆಗ ಗೊತ್ತಾಯ್ತು, ನಾನು ಸ್ವತಃ ಮೂತ್ರ ವಿಸರ್ಜನೆ ಮಾಡುವ ಶಕ್ತಿಯನ್ನು ಕಳೆದುಕೊಂಡಿದ್ದೇನೆ ಎಂದು. ಮೂತ್ರಕೋಶದ ಸಮೀಪ ಸ್ವಲ್ಪ ಕೊಯ್ದು ಮೂತ್ರ ಹೋಗಲು ಟ್ಯೂಬ್ ಅಳವಡಿಸಿ ಪ್ಲಾಸ್ಟಿಕ್ ಬ್ಯಾಗ್ ನೇತು ಹಾಕಲಾಯಿತು. ಅಲ್ಲಿಯವರೆಗೆ ನನಗೆ ಏನೂ ಆಗಿಲ್ಲ ಎಂಬ ಭಾವನೆಯಿಂದಲೇ ಇದ್ದೆ. ಆಗ ಅರಿವಾಯ್ತು, ನನಗೆ ಏನೋ ಆಗಿದೆ ಎಂದು.
ಆಹಾರ ಸೇರದಾಯಿತು. ನಿದ್ದೆ ಬಾರದಾಯಿತು. ನನ್ನ ಪತ್ನಿ ರಾತ್ರಿಯೆಲ್ಲಾ ಬೆತ್ತದ ಕುರ್ಚಿಯಲ್ಲಿ ಕುಳಿತು ಕಾಲ ಕಳೆದಳು. ವೈದ್ಯರು ಪದೇ ಪದೇ ಬಂದು ಧೈರ್ಯ ಹೇಳುತ್ತಿದ್ದರು. ಮಾತ್ರೆ ಔಷದಗಳ ಪ್ರಭಾವದಿಂದ ಆ ದಿನ ಹೆಚ್ಚೇನೂ ಗೊತ್ತಾಗಲಿಲ್ಲ. ಆದರೆ ಮುಂದೇನಾಗುವುದೋ ಎಂಬ ಆತಂಕ ಕಾಡದಿರಲಿಲ್ಲ. ನಾಳೆ ಎಲ್ಲಾ ಸರಿ ಹೋಗುತ್ತೆ, ನಾಳೆ ಎಲ್ಲಾ ಸರಿ ಹೋಗುತ್ತೆ, ಎಂದು ಪದೇ ಪದೇ ನನ್ನ ಮನಸ್ಸಿಗೆ ನಾನೇ ಧೈರ್ಯ ಹೇಳತೊಡಗಿದೆ. ನಿನ್ನೆ ನಾಳೆಗಳನ್ನು ಮನಸ್ಸಿನಿಂದ ಕಿತ್ತೊಗೆದೆ. ಭಗವಂತನ ಇಚ್ಛೆ ಇದ್ದಂತಾಗಲಿ ಎಂದು ಭಗವಂತನ ಮೇಲೆ ಭಾರ ಹಾಕಿ ನಿಶ್ಚಿಂತೆಯಿಂದ ಭಗವಂತನ ಧ್ಯಾನ ಮಾಡತೊಡಗಿದೆ.
ಬೆಳಗಾಯಿತು. ಏನೂ ಬದಲಾವಣೆ ಕಾಣಲಿಲ್ಲ. ಹೆಣದಂತೆ ಮಲಗಿರುವುದನ್ನು ಬಿಟ್ಟರೆ ಬೇರೇನನ್ನೂ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಬೆಳಿಗ್ಗೆ ಮುಖ ತೊಳೆಯುವುದರಿಂದ ಹಿಡಿದು ರಾತ್ರಿ ಮಲಗುವವರೆಗಿನ ನನ್ನೆಲ್ಲಾ ದಿನನಿತ್ಯದ ಕರ್ತವ್ಯಗಳು ಅಸ್ತವ್ಯಸ್ತವಾಗಿತ್ತು. ೨೪ ಗಂಟೆ ಕಳೆಯಿತು. ಮಲವಿಸರ್ಜನೆ ಆಗಲೇ ಇಲ್ಲ. ದೇಹದ ನೋವು ಹೆಚ್ಚಾಗಿತ್ತು. ನಾನು ಸಂಪೂರ್ಣವಾಗಿ ಪುರುಷತ್ವವನ್ನು ಕಳೆದುಕೊಂಡಿದ್ದೇನೆ ಎಂಬುದು ಅರಿವಾಯ್ತು. ಸುಮಾರು ೧೫ ದಿನ ಡ್ರಿಪ್ ಹಾಕಿದ್ದರು. ೧೫ ದಿನದಲ್ಲಿ ಒಂದು ಗಂಟೆಯೂ ಕೂಡ ಸರಿಯಾಗಿ ನಿದ್ದೆ ಮಾಡಲಿಲ್ಲ. ಆಹಾರವನ್ನು ಸಂಪೂರ್ಣವಾಗಿ ಬಿಟ್ಟಿದ್ದೆ. ಕೈ ಕುತ್ತಿಗೆ ಬಿಟ್ಟರೆ ಬೇರಿನ್ನಾವ ಭಾಗವೂ ನನ್ನ ವಶದಲ್ಲಿರಲಿಲ್ಲ. ಸ್ವಲ್ಪವೂ ಅಲುಗಾಡಿಸಲು ಆಗುತ್ತಿರಲಿಲ್ಲ. ಆ ಹದಿನೈದು ದಿನ ನಾಳೆ ಒಳ್ಳೆಯದಾಗುವುದು ಎಂದು ಭಗವಂತನ ಧ್ಯಾನ ಮಾಡುತ್ತಾ ಕಾಲ ಕಳೆದೆ. ನಾನು ಮಾಡುತ್ತಿದ್ದ ಧ್ಯಾನ ನನ್ನ ಮನಸ್ಸನ್ನು ಅಂತಹಾ ಪರಿಸ್ಥಿತಿಯಲ್ಲೂ ಪ್ರಶಾಂತವಾಗಿರಿಸಿತ್ತು. ಮನಸ್ಸಿನೊಳಗೆ ನುಸುಳುವ ನೂರಾರು ಯೋಚನೆಗಳೆಲ್ಲ ದೂರ ಹೋಗತೊಡಗಿದ್ದವು. ಭಯ, ಆತಂಕ, ಚಿಂತೆ ಎಲ್ಲಾ ದೂರವಾಗಿತ್ತು. ನಿರ್ಯೋಚನೆಯಿಂದ ನಗುನಗುತ್ತಾ ನನ್ನ ಮುಂದಿದ್ದ ಬದುಕನ್ನು ಸ್ವೀಕರಿಸಲು ಎದುರಿಸಲು ಸಿದ್ದನಾದೆ. ನಾನು ನಗುವುದನ್ನು ನೋಡಿ ವೈದ್ಯರು, ಸಿಸ್ಟರ್ಗಳು ನನ್ನನು ನೋಡಲು ಬಂದವರು ಎಲ್ಲರೂ ಆಶ್ಚರ್ಯ ಪಡುತ್ತಿದ್ದರು. ಆದರೆ ನನ್ನ ಪತ್ನಿ, ನನ್ನ ತಂದೆ ತಾಯಿ, ಮಕ್ಕಳು, ಇತರೆ ಮಿತ್ರರು ಇವರೆಲ್ಲಾ ನೆಮ್ಮದಿಯಿಂದ ಇರಬೇಕಾದರೆ ನಾನು ನಗಲೇಬೇಕಿತ್ತು. ನಗುನಗುತ್ತಾ “ಏನೂ ಆಗುವುದಿಲ್ಲ, ಹೆದರಬೇಡಿ'” ಎಂದು ನಾನೆ ಅವರಿಗೆ ಧೈರ್ಯ ಹೇಳುತ್ತಿದ್ದೆ. ಭಗವಂತಾ, ನನ್ನನ್ನೇ ನಂಬಿರುವ ನನ್ನವರಾರನ್ನೂ ನಾನು ರಕ್ಷಿಸಲಾರೆ. ನನ್ನವರನ್ನೆಲ್ಲಾ ಕಾಪಾಡು. ಅವರೆಲ್ಲರ ಜವಾಬ್ದಾರಿಯನ್ನು ನಿನಗೆ ವಹಿಸುತ್ತಿದ್ದೇನೆ, ಎಂದು ಅಂಗಲಾಚಿದೆ. ನನ್ನನ್ನು ಹೆಚ್ಚು ದಿನ ಈ ಪರಿಸ್ಥಿತಿಯಲ್ಲಿ ಇಡಬೇಡ, ಒಂದೋ ನನ್ನನ್ನು ಮೊದಲಿನಂತೆ ಮಾಡು, ಇಲ್ಲವೇ ನನ್ನನ್ನು ನಿನ್ನ ಹತ್ತಿರ ಕರೆದುಕೊ ಎಂದು ಪ್ರಾರ್ಥಿಸಿದೆ. ಭಗವಂತನ ಇಚ್ಛೆಯೇ ಬೇರೆಯಾಗಿತ್ತು. ಈ ಎರಡರಲ್ಲಿ ಯಾವುದೊಂದೂ ಆಗಲಿಲ್ಲ.
ನನ್ನನ್ನು ನೋಡಲು ಬರುತ್ತಿದ್ದ ವೈದ್ಯರ ಮುಖ ಪೆಚ್ಚಾಗುತ್ತಿತ್ತು. ನನ್ನ ಪತ್ನಿ ಧೈರ್ಯವಾಗಿದ್ದಳು. ಮಕ್ಕಳು ಮುಗ್ಧರು. ನೋಡಲು ಬಂದವರು ಕಣ್ಣೀರು ಹಾಕುತ್ತಿದ್ದರು. ನಾನೇ ಅವರಿಗೆ ಧೈರ್ಯ ಹೇಳುತ್ತಿದ್ದೆ. ನಾನೆಂದೂ ಕಣ್ಣೀರು ಹಾಕಲಿಲ್ಲ. ಗೋಳಾಡಲಿಲ್ಲ. ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳಲಿಲ್ಲ. ಕಾರಣ ನಾನು ನನ್ನೆದುರಿದ್ದ ಜೀವನವನ್ನು ತಿರಸ್ಕರಿಸಲಿಲ್ಲ. ಪರಿಸ್ಥಿತಿಗೆ ಹೊಂದಿಕೊಂಡು ಬದುಕಲು ನಿರ್ಧರಿಸಿದ್ದೆ. ಒಂದಲ್ಲ ಒಂದು ದಿನ ನನಗೆ ಗುಣವಾಗುವುದು. ನಾನು ಮೊದಲಿನಂತಾಗುವೆ ಎಂಬ ಭರವಸೆಯಿಂದ ಬದುಕಲು ಪ್ರಯತ್ನಿಸಿದೆ. ಆಶಾಜೀವಿಯಾಗಿರಲು ಪ್ರಯತ್ನಿಸಿದೆ. ಸುಮಾರು ಎರಡೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಆ ಎರಡೂವರೆ ತಿಂಗಳುಗಳ ನನ್ನ ಅನುಭವಗಳನ್ನು ತಿಳಿಸಲು ಪ್ರಯತ್ನಿಸುತ್ತೇನೆ.
ಮೊದಲ ದಿನ ಹೇಗೋ ಕಳೆದುಹೋಗಿತ್ತು. ಎರಡನೇ ದಿನ ಮಲವಿಸರ್ಜನೆ ಆಗಲೇ ಇಲ್ಲ. ಎನಿಮಾ ಕೊಟ್ಟರೆ, ನೀರೇ ವಾಪಸು ಬರುತ್ತಿತ್ತು. ಒಂದು ಕಡೆ ಅಲುಗಾಡಲು ಆಗದೆ ಇರುವ ಸ್ಥಿತಿ. ಡ್ರಿಪ್ ಸೂಜಿ ೨೪ ಗಂಟೆ ದಿನವೂ ೧೫ ದಿನಗಳ ಕಾಲ ಕೈಯಲ್ಲಿ ಇತ್ತು. ಮೂತ್ರದ ಕೊಳವೆ ಒಂದು ಕಡೆ. ಆಹಾರ ಬಿಟ್ಟಿದ್ದರಿಂದ ಆದ ನಿಷ್ಶಕ್ತಿ ಇನ್ನೊಂದು ಕಡೆ. ಎರಡನೇ ದಿನವನು ಕಳೆಯುವುದು ಮೊದಲ ದಿನವನ್ನು ಕಳೆದಷ್ಟು ಸುಲಭವಾಗಲಿಲ್ಲ. ಮಲಗಿದಲ್ಲಿಯೇ ಸಮಯ ಕಳೆಯುವುದು ಒಂದು ಸಮಸ್ಯೆ. ವೇಧನೆಗಳನ್ನು ಸಹಿಸಿಕೊಳ್ಳುವುದು ಇನ್ನೊಂದು ಸಮಸ್ಯೆ. ಹೆಚ್ಚೆಂದರೆ ನಾನು ಸಾಯಬಹುದು. ಸಾವನ್ನು ಎದುರಿಸಲು ಸಿದ್ಧನಾದೆ. ಆದರೆ ನಿರಾಶನಾಗಲಿಲ್ಲ. ಹೆಂಡತಿ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿಯನ್ನು ಭಗವಂತನಿಂಗ್ಗೆ ಒಪ್ಪಿಸಿದ್ದರಿಂದ ನಾನು ಫ್ರೀಯಾಗಿದ್ದೆ. ನನ್ನ ಪತ್ನಿ ೩೪ ವರ್ಷದ ಮುಗ್ದೆ. ನೋವನ್ನೆಲ್ಲ ಮರೆತು ಹಗಲಿರುಳೂ ನನ್ನ ಸೇವೆ ಮಾಡುತ್ತಿದ್ದಳು. ಅವಳಿಗೆ ಸಾಕಷ್ಟು ಬುದ್ಧಿಶಕ್ತಿಯನ್ನು ಭಗವಂತ ಕೊಟ್ಟಿದ್ದ. ಹಾಗಾಗಿ ಆ ವಿಚಾರದಲ್ಲಿ ನಾನು ಅದೃಷ್ಟಶಾಲಿಯಾಗಿದ್ದೆ.
ಸಿಸ್ಟರ್ಗಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಮಲಮೂತ್ರ ಹೇಗೆಯುವುದರಿಂದ ಹಿಡಿದು ಸ್ನಾನ ಮಾಡಿಸುವುದು, ಹಾಗೂ ನನಗೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನೂ ಅಸಹ್ಯ ಪಡದೇ ನೆರವಾಗುತ್ತಿದ್ದರು. ಆ ಎರಡೂವರೆ ತಿಂಗಳು ಆ ಸಹೋದರಿಯರು ಮಾಡಿದ ಸೇವೆಯನ್ನು ನಾನೆಂದೂ ಮರೆಯಲಾರೆ. ಭಗವಂತ ಅವರೆಲ್ಲರನ್ನೂ ಸುಖವಾಗಿಡಲಿ ಎಂದು ಪ್ರಾರ್ಥಿಸುವುದನ್ನು ಬಿಟ್ಟು ನಾನು ಅವರಿಗಾಗಿ ಬೇರೇನನ್ನೂ ಮಾಡಲಾರದವನಾಗಿದ್ದೆ.
ವಿಪರೀತ ಸೆಕೆ. ೪-೫ ದಿನದಲ್ಲಿ ಹಿಂಬಾಗದಲ್ಲಿ ಬೆಡ್ ಸೋರ್ ಆಯಿತು. ವೈದ್ಯರು ಪ್ರತೀ ಮೂರು ಗಂಟೆಗೆ ಒಂದೊಂದು ಮಗ್ಗುಲಿನಲ್ಲಿ ಮಲಗಲು ತಿಳಿಸಿದರು. ಸಿಸ್ಟರುಗಳು ಮತ್ತು ನನ್ನ ಪತ್ನಿ ೩ ಗಂಟೆಗೊಮ್ಮೆ ಮಗ್ಗುಲು ಬದಲಾಯಿಸಿ ಮಲಗಿಸುತ್ತಿದ್ದರು. ಅಂಗಾತನೆ ಮಲಗುವಾಗಲೆಲ್ಲ ಒಂದು ಏರ್ ಕುಶನ್ನನ್ನು ಅಡಿಭಾಗಕ್ಕೆ ಇಟ್ಟುಕೊಳ್ಳಬೇಕಾಗಿತ್ತು.
ನ್ಯೂರಾಲಜಿ ಡಾಕ್ಟರುಗಳ ಸತತ ಪ್ರಯತ್ನದಿಂದ ಮೂತ್ರ ಹೊರಹಾಕುವ ವಿಚಾರದಲ್ಲಿ ಸ್ವಲ್ಪ ಬದಲಾವಣೆಯಾಯ್ತು. ನಿರಂತರವಾಗಿ ಮೂತ್ರ ವಿಸರ್ಜನೆಗಾಗಿ ಇತ್ತ ಕೊಳವೆಯನ್ನು ತೆಗೆದರು. ೪ ಗಂಟೆಗೊಮ್ಮೆ ಕೊಳವೆಯನ್ನು ಮೂತ್ರ ಮಾಡುವ ಭಾಗದಿಂದ ಹಾಕಿ ಮೂತ್ರ ತೆಗೆಯುವ ಕ್ರಮವನ್ನು ನನ್ನ ಪತ್ನಿಗೆ ಕಳಿಸಿಕೊಟ್ಟರು. ಕಮೋಡ್ ಅಟ್ಯಾಚ್ ಇರುವ ಒಂದು ವೀಲ್ ಚೇರ್ ತರಿಸಿ ೪ ಜನ ಸಿಸ್ಟರುಗಳು ಮತ್ತು ನನ್ನ ಪತ್ನಿ ನನ್ನನ್ನು ಎತ್ತಿ ಅದರ ಮೇಲೆ ಕೂರಿಸುತ್ತಿದ್ದರು. ಮಲ ವಿಸರ್ಜಿಸಲು ಪ್ರಯತ್ನಿಸುತ್ತಿದ್ದೆ. ಗುದದ್ವಾರದ ನರಗಳು ಶಕ್ತಿ ಕಳೆದುಕೊಂಡಿದ್ದವು. ನಾರ್ಮಲ್ ಆಗಿ ಮಲವಿಸರ್ಜನೆ ಆಗುತ್ತಿರಲಿಲ್ಲ. ಕೈಯಿಂದ ತೆಗೆಯಬೇಕಾಗುತ್ತಿತ್ತು. ಇವೆಲ್ಲಾ ಆಗುವ ಹೊತ್ತಿಗೆ ಸುಮಾರು ೪೦೦೦೦ ರೂಪಾಯಿಗಳು ಖರ್ಚಾಗಿದ್ದವು. ನಲವತ್ತು ಸಾವಿರ ಖರ್ಚು ಮಾಡಿ ಈ ಎಲ್ಲಾ ಸಮಸ್ಯೆಗಳನ್ನೂ ಕೊಂಡುಕೊಂಡಂತಾಗಿತ್ತು. ನನ್ನನ್ನು ಡಿಸ್ಚಾರ್ಜ್ ಮಾಡಲು ನಿರ್ಧರಿಸಿದರು. ನನಗೂ ಆಸ್ಪತ್ರೆಯ ವಾಸ, ಹಣದ ಖರ್ಚು ಬೇಸರ ತರಿಸಿತ್ತು. ನಿಮಗೆ ಇನ್ನು ೬ ತಿಂಗಳಿಗೋ, ಒಂದು ವರ್ಷಕ್ಕೂ ಅಥವಾ ಎರಡು ವರ್ಷಕ್ಕೂ ವಾಸಿಯಾಗಿ ನೀವು ಮೊದಲಿನಂತಾದರೆ ಆಗಬಹುದು. ಆಗದೆಯೂ ಇರಬಹುದು ಎಂದು ನಿಜ ವಿಚಾರವನ್ನು ಡಾಕ್ಟರ್ ಎಸ್ ಏನ್ ರಾವ್ ಮತ್ತು ಡಾಕ್ಟರ್ ರವಿಸುಬ್ರಮಣ್ಯಮ್ ತಿಳಿಸಿದರು. ಈ ಕಾಯಿಲೆಗೆ ಔಷಧವಿಲ್ಲ. ಮಲಗಿದಲ್ಲಿಯೇ ಸಾಧ್ಯವಾದಷ್ಟು ದೇಹವನ್ನು ಚಲನೆಯಲ್ಲಿಡಬೇಕು ಎಂದು ಸಲಹೆ ನೀಡಿ ಡಿಸ್ಚಾರ್ಜ್ ಮಾಡಿದರು. ಆರೋಗ್ಯದಿಂದ ಆಸ್ಪತ್ರೆಗೆ ಹೋದ ನನ್ನನ್ನು ಯಾರೋ ಹೊತ್ತುಕೊಂಡು ತಂದು ಕಾರಿನಲ್ಲಿ ಮಲಗಿಸಿದರು. ಅಂತೂ ಇಂತೂ ನಾನು ಮನೆ ಸೇರಿದೆ.
1. ಮೊದಲನೆಯದಾಗಿ ನನಗೇನೂ ಗಂಭೀರವಾದ ಸಮಸ್ಯೆ ಇರಲಿಲ್ಲ. ಇಂತಹ ಬದುಕನ್ನೇ ಬಲಿ ತೆಗೆದುಕೊಳ್ಳುವಂತಹ ಟೆಸ್ಟ್ ಮಾಡಬೇಕಾದ ಅಗತ್ಯವೇನೂ ಇರಲಿಲ್ಲ. ಒಂದು ವೇಳೆ ಮಾಡುವುದಾದರೂ, ಅದರಿಂದ ಒಳ್ಳೆಯದೇನು, ಕೆಡುಕೇನು ಎಂಬ ವಿಚಾರವನ್ನು ನನಗೆ ತಿಳಿಸಬೇಕಾಗಿತ್ತು. ನನ್ನ ಸಂಪೂರ್ಣ ಒಪ್ಪಿಗೆಯನ್ನು ತೆಗೆದುಕೊಂಡು ಟೆಸ್ಟ್ ಮಾಡುವುದು ಅವರ ಕರ್ತವ್ಯವಾಗಿತ್ತು.
2. ನನ್ನನ್ನು ಟೆಸ್ಟ್ ಗೆ ಕರೆದುಕೊಂಡು ಹೋದಾಗ ಚೀಫ್ ಡಾಕ್ಟರ್ ಸಿಟ್ಟಿನಲ್ಲಿದ್ದರು. ಉಳಿದಿಬ್ಬರಿಗೆ ಬೈಯುತ್ತಿದ್ದರು. ಮೂರು ಜನರ ಮನಸ್ಸೂ ಸ್ಥಿಮಿತದಲ್ಲಿರಲಿಲ್ಲ. ಮನಸ್ಸು ಸರಿ ಇಲ್ಲದಾಗ ಇಂತಹ ಟೆಸ್ಟನ್ನು ಮಾಡಬಾರದಾಗಿತ್ತು.
3. ಮೂರನೆಯದಾಗಿ ಈ ದುರಂತ ನೆಡೆದ ಗಳಿಗೆಯಲ್ಲಿ ನನಗೆ ಯಾವುದೇ ತುರ್ತು ಚಿಕಿತ್ಸೆಯನ್ನೂ ಕೊಡದೇ, ಒಂದೂವರೆ ಗಂಟೆಯ ಕಾಲ ಕೇವಲ ರಗ್ ಹೊಡೆಸಿ ಆಂಜಿಯೋಗ್ರಾಮ್ ಟೇಬಲ್ ಮೇಲೆಯೇ ಮಲಗಿಸಿದ್ದರು.
4. ನಾಲ್ಕನೆಯದಾಗಿ, ಆ ಗಳಿಗೆಯಲ್ಲಿ ಒಂದೆರಡು ದಿನವಾದರೂ ನನ್ನನ್ನು ತುರ್ತು ಚಿಕಿತ್ಸೆಯ ವಿಭಾಗದಲ್ಲಿಟ್ಟುಕೊಂಡು ಚಿಕಿತ್ಸೆ ಕೊಡಬೇಕಿತ್ತು. ನನ್ನನ್ನು ಮೊದಲಿನ ಹಾಗೆ ಮಾಡಲು ಪ್ರಯತ್ನಿಸಬೇಕಿತ್ತು. ಅದು ಬಿಟ್ಟು ನಾನು ಮೊದಲಿದ್ದ ವಾರ್ಡಿಗೆ ಕಳಿಸಿ ಕೈ ತೊಳೆದುಕೊಂಡರು.
5. ಆ ಗಳಿಗೆಯಲ್ಲಿ ನಾನು ನರರೋಗಿಯಾಗಿದ್ದೆ. ನನ್ನನ್ನು ನರವೈದ್ಯ ತಜ್ಞರಿಗೆ ರೆಫರ್ ಮಾಡುವ ಬದಲು ೨೩ ದಿನಗಳವರೆಗೂ ಮೆಡಿಸಿನ್ ಡೆಪಾರ್ಟ್ಮೆಂಟಿನವರೇ ಇಟ್ಟುಕೊಂಡು, ೨೩ ದಿನಗಳ ನಂತರ ನನ್ನ ಕಡೆಯವರು ಬಂದು ಗಲಾಟೆ ಮಾಡಿದ ನಂತರ ನ್ಯೂರಾಲಜಿಯವರಿಗೆ ರೆಫರ್ ಮಾಡಿದರು.
6. ಈ ಟೆಸ್ಟ್ ಮಾಡುವಾಗ ಒಂದು ದ್ರವವನ್ನು ಕ್ಯಾಥೆಟರ್ ಮೂಲಕ ದೇಹಕ್ಕೆ ಕೊಡುತ್ತಾರೆ. ಅದನ್ನು ಕಾಂಟ್ರಾಸ್ಟ್ ಮೀಡಿಯಾ ಎನ್ನುತ್ತಾರೆ. ಅದರ ಟೆಸ್ಟ್ ಡೋಸ್ ಕೊಟ್ಟು ಏನೂ ತೊಂದರೆಯಾಗದಿದ್ದರೆ ಫುಲ್ ಡೋಸ್ ಕೊಡಬೇಕು. ಡಾಕ್ಟರ್ ಟೆಸ್ಟ್ ದೋಸೆ ಕೊಡುವ ಬದಲು ಓವರ್ ಡೋಸ್ ಕೊಟ್ಟಿದ್ದರು.
7. ಜೊತೆಗೆ ಕಾಂಟ್ರಾಸ್ಟ್ ಮೀಡಿಯಾವಾಗಿ ಉತ್ತಮ ಗುಣಮಟ್ಟದ ಅಯೋಹೆಕ್ಸಾಲ್ ಉಪಯೋಗಿಸುವ ಬದಲು ಸೋಡಿಯಂ ಅಯೋಥೇಲಮೇಟ್ ಎಂಬ ಕಡಿಮೆ ಗುಣಮಟ್ಟದ್ದನ್ನು ಉಪಯೋಗಿಸಿದ್ದರು.
ಇವುಗಳೆಲ್ಲ ವೈದ್ಯರ ತಾತ್ಸಾರವಲ್ಲವೇ? ನಾನು ಬಲಿಪಶುವಾದುದಕ್ಕೆ. ನನಗೆ ಸರಿಯಾದ ಮಾಹಿತಿ ಕೊಡದೆ ಟೆಸ್ಟ್ ಮಾಡಿದ ವೈದ್ಯರು ಮತ್ತು ಸಂಸ್ಥೆ ಹೊಣೆಯಲ್ಲವೇ? ನನಗೆ ಸೂಕ್ತ ಪರಿಹಾರ ಕೊಟ್ಟು ಸಹಾಯ ಹಸ್ತ ನೀಡಬೇಕಾದ್ದು ಸಂಸ್ಥೆಯ ಮಾಲೀಕರ ಹೊಣೆಯಲ್ಲವೇ?
ನರಿಯ ಕೂಗು ಗಗನಕ್ಕೆ ಕೇಳಿಸೀತೇ? ಎಂಬ ಗಾದೆಯಂತೆ ನನ್ನ ಕೂಗು ಸಂಸ್ಥೆಯ ಮಾಲೀಕರಿಗೆ ಕೇಳಿಸಲೇ ಇಲ್ಲ. ಪ್ರಾಣಭಯ ತೊರೆದಾಗ ಇಲಿಯಾದರೂ ಹುಲಿಯ ಕಣ್ಣನ್ನು ಕಿತ್ತೀತು ಎಂಬಂತೆ ಅನಿವಾರ್ಯವಾಗಿ ನ್ಯಾಯಾಲಯದಲ್ಲಿ ಕೇಸು ಹಾಕಲು ನಿರ್ಧರಿಸಿದೆ. ನನಗೆ ಪರಿಹಾರ ದೊರೆತು ನನ್ನ ಹೆಂಡತಿ ಮಕ್ಕಳ ಬದುಕು ಒಳ್ಳೆಯದಾಗಲಿ ಎಂಬುದು ಒಂದು ಕಾರಣವಾದರೆ, ನನ್ನ ಜೀವನವನ್ನು ನರಕಸದೃಶ ಮಾಡಿದಂತಹಾ ಹೊಣೆಗೇಡಿಗಳು ಇನ್ಯಾರಾದರೂ ಇದ್ದರೆ ಅವರೂ ಜಾಗೃತಗೊಳ್ಳಲಿ ಎಂಬುದು ಮತ್ತೊಂದು ಕಾರಣವಾಗಿತ್ತು.
ಸ್ಟೇಟ್ ಕನ್ಸೂಮರ್ ಕೋರ್ಟಿನ ನಿರ್ಧಾರ ಹೊರಬಂದಾಗ rank ಪಡೆಯಲು ಪ್ರಯತ್ನ ಪಟ್ಟು ಫೇಲಾದ ವಿದ್ಯಾರ್ಥಿಯ ಮನಸ್ಸಿನಂತಾಗಿತ್ತು ನನ್ನ ಮನಸ್ಸು. ೨-೩ ದಿನ ಸೋಲನ್ನು ಮರೆಯುವುದು ತುಂಬಾ ಕಷ್ಟವಾಯಿತು. ಯಾವುದರಲ್ಲಾದರೂ ಗೆದ್ದಾಗ ಸಂತೋಷ ಪಡುತ್ತೇವೆ. ಅಂತೆಯೇ ಸೋತಾಗ ಸಂಕಟ ಪಡುವುದು ಅದನ್ನು ಸಹಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದುಕೊಂಡು ಸೋಲನ್ನು ಮರೆತು ಮುಂದೇನು ಮಾಡಬೇಕು ಎಂದು ಯೋಚಿಸತೊಡಗಿದೆ. ನೀರಿಗೆ ಬಿದ್ದಮೇಲೆ ಚಳಿಯೇನು? ದೆಹಲಿಯ ನ್ಯಾಷನಲ್ ಕನ್ಸೂಮರ್ ಕೋರ್ಟಿನಲ್ಲಿ ಅಪೀಲು ಮಾಡುವೆನೆಂದು ನಿರ್ಧರಿಸಿದೆ.
ಅಪ್ಪ ನ್ಯಾಷನಲ್ ಕನ್ಸೂಮರ್ ಕೋರ್ಟಿನಲ್ಲಿ ಅಪೀಲು ಮಾಡುವುದೆಂದು ನಿರ್ಧರಿಸಿದ್ದೇನೋ ಸರಿ, ಆದರೆ ಅದಕ್ಕೆ ಬೇಕಾಗುವ ವಕೀಲರನ್ನು ಹುಡುಕುವುದು, ಬೇಕಾಗುವ ಫೀಸನ್ನು ರೆಡಿಮಾಡಿಕೊಳ್ಳುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಜೊತೆಗೆ ಒಂದು ಬಾರಿ ಸೋತಿದ್ದರಿಂದ ಆಪ್ತರು “ಯಾಕೆ ಸುಮ್ಮನೆ ಖರ್ಚು ಮಾಡಿ ಕೈ ಕಾಲಿಮಾಡಿಕೊಳ್ಳುತ್ತೀ? ಅದಕ್ಕಿಂತ ಆ ದುಡ್ಡನ್ನು ನಿನ್ನ ಔಷಧಿಗಾಗಿ, ಸಂಸಾರ ನಿರ್ವಹಣೆಗಾಗಿ ಉಪಯೋಗಿಸಬಹುದಲ್ಲ” ಎಂಬ ರೀತಿಯ ನೇರ ಉಪದೇಶ ಕೊಡುತ್ತಿರುವಾಗ, ಹೊರಗಿನವರ ಮತ್ತು ತನ್ನ ಮನಸ್ಸಿನ ಸಂಶಯಗಳನ್ನು ಮೆಟ್ಟಿ, ಆದದ್ದಾಗಲಿ ಎಂದು ತಮ್ಮ ಸಂಘರ್ಷವನ್ನು ಮುಂದುವರೆಸಬೇಕಾದಾಗ ಅವರು ಅನುಭವಿಸಿದ ಪ್ರತಿ ಕ್ಷಣ ನನ್ನ ಕಣ್ಣ ಮುಂದೆ ಅವತ್ತಿನಷ್ಟೇ ಹಸಿಯಾಗಿ ಉಳಿದಿದೆ. ಆ ಸೋಲು ಗೆಲುವುಗಳ ಆಕಾಂಕ್ಷೆ ನಿರೀಕ್ಷೆಗಳನ್ನು ಮೀರಿದ ಪ್ರಯತ್ನ ನನ್ನ ಬದುಕಿಗೆ ದಾರಿದೀಪವಾಗಿದೆ.
ನಮ್ಮ ಕೇಸನ್ನು ನೆಡೆಸಿಕೊಟ್ಟ ಬೆಂಗಳೂರಿನ ವಕೀಲರ ರಿಲೇಟಿವ್ ಒಬ್ಬರು ದೆಹಲಿಯಲ್ಲಿ ವಕೀಲರಾಗಿದ್ದರು. ಅವರು ಅಪ್ಪನ ಕೇಸನ್ನು ತೆಗೆದುಕೊಳ್ಳಲು ಒಪ್ಪಿದರು. ಆ ನಂತರ ಸುಮಾರು ವರ್ಷಗಳ ಕಾಲ ನ್ಯಾಷನಲ್ ಕನ್ಸೂಮರ್ ಕೋರ್ಟಿನಲ್ಲಿ ನಮ್ಮ ಕೇಸು ನೆಡೆಯಿತು. ಎರಡೂ ಮೂರೋ ವರ್ಷಕ್ಕೊಮ್ಮೆ ಕೇಸು ಲಿಸ್ಟ್ ಆಗುತ್ತಿತ್ತು. ಅದನ್ನು ನಾವು ಕಾತುರದಿಂದ ಕಾಯುತ್ತಿದ್ದೆವು. ಕೇಸು ನೆಡೆಯುತ್ತಿದ್ದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ನಮ್ಮ ಜೀವನ ಓಡುತ್ತಿತ್ತು.
ಅಪ್ಪನ ಮನಸ್ಸಿನಲ್ಲಿ ಆ ಸಮಯಗಳಲ್ಲಿ ಏನು ಓಡುತ್ತಿತ್ತು ಎಂದು ಅವರ ಡೈರಿಯನ್ನು ಓದಿದಾಗ ಅರಿವಾಗುತ್ತದೆ.
“ನಾಲ್ಕು ಗೋಡೆಗಳ ನಡುವೆಯೇ ನನ್ನ ಬದುಕು ಸೀಮಿತಗೊಂಡಿತ್ತು. ನಾಲ್ಕು ಗೋಡೆಗಳ ಮಧ್ಯದಲ್ಲೇ ನೆಮ್ಮದಿಯಿಂದ ಬದುಕುವುದನ್ನು ಅಭ್ಯಾಸ ಮಾಡತೊಡಗಿದೆ. ಅದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ. ಸಾಕಷ್ಟು ಅಭ್ಯಾಸ ಮಾಡಬೇಕಾಯಿತು. ನನ್ನ ಜೀವನವನ್ನು ನಾನು ಯಾರ ಜೀವನದೊಂದಿಗೂ ಹೋಲಿಸಿಕೊಳ್ಳುತ್ತಿರಲಿಲ್ಲ. ನನ್ನೆದುರಿನ ಜೀವನವನ್ನು ಬೇಡ ಎನ್ನಲಿಲ್ಲ. ಅದರಲ್ಲೇ ನೆಮ್ಮದಿಯನ್ನು ಕಾಣಲು ಪ್ರಯತ್ನಿಸಿದೆ. ಎಲ್ಲರೂ ನೆಡೆಯುತ್ತಾರೆ, ನಾನು ನೆಡೆಯಲಾರೆ. ಎಲ್ಲರೂ ಮದುವೆ ಮುಂಜಿ ಸಮಾರಂಭಗಳಿಗೆ ಹೋಗುತ್ತಾರೆ. ನನಗೆ ಹೋಗಲಾಗುವುದಿಲ್ಲ. ಎಲ್ಲರೂ ಏನೇನೂ ಮಾಡುತ್ತಾರೆ. ನನಗೆ ಮಾಡಲು ಆಗುವುದಿಲ್ಲ. – ಹೀಗೆ ನಾನೆಂದೂ ಯೋಚಿಸುತ್ತಿರಲಿಲ್ಲ. ಯಾವುದು ನನ್ನಿಂದ ಸಾಧ್ಯವಿಲ್ಲವೋ ಅದು ನನಗೆ ಬೇಡ ಎಂದು ಆ ಬಗ್ಗೆ ಒಂದು ನಿಮಿಷವೂ ಯೋಚಿಸುತ್ತಿರಲಿಲ್ಲ. ಮನಸ್ಸಿನ ನೆಮ್ಮದಿಗಾಗಿ ಕೆಲವು ನಿಯಮಗಳನ್ನು ಅನುಸರಿಸಲು ಅಭ್ಯಾಸ ಮಾಡಿದೆ.
– ನನಗಿಂತ ಹೆಚ್ಚು ಕಷ್ಟದಲ್ಲಿರುವವರ ಬಗ್ಗೆ ಯೋಚಿಸುತ್ತಿದ್ದೆ. ಅವರಿಗಿಂತ ನಾನೇ ಉತ್ತಮ ಎಂದು ಯೋಚಿಸುತ್ತಿದ್ದೆ. ನನಗಿಂತ ಉತ್ತಮ ಮಟ್ಟದಲ್ಲಿರುವವರ ಬಗ್ಗೆ ಯೋಚಿಸುತ್ತಿರಲಿಲ್ಲ. ಯೋಚಿಸಿದಷ್ಟೂ ಮನಸ್ಸು ಅಶಾಂತವಾಗುತ್ತಿತ್ತು.
– ನಿನ್ನೆ ನಾಳೆಗಳ ಬಾಗಿಲುಗಳನ್ನು ಮುಚ್ಚಿ ಆಯಾಯಾ ದಿನದಲ್ಲಿ ಬದುಕಲು ಪ್ರಯತ್ನಿಸಿದೆ. ಇಂದಿನ ಮಟ್ಟಿಗೆ ನಾನು ಸಂತೋಷದಿಂದ ಬದುಕಬೇಕು. ಇಂದಿನ ಮಟ್ಟಿಗೆ ನನ್ನ ಕರ್ತವ್ಯಗಳನ್ನು ಮಾಡಬೇಕು. ಇಂದಿನ ಮಟ್ಟಿಗೆ ನನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು. ಇಂದಿನ ಮಟ್ಟಿಗೆ ಹೆಂಡತಿ ಮಕ್ಕಳ ಅರೋಗ್ಯ, ವಿದ್ಯಾಭ್ಯಾಸದ ಬಗ್ಗೆ ಜಾಗ್ರತೆ ವಹಿಸಬೇಕು. ಇಂದಿನ ಮಟ್ಟಿಗೆ ನನ್ನ ತೋಟವನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಬೇಕು. ಹೀಗೆ ಜೀವನದಲ್ಲಿ ಬರುವಂತಹ ಎಲ್ಲಾ ವಿಚಾರಗಳಲ್ಲೂ “ಇಂದಿನ ಮಟ್ಟಿಗೆ” ಎಂದು ಯೋಚಿಸಿ ಅಂದಿನ ಮಟ್ಟಿಗೆ ಕಾರ್ಯಪ್ರವೃತ್ತನಾಗುತ್ತಿದ್ದೆ.
-ಗಂಜಿ ಸಿಕ್ಕಿದರೆ ಗಂಜಿ ಊಟ ಮಾಡೋಣ. ಮೊಸರನ್ನ ಸಿಕ್ಕಿದರೆ ಅದನ್ನು ಊಟ ಮಾಡೋಣ. ಏನಿದೆಯೋ ಅದನ್ನು ಸಂತೋಷದಿಂದ ಊಟ ಮಾಡೋಣ, ತೃಪ್ತಿಯಿಂದಿರೋಣ ಎಂದು ಯೋಚಿಸುತ್ತಿದ್ದೆ.
-ತೃಪ್ತಿಯಿಲ್ಲದ ಲಕ್ಷಾಧೀಶ್ವರನಿಗಿಂತ ತೃಪ್ತಿ ಇರುವ ಭಿಕ್ಷುಕನೇ ಶ್ರೀಮಂತ ಎಂಬುದು ನನ್ನ ಭಾವನೆ. ನಮಗೆ ಇಲ್ಲದ್ದನ್ನು ಮಾಡುವ ಛಲ ಇರಬೇಕು. ಆದರೆ ಇದ್ದುದರಲ್ಲಿ ತೃಪ್ತಿಯೂ ಇರಬೇಕು. ದೊಡ್ಡ ದೊಡ್ಡ ಬಂಗಲೆಗಳಲ್ಲಿ ಇರುವವರಿಗೂ ದೇವರು ೨೪ ಗಂಟೆಗಳನ್ನು ಕೊಟ್ಟಿದ್ದಾನೆ. ಗುಡಿಸಲಿನಲ್ಲಿ ಇರುವವರಿಗೂ ೨೪ ಗಂಟೆಗಳನ್ನೇ ಕೊಟ್ಟಿದ್ದಾನೆ. ಕೊಟ್ಯಾಧಿಪತಿಯಾದರೂ ಸುಮಾರಾಗಿ ಊಟ ಮಾಡುವುದು ಭಿಕ್ಷಾಧಿಪತಿಯಷ್ಟೇ. ನಿದ್ದೆ ಮಾಡುವುದೂ ಅಷ್ಟೇ. ಉಸಿರಾಡುವುದೂ, ನೀರು ಕುಡಿಯುವುದೂ ಎಲ್ಲಾ ಅಷ್ಟೇ. ಒಂದು ದಿನ ಅವನೂ ಸಾಯುತ್ತಾನೆ. ಇವನೂ ಸಾಯುತ್ತಾನೆ. ಎಲ್ಲಾ ತೃಪ್ತಿ-ಅತೃಪ್ತಿಗಳ ಎರಡು ಮುಖ ಅಷ್ಟೇ. ತೃಪ್ತಿ ಇರುವವನೇ ಶ್ರೀಮಂತ. ತೃಪ್ತಿ ಇಲ್ಲದವನೇ ಬಡವ. ನನ್ನ ಯೋಚನಾ ಲಹರಿಗಳು ಈ ರೀತಿಯಲ್ಲಿ ಹರಿಯುತ್ತಿತ್ತು. ಈ ರೀತಿಯ ಯೋಚನೆಗಳು ನನ್ನ ನೆಮ್ಮದಿಯನ್ನು ಹೆಚ್ಚಿಸುತ್ತಿದ್ದವು.
-ನನಗೆ ಒಳ್ಳೆಯ ಪತ್ನಿ ಇದ್ದಾಳೆ. ಒಳ್ಳೆಯ ಮಕ್ಕಳಿದ್ದಾರೆ. ಒಳ್ಳೆಯ ಸಹೋದರರು, ತಂದೆ ತಾಯಿಯರೂ ಇದ್ದಾರೆ. ಒಳ್ಳೆಯ ಮಿತ್ರರಿದ್ದಾರೆ. ನನ್ನ ತೋಟದ ಕೆಲಸಗಳನ್ನು ಮಾಡಲು ಒಳ್ಳೆಯ ಕೆಲಸಗಾರರು ಇದ್ದಾರೆ. ನನ್ನ ಯೋಗಕ್ಷೇಮ ನೋಡಿಕೊಳ್ಳಲು ಒಳ್ಳೆಯ ವೈದ್ಯರಿದ್ದಾರೆ. ಕುಳಿತಲ್ಲಿಗೇ ಊಟ ತಿಂಡಿ ಕಾಫಿ ಎಲ್ಲಾ ಬರುತ್ತೆ. ನಾನಿರುವಲ್ಲಿಗೇ ನನ್ನನ್ನು ನೋಡಬೇಕಾದವರೆಲ್ಲರೂ ಬರುತ್ತಾರೆ. ಇವೆಲ್ಲಾ ನನ್ನ ಸುಕೃತವಲ್ಲವೇ? ನನ್ನ ಅದೃಷ್ಟವಲ್ಲವೇ? ಎಷ್ಟು ಜನ ಕಷ್ಟದಲ್ಲಿರುವವರಿಗೆ ಈ ಭಾಗ್ಯ ದೊರಕೀತು? ಎಂದು ಯೋಚಿಸುತ್ತಿದ್ದೆ. ಸುಖ ಕಷ್ಟ ಎಂಬುದು ನಮ್ಮ ಮನಸ್ಸಿನ ಭಾವನೆಯೇ ಹೊರತು ನಿಜವಾಗಿ ಸುಖ ಕಷ್ಟ ಎಂದೂ ಬೇರೆ ಬೇರೆ ಅಲ್ಲ ಎಂದು ಅರಿತುಕೊಂಡೆ. ಹಾಗೆಂದು ನನಗೇನೂ ಸಮಸ್ಯೆಗಳೇ ಇರಲಿಲ್ಲವೆಂದಲ್ಲ. ಅವೆಲ್ಲಾ ಆಕಾಶದಲ್ಲಿಯ ಮೋಡದಂತೆ ಚಲಿಸಿ ದೂರವಾಗುತ್ತಿದ್ದವು. ಕಾಣದ ಕೈಯೊಂದು ನನ್ನ ಯೋಗಕ್ಷೇಮವನ್ನು ನೋಡುತ್ತಿತ್ತು. ಯಾರ ಯಾರ ರೂಪದಲ್ಲೂ ಬಂದು ನನಗೆ ಸಹಾಯ ಮಾಡುತ್ತಿತ್ತು.
-ಡೇಲ್ ಕಾರ್ನಿಗೆಯವರ “How to stop worrying and start living” ಮತ್ತು ಇನ್ನಿತರ ಅವರ ಪುಸ್ತಕಗಳೂ, ರಾಮಾಯಣ, ಮಹಾಭಾರತ, ಭಗವದ್ಗೀತೆಯ ಪುಸ್ತಕಗಳು ನೋವನ್ನು ಸಹಿಸಿಕೊಂಡು ಬದುಕುವುದಕ್ಕೆ ದಾರಿ ತೋರಿಸುತ್ತಿವೆ.
ಅಪ್ಪ ಬದುಕಿರುವ ವರೆಗೆ ಅವರ ಡೈರಿಯನ್ನು ಓದುವ ಸಾಹಸವನ್ನು ನಾವೆಂದೂ ಮಾಡಲಿಲ್ಲ. ಓದಬೇಡಿ ಎಂದು ಅವರೆಂದೂ ಹೇಳಿದ್ದಿಲ್ಲ. ಆದರೆ ಸದಾ ನಮ್ಮ ಜೀವನವನ್ನು ರೂಪಿಸುವ ಪ್ರಯತ್ನದಲ್ಲಿದ್ದ ಅವರ ಬುದ್ಧಿವಾದಗಳನ್ನು ಕೇಳುತ್ತಿದ್ದ ನಮಗೆ, ಅವರ ಡೈರಿಯಲ್ಲಿ ನಾವು ಕೇಳುತ್ತಿದ್ದ ವಿಷಯಗಳಿಗಿಂತ ಹೆಚ್ಚಿನದಿದೆಯೆಂಬ ಕುತೂಹಲಕ್ಕಿಂತಲೂ ಸುಮ್ಮನೆ ಏನೋ ಬರೆಯುತ್ತಾ ಇರುತ್ತಾರೆ ಎಂಬ ಉಪೇಕ್ಷೆಯೇ ಜಾಸ್ತಿಯಿತ್ತು. ಆ ಉಪೇಕ್ಷೆಯನ್ನು ಮೀರಿ ಅಂದೇ ಅವರ ಡೈರಿಯನ್ನು ಓದಿದ್ದರೂ ಇಂದು ಅರ್ಥವಾದಂತೆ ಅರ್ಥವಾಗುತ್ತಿತ್ತೆಂದಾಗಲೀ, ಇಂದು ಆದಂತೆ ಅಂದು ಕಣ್ಣು ಹನಿಗೂಡುತ್ತಿತ್ತೆಂದಾಗಲೀ ನಂಬಲಾರೆ. ಆದರೆ ಇಂದು ಎಲ್ಲೂ ಓದಿದ್ದು ನೆನಪಿಗೆ ಬರುತ್ತದೆ. “My father didn’t tell me how to live; he lived, and let me watch him do it”.
ಈ ಮಧ್ಯದಲ್ಲಿ ಅಪ್ಪ ಮಲಗಿರುವಾಗ, ಅಪ್ಪನ ಕಾಲಿಗೆ ಇಲಿಯೊಂದು ಕಚ್ಚಿತು. ಆದ ಗಾಯಕ್ಕೆ ಮುಲಾಮು ಹಚ್ಚಿ ಮಲಗಿದ್ದಾಗ ಇರುವೆಗಳು ಮುತ್ತಿ ಅಪ್ಪನ ಕಾಲನ್ನು ತಿಂದು ರಂದ್ರ ಮಾಡಿದವು. ಕಾಲಿಗೆ ಸ್ಪರ್ಶಜ್ಞಾನ ಇಲ್ಲದ ಕಾರಣ ಕಚ್ಚುವಾಗ ಅಪ್ಪನಿಗೆ ತಿಳಿಯುತ್ತಿರಲಿಲ್ಲ. ಗಾಯ ವಾಸಿ ಮಾಡಲು ಎರಡು ವರ್ಷ ಬೇರೆ ಬೇರೆ ಮುಲಾಮುಗಳನ್ನು ಉಪಯೋಗಿಸಿದರು. ಆದರೆ ಯಾವುದೂ ಉಪಯೋಗಕ್ಕೆ ಬರಲಿಲ್ಲ. ಆಗ ನಮ್ಮ ಆಪ್ತ ಡಾಕ್ಟರ್ ಒಬ್ಬರು “ಉಪ್ಪು ನೀರಿನಲ್ಲಿ ತೊಳೆದು ಕೊಬ್ಬರಿ ಎಣ್ಣೆ ಹಚ್ಚಿ ಎಂದು” ಸಲಹೆ ಕೊಟ್ಟರು. ಒಂದೇ ತಿಂಗಳಲ್ಲಿ ಕಾಲಿನ ಗಾಯಗಳು ವಾಸಿಯಾದವು.
ಇಷ್ಟೆಲ್ಲಾ ಆದಮೇಲೆಯೂ ಅಪ್ಪ ಪುನಃ ತಪಾಸಣೆಗೆಂದು ಅದೇ ಆಸ್ಪತ್ರೆಗೆ ಪುನಃ ಹೋಗಿ, ಕಾಲಿಗೆ ಕೃತಕವಾಗಿ ಹಾಕಿಕೊಳ್ಳುವ ಕ್ಯಾಲಿಪರ್ ತರಬೇತಿಯನ್ನು ಪಡೆಯುವುದಕ್ಕಾಗಿ ೧೪-೧೫ ದಿನ ಇದ್ದು ಬಂದರು. ಒಂದು ಕಡೆ ಕೇಸು ಅದರಷ್ಟಕ್ಕೆ ಅದು ನೆಡೆಯುತ್ತಿತ್ತು. ಆದರೆ ಡಾಕ್ಟರ್ ಗಳ ಸೇವೆಗಾಗಲೀ, ಅವರ ಮೇಲಿದ್ದ ಅಪ್ಪನ ಬಂಡ ಧೈರ್ಯಕ್ಕಾಗಲೀ ಮಿತಿಯಿರಲೇ ಇಲ್ಲ. ಎಷ್ಟೋ ಸಾರಿ ಕೆಲವರು ಹೇಳಿದ್ದಿದೆ. ಹೇಗೋ ಅಲ್ಲಿಗೆ ಹೋಗುತ್ತೀ? ಏನಾದರೂ ಮಾಡಿದರೆ? ಅಪ್ಪನಿಗೆ ಆ ರೀತಿಯ ಯೋಚನೆಗಳೂ ಹತ್ತಿರ ಸುಳಿಯುತ್ತಿರಲಿಲ್ಲ. ಎಲ್ಲರಲ್ಲೂ ಒಳ್ಳೆಯತನವಿರುತ್ತದೆ. ನಂಬಿಕೆಯನ್ನು ತೋರಿಸಿದರೆ ಆ ಒಳ್ಳೆಯತನ ಹೊರಬರುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಹಾಗಂತ ಅಪ್ಪನಿಗೆ ಬೇಕಾದ ವಿಶೇಷ ಸವಲತ್ತನ್ನೇನೂ ಆ ಆಸ್ಪತ್ರೆಯವರು ಮಾಡಿಕೊಡುವ ಕಾಳಜಿಯನ್ನು ತೋರಿಸುತ್ತಿರಲಿಲ್ಲ. ಅಪ್ಪ ಅಲ್ಲಿಗೆ ಕ್ಯಾಲಿಪರ್ ತರಬೇತಿ ಪಡೆಯಲು ಹೋದಾಗ, ಐಸೋಲೇಷನ್ ವಾರ್ಡಿನಲ್ಲಿ ಉಳಿಸಿದರು. ಪಕ್ಕದ ರೂಮುಗಳಲ್ಲಿ ಸಿಡುಬು ಆದ ೩-೪ ಜನರಿದ್ದರಂತೆ. ಬಂದವರೆಲ್ಲಾ ಅವರನ್ನು ಆ ವಾರ್ಡಿನಲ್ಲಿ ಇರಿಸಿದ ಬಗ್ಗೆ ಆಶ್ಚರ್ಯಗೊಳ್ಳುವುದನ್ನು ಕಂಡು ಅಪ್ಪನಿಗೂ ಹೆದರಿಕೆ ಶುರುವಾಯಿತಂತೆ. ತನಗೆ ಈಗಾಗಲೇ ಆಗಿರುವುದನ್ನೇ ಸಹಿಸಿಕೊಳ್ಳುವ ಶಕ್ತಿಯಿಲ್ಲ, ಸಿಡುಬಿನಂತಹ ರೋಗವನ್ನು ಅಂಟಿಸಿಕೊಂಡು ಹೋದರೆ ಬದುಕುವುದು ಕಷ್ಟ ಎಂದು ಒಂದು ಅರ್ಜಿ ಬರೆದು ಮೆಡಿಕಲ್ ಸೂಪರಿಂಟೆಂಡೆಂಟ್ ಅವರಿಗೆ ಕಳಿಸಿದರೆ, ಅವರ ರೂಮಿನ ಹೊರಗೆ ಕುಳಿತ ಇನ್ನೊಬ್ಬರು ಅರ್ಜಿ ತೆಗೆದುಕೊಂಡು ಅಮ್ಮನನ್ನು ಸುಪರಿಂಟೆಂಡೆಂಟ್ ಬಳಿಗೆ ಹೋಗಲು ಬಿಡಲೇ ಇಲ್ಲವಂತೆ. ಬೇರೆ ವಾರ್ಡ್ ಕೊಡಲು ಸಾಧ್ಯವೇ ಇಲ್ಲ ಎಂದು ಹೇಳಿಕಳಿಸಿದರಂತೆ. ಅಪ್ಪ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಬಂದು ಎರಡು ಕಬ್ಬಿಣದ ಸರಳುಗಳನ್ನು ತರಿಸಿ ಒಂದರ ಪಕ್ಕ ಇನ್ನೊಂದನ್ನು ಲಗತ್ತಿಸಿ, ಕ್ಯಾಲಿಪೆರ್ ಹಾಕಿಕೊಂಡು ಆ ಸರಳುಗಳನ್ನು ಮೇಲೆ ಕೈಯ ಬಾರ ಹಾಕಿ, ಎರಡೂ ಕಾಲನ್ನು ಒಟ್ಟಿಗೇ ಎತ್ತಿ ಮುಂದೆ ಇರಿಸುತ್ತಾ ನೆಡೆಯುವ ಅಭ್ಯಾಸ ಮಾಡಿಕೊಂಡರು. ಮೊದಮೊದಲು ೫ ಮೀಟರುಗಳ ಒಂದು ದಾರಿಯನ್ನು ಮುಗಿಸುವುದೇ ಕಷ್ಟವಾಗುತ್ತಿತ್ತಂತೆ. ಆಮೇಲೆ ಅಭ್ಯಾಸಬಲದಿಂದ ಬೆಳಿಗ್ಗೆ ಒಂದು ಗಂಟೆ ಸಂಜೆ ಒಂದು ಗಂಟೆ ನೆಡೆಯುವ, ಅಲ್ಲ ಜಿಗಿಯುವ ಅಭ್ಯಾಸ ರೂಡಿಸಿಕೊಂಡರು.
ಆದರೆ ಬಹಳಷ್ಟು ಸಮಯ ಮಲಗಿಯೇ ಕಳೆಯುತ್ತಿದ್ದರಿಂದ ಹಿಂಬಾಗದಲ್ಲಿ ಎರಡು ಬೆಡ್ ಸೊರ್ ಆಗಿತ್ತು. ಅದು ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗಿ ಒಂದು ಕಡೆ ಒಂದು ಲಿಂಬೆಹಣ್ಣಿನ ಗಾತ್ರದ ಹೊಂಡವಾದರೆ, ಇನ್ನೊಂದು ಕಡೆ ಅರ್ಧ ತೆಂಗಿನ ಕಾಯಿಯ ಗಾತ್ರದಷ್ಟು ಆಳವಾಗಿದ್ದ ಗಾಯವಾಯಿತು. ಸುಮಾರು ಮೂರು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದರೂ ಗಾಯ ವಾಸಿಯಾಗಲೇ ಇಲ್ಲ. ಆ ಗಾಯಗಳೇ ತಮ್ಮ ಸಾವಿಗೆ ಕಾರಣವಾಗುವುದೋ ಏನೋ ಎಂಬಂತಹ ನಿರಾಶೆಯ ಮೋಡಗಳು ಅಪ್ಪನನ್ನು ಕವಿಯಲಾರಂಭಿಸಿದವು. ಸದಾ ಗಾಯದ್ದೇ ಯೋಚನೆ. ಒಮ್ಮೆ ರಾತ್ರಿ ೧೦ ಗಂಟೆಗೆ ಆ ತೆಂಗಿನ ಕಾಯಿಯ ಗಾತ್ರದಲ್ಲಿದ್ದ ಗಾಯದಿಂದ ರಕ್ತ ಸುರಿಯಲು ಶುರುವಾಗಿ ಹೇಗೆ ತಡೆಯುವುದೆಂದು ತಿಳಿಯದೆ ಅಪ್ಪ ಅಮ್ಮ ಒದ್ದಾಡುತ್ತಿರುವಾಗ, ಐಸ್ ಕ್ಯೂಬನ್ನು ಪ್ಲಾಸ್ಟಿಕ್ ಕವರಿಗೆ ಹಾಕಿ, ಡಾಕ್ಟರ್ ಬರುವವರೆಗೆ ಅದನ್ನು ಗಾಯದ ಮೇಲೆ ಇಟ್ಟು ರಕ್ತ ಹೆಪ್ಪುಗಟ್ಟಿಸುವ ನನ್ನ ಪ್ರಯತ್ನವನ್ನೂ ಅದರ ಹಿಂದಿದ್ದ ಗಾಭರಿ ಮತ್ತು ಹೆದರಿಕೆಗಳನ್ನೂ ಮರೆಯಲಾರೆ. ಪುನಃ ಆ ಆಪ್ತ ಡಾಕ್ಟರ ಸಲಹೆಯಂತೆ ಉಪ್ಪುನೀರು ಹಾಕಿ ತೊಳೆದು ಒಣಗಿಸಿಕೊಳ್ಳುವ ಪ್ರಯತ್ನದಲ್ಲೇ ಆ ಬೆಡ್ ಸೊರ್ ಕೂಡ ಗುಣವಾಗಿತ್ತು.
ಇಷ್ಟರ ಜೊತೆ ಕೊಳವೆ ಹಾಕಿ ಮೂತ್ರ ತೆಗೆಯುವುದು ಕಷ್ಟವಾಗುತ್ತಾ ಬಂತಂತೆ. ಆಗಾಗ ಮೂತ್ರದ ಬದಲು ರಕ್ತ ಬರಲು ಶುರುವಾಯಿತಂತೆ. ಪುನಃ ಅಪ್ಪ ಆ ದೊಡ್ಡ ಆಸ್ಪತ್ರೆಗೆ ಹೋಗಿ ಸೇರಿದರು. ಎರಡು ದಿನಗಳಲ್ಲಿ ಹಲವಾರು ಟೆಸ್ಟುಗಳನ್ನು ಮಾಡಿ, ಮೂತ್ರನಾಳವನ್ನು ಸ್ವಲ್ಪ ಕೊರೆದು ದೊಡ್ಡ ಮಾಡಬೇಕು ಎಂಬ ಸಲಹೆ ಕೊಟ್ಟರಂತೆ. ಅದರ ಬಗ್ಗೆ ಅಪ್ಪನ ಡೈರಿಯಲ್ಲಿ ಇರುವ ವಿವರಗಳು ಹೀಗಿವೆ. ” ಹಿಂದಿನ ದಿನ ಪೂರ್ವಭಾವಿ ಸಿದ್ಧತೆಗಳಿಗಾಗಿ ನನ್ನನ್ನು ಆಪರೇಷನ್ ಥಿಯೇಟರಿಗೆ ಕರೆದುಕೊಂಡು ಹೋದರು. ಆಗ ನಾಲ್ಕು ಗಂಟೆ. ಮೂತ್ರ ತೆಗೆಯುವ ಸಮಯವಾಗಿತ್ತು. ಮೂತ್ರ ತೆಗೆಯಲು ಕ್ಯಾಥೆಟರ್ ಹಾಕಿದಾಗ ರಕ್ತ ಬಂತು. ಅದನ್ನು ನೋಡಿದ ಡಾಕ್ಟರ್ ಮರುದಿನ ಮಾಡಬೇಕೆಂದಿದ್ದ ಆಪರೇಷನ್ ಆ ಕ್ಷಣವೇ ಮಾಡುವ ತೀರ್ಮಾನ ತೆಗೆದುಕೊಂಡು ನನಗೆ ವಿಚಾರ ತಿಳಿಸಿದರು. ನಾನು ಸಮ್ಮತಿಸಿದೆ. ಪರದೆ ಅಡ್ಡಕತ್ತಲಾಗಿತ್ತು. ನನಗೆ ಅನಸ್ತೇಶಿಯಾ ಕೊಟ್ಟಿರಲಿಲ್ಲ. ಹಾಗಾಗಿ ನನಗೆ ಅರಿವಿತ್ತು. ಆದರೆ ಅವರೇನು ಮಾಡುತ್ತಿದ್ದಾರೆ ಎಂದು ಕಾಣಿಸುತ್ತಿರಲಿಲ್ಲ. ಒಂದುವರೆಗಂಟೆಯ ಕಾಲದವರೆಗೂ ನಗುನಗುತ್ತಾ ಕೆಲಸ ಮಾಡುತ್ತಿದ್ದ ವೈದ್ಯರುಗಳ ಮುಖ ಗಂಭೀರವಾಗತೊಡಗಿತು. ಥಿಯೇಟರಿನಲ್ಲಿ ಮೌನ ನೆಲಸಿತ್ತು. ಮತ್ತೂ ಒಂದೂವರೆ ಗಂಟೆಯ ಕಾಲ ನನ್ನನ್ನು ಥೇಟರಿನಲ್ಲೇ ಇಟ್ಟುಕೊಂಡರು. ಕೊನೆಯಲ್ಲಿ ಈ ರೀತಿ ತಿಳಿಸಿದರು. “ಭಟ್ಟರೇ, ನಾವು ಸೋತೆವು. ಏನು ಮಾಡಿದರೂ ಬ್ಲೀಡಿಂಗ್ ನಿಲ್ಲುತ್ತಿರಲಿಲ್ಲ. ಸ್ವಲ್ಪ ಕೊರೆದು ದೊಡ್ಡ ಮಾಡಿದೆವು. ಇನ್ನೆಷ್ಟು ಕೊರೆಯಬೇಕೆಂದು ಕಾಣುತ್ತಿಲ್ಲ. ಹಾಗಾಗಿ ಇನ್ನೊಂದು ವಾರ ಬ್ಲೀಡಿಂಗ್ ನಿಲ್ಲುವವರೆಗೆ ಕಾಯಬೇಕಾಗಬಹುದು.”
ಆಪರೇಷನ್ ಥಿಯೇಟರ್ ಹೊರಗೆ ಕುಳಿತು ಕಾಯುತ್ತಿದ್ದ ಅಮ್ಮನ ಕಣ್ಣಿನಲ್ಲಿ ಅಸಹಾಯಕತೆಯ ಕಂಬನಿಯಿತ್ತು. ಆಚೀಚೆ ಓಡಾಡುತ್ತಿದ್ದ ಡಾಕ್ಟರುಗಳನ್ನು ನೋಡುತ್ತಿದ್ದ ಹಾಗೆ ಆಕೆಯ ಮನಸ್ಸು ಹಿಂದಕ್ಕೆ ಓಡಿತ್ತು. ೫ ಮಕ್ಕಳು ಇದ್ದ ತುಂಬಿದ ಸಂಸಾರದಲ್ಲಿ ಎರಡನೇ ಸಂತಾನವಾದ ಆಕೆ ಹಿರಿಯ ಮಗಳು.
ಇಬ್ಬರು ತಂಗಿಯರು, ಒಬ್ಬ ಅಣ್ಣ ಮತ್ತು ಒಬ್ಬ ತಮ್ಮ. ಎಲ್ಲರೂ ಬುದ್ದಿವಂತರೇ. ಅದರಲ್ಲೂ ಗಣಿತದಲ್ಲಿ ಒಬ್ಬರಿಗಿಂತ ಒಬ್ಬರು ಬುದ್ದಿವಂತರು. ೧೨ನೇ ತರಗತಿಯಲ್ಲಿ ಆ ಕಾಲದಲ್ಲಿ ೭೫% ಮಾರ್ಕ್ಸ್ ತೆಗೆದುಕೊಂಡು ಉತ್ತೀರ್ಣಳಾಗಿ ಡಾಕ್ಟರ್ ಆಗುವ ಕನಸು ಕಾಣುತ್ತಿದ್ದರೆ, ಒಂದೆಡೆಯಿಂದ ಓದು ಸಾಕು ಮದುವೆ ಮಾಡೋಣ ಎಂಬ ಅಭಿಪ್ರಾಯಗಳು ಹಿರಿಯರಿಂದ ಬರಲು ಪ್ರಾರಂಭಿಸಿದ್ದವು. ಒಪ್ಪದಿದ್ದಾಗ ಕಾಲೇಜಿಗೆ ಹೋಗುವುದಾದರೆ ಸೀರೆ ಉಟ್ಟುಕೊಂಡು ಹೋಗಬೇಕು ಎಂಬ ಕಟ್ಟುಪಾಡು. ಆಗ ಲಂಗ ದಾವಣಿಯ ಕಾಲ. ಉಳಿದವರೆಲ್ಲರೂ ಲಂಗ ದಾವಣಿ ಧರಿಸಿಕೊಂಡು ಕಾಲೇಜಿಗೆ ಬರುವಾಗ ತಾನು ಮಾತ್ರ ಅಮ್ಮನ ಹತ್ತಿರ ಇದ್ದ ೨ ಸೀರೆಗಳನ್ನು ಉಟ್ಟುಕೊಂಡು ಹೋಗುವುದು ಅಮ್ಮನಿಗೆ ಒಪ್ಪಿಗೆಯಿಲ್ಲದ ವಿಷಯವಾಗಿತ್ತು. ಆದರೆ ಅದೊಂದೇ ತನ್ನ ಜೀವನವನ್ನು ಹೀಗೆ ಬದಲಿಸುತ್ತದೆ ಎಂದು ಗೊತ್ತಿದ್ದರೆ, ಮುಂದಿದ್ದ ಜೀವನಕ್ಕಿಂತ ಸೀರೆಯನ್ನು ತನ್ನದಾಗಿಸಿಕೊಂಡು ಕಾಲೇಜಿಗೆ ಹೋಗುತ್ತಿದ್ದಳೇನೋ. ಆದರೆ ಮುಂದೆ ಆಗುವ ವಿಧಿಯ ಆಟಗಳನ್ನು ತಿಳಿಸಿ ಎಚ್ಚರಿಸುವವರಾರು? ಅಮ್ಮ ಕಾಲೇಜು ಬಿಟ್ಟು ದೊಡ್ಡಮ್ಮನಿಗೆ ನೆರವಾಗುತ್ತಾ ಮನೆಯಲ್ಲಿ ಉಳಿದಳು. ಬೆಜ್ಜವಳ್ಳಿ ಆ ಸಮಯದಲ್ಲಿ ಈಗಿನಂತಿರಲಿಲ್ಲ. ಅದೊಂದು ಹಳ್ಳಿಯಾಗಿತ್ತು. ಮನೆಯಲ್ಲಿ ಸಾಕಷ್ಟು ದನಕರುಗಳು, ಜಮೀನು ಇದ್ದುದರಿಂದ ಹಳ್ಳಿಮನೆಯ ಕೆಲಸ ಕಾರ್ಯಗಳು ಅಮ್ಮನಿಗೆ ಹೊಸದೇನಾಗಿರಲಿಲ್ಲ. ಆದರೆ ತೀರ್ಥಹಳ್ಳಿಯಲ್ಲಿ ೧೧-೧೨ನೇ ತರಗತಿಗಳನ್ನು ಮುಗಿಸಿದ್ದರಿಂದ ಹಳ್ಳಿಮನೆಗಿಂತ ಪೇಟೆಯೇ ಉತ್ತಮ ಎನ್ನುವ ಭಾವನೆ ಅಮ್ಮನಲ್ಲಿ ಮೂಡಿತ್ತು. ಜೊತೆಗೆ ಪೇಟೆಯ ಕನಸು ಕಾಣುವಾಗ ತನ್ನ ಡಾಕ್ಟರ್ ಆಗುವ ಕನಸು ಆಗಿನ್ನೂ ಒಡೆದಿರಲಿಲ್ಲ.
ಒಂದು ವರ್ಷ ಬಿಟ್ಟು ಅಪ್ಪನ ಮನೆಯ ಕಡೆಯಿಂದ ಸಂಬಂಧದ ಪ್ರಸ್ತಾವ ಬಂದಿತ್ತು. . ಹೆಣ್ಣಿಗೆ ಒಪ್ಪಿಗೆ ಇದೆಯೇ ಇಲ್ಲವೇ ಕೇಳುವವರಾರು? ದೊಡ್ಡವರು ನಿಶ್ಚಯಿಸಿದರೆ ಆಯಿತು. ಮದುವೆ ಮುಗಿದಂತೆ. ಬೆಜ್ಜವಳ್ಳಿಗಿಂತ ಹಳ್ಳಿಮನೆಯನ್ನು ಸೇರುವೆ ಎಂದು ತಿಳಿದಂದಿನಿಂದಲೂ ಅಮ್ಮನಿಗೆ ಸಂತೋಷವಿರಲಿಲ್ಲ. ಬೇಸರಿಸುತ್ತಲೇ ತನ್ನ ಡಾಕ್ಟರ್ ಆಗುವ ಕನಸುಗಳನ್ನು ವಿಧೇಯತೆಗೆ ಬಲಿಕೊಟ್ಟು ತನಗಿಷ್ಟವಿಲ್ಲದ ಜೀವನವನ್ನು ತನ್ನದಾಗಿಸಿಕೊಂಡಳು. ಈಗ ಕೇಳಿದರೆ, “ನಾವೆಲ್ಲಾ ನಿನ್ನ ತರಹ ವಕ್ರ ಅಲ್ಲವಲ್ಲ. ಹಿರಿಯರು ಹೇಳಿದ್ದಕ್ಕೆ ಎದುರಾಡುತ್ತಿರಲಿಲ್ಲವಲ್ಲ ” ಎಂದು ಹಾರಿಸಿ “ಎಲ್ಲರ ಜೀವನ ಮೊದಲೇ ನಿರ್ಧಾರವಾಗಿರುತ್ತದೆ. ನಾವು ಸುಮ್ಮನೆ ಅಂದುಕೊಳ್ಳುವುದಷ್ಟೇ, ಹಾಗಾಗಬಹುದಿತ್ತು, ಹೀಗಾಗಬಹುದಿತ್ತು ಎಂದು ” ಎಂದು ಮುಗಿಸುತ್ತಾಳೆ. ಇದೊಂದು ವಿಷಯದಲ್ಲಿ ನಾವಿಬ್ಬರೂ ಒಂದೇ ಅಭಿಪ್ರಾಯಕ್ಕೆ ಬರುವುದು ಸಾಧ್ಯವೇ ಇಲ್ಲವೇನೋ. ಅಮ್ಮ ಎಲ್ಲವನ್ನೂ ಪ್ರಶ್ನಿಸುವ, ಪ್ರಯತ್ನಿಸುವ ನನ್ನ ಗುಣವನ್ನು ವಕ್ರ ಎಂದರೆ ನನಗೆಂದೂ ಬೈದಂತೆ ಎನ್ನಿಸಿದ್ದೇ ಇಲ್ಲ. ಬದಲಾಗಿ ಒಂದು ರೀತಿಯ ಸಂತೋಷ. ಒಮ್ಮೊಮ್ಮೆ ಅಮ್ಮನಲ್ಲಿ ಸಮಂಜಸವಾದ ಉತ್ತರವಿಲ್ಲವೆಂದು ಅರಿತು ಪಾಪ ಎಂದು ನನ್ನ ಪ್ರಶ್ನೆಗಳನ್ನು ನಿಲ್ಲಿಸುವುದುಂಟೇ ಹೊರತು ಹಿರಿಯರು ಹೇಳಿದ್ದನ್ನೆಲ್ಲಾ ಹೇಳಿದಂತೆಯೇ ಕೇಳಬೇಕು ಎಂಬ ಒಪ್ಪಿಗೆಯಿಂದಲ್ಲ. ಆ ನನ್ನ ಸ್ವಭಾವಕ್ಕೆ ನನ್ನ ಅಪ್ಪ ನೀರೆರೆಯದಿದ್ದರೆ, ಜೊತೆಯಾಗಿ ನಿಲ್ಲದಿದ್ದರೆ, ನಾನೂ ಎಲ್ಲೂ ಕಳೆದುಹೋಗುತ್ತಿದ್ದೆನೇನೋ ಎಂದು ಕೆಲವೊಮ್ಮೆ ಹೆದರಿಕೆಯಾಗುವುದುಂಟು. ಹಿರಿಯರೆಡೆಯ ವಿಧೇಯತೆಯೇ ಅತಿ ಹೆಚ್ಚಿನ ಮೌಲ್ಯವಾಗಿದ್ದ ಸಮಯದಲ್ಲಿ, ಎಲ್ಲರೂ ಅದನ್ನೇ ಅನುಸರಿಸಿಕೊಂಡು ಬದುಕುವಾಗ, ಒಬ್ಬಂಟಿಯಾಗಿ ಸರಿ ತಪ್ಪುಗಳನ್ನು ಪ್ರಶ್ನಿಸುವುದು ಅಷ್ಟು ಸುಲಭವೇನಲ್ಲ ಎಂದು ನಾನೂ ಕಂಡುಕೊಂಡ ಸತ್ಯ. ಎಲ್ಲರೂ, ಇಡೀ ಸಮಾಜವೂ ಒಂದೆಡೆಗೆ ಚಲಿಸುತ್ತಿರುವಾಗ ತಮ್ಮದೇ ದಾರಿಯನ್ನು ಹಿಡಿಯಲು, ತಮಗೆ ಸರಿ ಎನಿಸಿದ್ದನ್ನು ಮಾಡಲು ಸಾಕಷ್ಟು ಮನಸ್ಥೈರ್ಯ ಬೇಕಾಗುತ್ತದೆ. ಕೆಲವೊಮ್ಮೆ ತಾವೇ ತಪ್ಪು ದಾರಿಯಲ್ಲಿದ್ದೇವೋ ಎಂಬ ಸಂಶಯ ಮೂಡುವುದೂ ಸಹಜ.
ಅಪ್ಪನ ಮನೆಯಿದ್ದುದು ಕಡಗೋಡು ಎಂಬ ಹಳ್ಳಿಯಲ್ಲಿ. ಆ ಊರಿನಲ್ಲಿ ಇದ್ದಿದ್ದು ಬರೀ ೨ ಮನೆ. ಅಜ್ಜನದೊಂದಾದರೆ, ಅಜ್ಜನ ಅಣ್ಣನದು ಇನ್ನೊಂದು. ಬಿಟ್ಟರೆ, ಒಂದು ಗಣಪತಿ ದೇವಸ್ಥಾನ. ಮನೆಯ ಪಕ್ಕದಲ್ಲಿದ್ದ ಗುಡ್ಡದ ಮೇಲೊಂದು ಈಶ್ವರ ದೇವಸ್ಥಾನ. ಬೇರೆ ಊರಿಗೆ ಹೋಗಬೇಕೆಂದು ಬಸ್ಸನ್ನು ಹಿಡಿಯಬೇಕಾದರೆ , ೩ ಮೈಲಿ ನೆಡೆದು, ೨ ನದಿ ದಾಟಿ, ೨ ಗುಡ್ಡಗಳನ್ನು ಹತ್ತಿ ಇಳಿದು ಬಸ್ಸು ಬರುವ ನಿಡಗೋಡು ಎಂಬ ಊರನ್ನು ಸೇರಬೇಕಿತ್ತು. ಒಂದು ನದಿಗಂತೂ ಸರಿಯಾದ ಸೇತುವೆಯೂ ಇರಲಿಲ್ಲ. ಅಪ್ಪ, ಚಿಕ್ಕಪ್ಪ ಎಲ್ಲರೂ ಸೇರಿ ಅಡಿಕೆ ಮರದ ಕಾಂಡಗಳನ್ನು ಸೇರಿಸಿ ಸೇತುವೆ ಕಟ್ಟುತ್ತಿದ್ದರು. ಅದು ನೆಡೆಯುವಾಗ ತೂಗಾಡುತ್ತಿತ್ತು. ಸೇತುವೆ ಮೇಲೆ ನೆಡೆಯಲು ಸಾಮಾನ್ಯದವರಿಗೆ ಧೈರ್ಯ ಸಾಕಾಗುತ್ತಿರಲಿಲ್ಲ. ಕೆಳಗೆ ನೋಡಿದರೆ ಕೇಸರಿ ಬಣ್ಣದ ಹರಿಯುವ ದಾರಿಯಲ್ಲಿ ಸಿಕ್ಕ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿರುವ ನೀರು. ಅಮ್ಮನಿಗೆ ಇದೆಲ್ಲ ಅಭ್ಯಾಸವಾಗಲು ಅದೆಷ್ಟು ಕಷ್ಟವಾಯಿತೋ ಏನೋ?
ಅಪ್ಪನ ಮನೆಯಲ್ಲಿ ಮೊದಲೇ ಹೇಳಿದಂತೆ ತುಂಬಿದ ಸಂಸಾರ. ಮಾವ ಅತ್ತೆ, ೩ ಜನ ಮೈದುನರು. ಒಬ್ಬರು ಅತ್ತಿಗೆ. ಒಬ್ಬಳು ನಾದಿನಿ. ಕೊಟ್ಟಿಗೆಯಲ್ಲಿ ೮ ಕರೆಯುವ ಅಂದರೆ ಹಾಲು ಕೊಡುವ ದನ -ಎಮ್ಮೆಗಳು. ೪ ಊಳುವ ಜೋಡೆತ್ತುಗಳು. ೩೦-೪೫ ಉಳಿದ ದನ, ಕೋಣ, ಗುಡ್ಡಗಳು(ಚಿಕ್ಕ ಗಂಡುಎತ್ತುಗಳು) . ದೊಡ್ಡ ಮನೆ. ಗದ್ದೆ ತೋಟದ ಕೆಲಸ ಮಾಡುವ ಕೆಲಸಗಾರರು. ಅಜ್ಜ ದೊಡ್ಡಮ್ಮ ಮಲಗುವ ರೂಮು ಕೆಳಗಿದ್ದುದರಿಂದ, ಮಹಡಿ ಮೇಲಿದ್ದ ಎಲ್ಲಾ ರೂಮುಗಳಿಗೂ ಕಾಲಿಂಗ್ ಬೆಲ್ಲು. ಬೆಳಿಗ್ಗೆ ೫ ಗಂಟೆಗೆ ದೊಡ್ಡಮ್ಮನ ಬೆಲ್ಲಿನಿಂದ ದಿನ ಶುರುವಾದರೆ, ಮುಗಿಯುವುದು ರಾತ್ರಿ ೯-೯:೩೦ ಗೆ. ಅಡಿಕೆ ಕುಯಿಲಿನ ಸಮಯದಲ್ಲಿ ೧೧:೦೦-೧೨:೦೦ ಗಂಟೆ ರಾತ್ರಿಯವರೆಗೆ ಮನೆಯವರೆಲ್ಲರೂ ಕೆಲಸಗಾರರೊಂದಿಗೆ ಕೈ ಜೋಡಿಸಿ ಅಡಿಕೆ ಸುಳಿಯುತ್ತಿದ್ದರು. ಅಪ್ಪ ಚಿಕ್ಕಪ್ಪ ಎಲ್ಲರೂ ಗದ್ದೆ ಮತ್ತು ತೋಟದ ಕೆಲಸಕ್ಕೆ ಹೋಗಿ ಕೆಲಸಗಾರರಿಗೆ ಸಮವಾಗಿ ಶ್ರಮಪಡುತ್ತಿದ್ದರು.
ಮನೆಯ ಹೆಂಗಸರಿಗೆ ಬೆಳಿಗ್ಗೆ ಎದ್ದರೆ ಮೊದಲ ಕೆಲಸವೇ ಕೊಟ್ಟಿಗೆಗೆ ಹೋಗುವುದು. ದೊಡ್ಡಮ್ಮನೂ ಜೊತೆಗೆ ಬರುತ್ತಿದ್ದರಂತೆ. ಕೊಟ್ಟಿಗೆಯಲ್ಲಿ ಎಲೆಕ್ಟ್ರಿಕ್ ದೀಪವಿದ್ದರೂ, ಕರೆಂಟ್ ಹೋಗಿದ್ದಾಗಲೆಲ್ಲಾ ಲ್ಯಾಟೀನು ತೆಗೆದುಕೊಂಡು ಹೋಗಿ ಕೊಟ್ಟಿಗೆಯ ಗೋಡೆಯ ಮೇಲಿಟ್ಟು, ಕೆಳಗೆ ಸೊಪ್ಪಿನ ಮೇಲೆ ತುದಿಗಾಲಿನಲ್ಲಿ ಕುಳಿತುಕೊಂಡು ಹಾಲು ಕರೆಯಬೇಕಿತ್ತು. ಆ ಸೊಪ್ಪಿನಲ್ಲೂ ಗೊಬ್ಬರದ ಹುಳಗಳು, ಇಂಬಳಗಳು ತುಂಬಿರುತ್ತಿದ್ದವು. ಅವುಗಳ ಮೇಲೆಯೇ ಕುಳಿತು ಹಾಲು ಕರೆಯುವುದು, ದನಕರುಗಳಿಗೆ ಗಂಜಿ ಹಿಂಡಿ -ಬೂಸವನ್ನು ಹಾಕುವುದು ಸುಖಕರವೇನಾಗಿರಲಿಲ್ಲ. ಈ ಕಷ್ಟವನ್ನು ನೋಡಲಾರದೆ ಮುಂದೆ ಯಾವಾಗಲೋ ಅಜ್ಜ ಪ್ಲಾಸ್ಟಿಕ್ ಬೂಟುಗಳನ್ನು ತಂದುಕೊಟ್ಟಿದ್ದರಂತೆ.
ಗದ್ದೆ ನೆಟ್ಟಿ ಮಾಡುವ ಸಮಯದಲ್ಲಿ ೧೪-೧೫ ಜನ ಕೆಲಸಗಾರರಿಗೆ ಬಿಸಿಬಿಸಿ ಊಟ ತಿಂಡಿ ಮಾಡಿ ಕೊಡಬೇಕಿತ್ತು. ದಿನವಿಡೀ ಒಂದಲ್ಲಾ ಒಂದು ಕೆಲಸ. ಮನೆಯವರೆಲ್ಲಾ ಕೂಡಿ ಕೆಲಸ ಮಾಡಿದರೂ ಸಾಕಾಗದಷ್ಟು ಕೆಲಸ. ಸಂಜೆ ಪುನಃ ಕೊಟ್ಟಿಗೆ ಕೆಲಸ. ಮೇಯಲು ಹೋದ ದನಕರುಗಳೋ ಅವದ್ದೇ ಸಮಯದಲ್ಲಿ ಹಾಜರಾಗುತ್ತಿದ್ದವೇ ಹೊರತು ಇವರ ಬೇಗ ಕೆಲಸ ಮುಗಿಸುವ ಕಾತುರತೆಗೆ ಸರಿಯಾಗಿ ಕೊಟ್ಟಿಗೆಗೆ ಬರುತ್ತಿರಲಿಲ್ಲ.
ಆಗ ಇನ್ನೂ ಟಿವಿ ಬಂದಿರಲಿಲ್ಲ. ಬರೀ ರೇಡಿಯೋ. ಯಾವಾಗಲಾದರೂ ಯಾರಾದರೂ ಪೇಟೆಗೆ ಹೋದರೆ ತರುತ್ತಿದ್ದ ಪ್ರಜಾಮತ ಮತ್ತು ತುಷಾರ ಪುಸ್ತಕಗಳನ್ನು ಬಿಟ್ಟರೆ ಬುದ್ದಿಶಕ್ತಿಗೆ ಕಸರತ್ತನ್ನು ಒಡ್ಡುವ ಯಾವ ಮಾರ್ಗಗಳೂ ಇರುತ್ತಿರಲಿಲ್ಲ. ಇದ್ದುದರಲ್ಲಿ ಅಜ್ಜ ಒಂದು ಬಟ್ಟೆ ಹೊಲಿಯುವ ಮಶೀನನ್ನು ತಂದುಕೊಟ್ಟಿದ್ದರು. ಅವರಿವರ ಬಟ್ಟೆ ಹೊಲಿದುಕೊಡುವುದು ಅಮ್ಮ ಕಂಡುಕೊಂಡು ಒಂದು ಹವ್ಯಾಸವಾದರೆ, ಮಣಿಗಳನ್ನು ಪೋಣಿಸಿ ಬೇರೆ ಬೇರೆಯ ಪ್ರಾಣಿ ಪಕ್ಷಿಗಳನ್ನು ಮಾಡುವುದು, ವಯರಿನಿಂದ ಬುಟ್ಟಿಯನ್ನು ಹೆಣೆಯುವುದು ಮುಂತಾದವೇ ಅಲ್ಲಿ ಮನಸ್ಸಿಗೆ ಮುದಕೊಡುವ ಕಾರ್ಯಗಳು. ನನಗೆ ನೆನಪಿರುವಂತೆ ಅಮ್ಮ ಆ ಸಮಯದಲ್ಲಿ ಎಂದೂ “ನನಗೆ ಈ ಜೀವನ ಇಷ್ಟವಿಲ್ಲ” ಎಂದು ಹೇಳಿದ್ದಾಗಲೀ, ತನ್ನ ಕೆಲಸ ಕಾರ್ಯಗಳಲ್ಲಿ ಅಸಡ್ಡೆ ತೋರಿಸಿದ್ದಾಗಲೀ ಇಲ್ಲ. ಯಾರೂ ತನ್ನ ಬಗ್ಗೆ ಒಂದೂ ಕೆಟ್ಟ ಮಾತನ್ನು ಆಡದಂತೆ ಕೆಲಸ ಕಾರ್ಯಗಳನ್ನು ಮಾಡಿಕೊಂಡು, ಕರ್ತವ್ಯಗಳನ್ನು ನಿರ್ವಹಿಸುವುದೇ ಆಕೆಯ ಗುರಿಯಾಗಿತ್ತು. ಎಷ್ಟೋ ಸಮಯ ಅಮ್ಮ ಸ್ವಲ್ಪ ಹೊತ್ತು ನಮ್ಮ ಜೊತೆ ಕೂರಬಾರದೇ ಎಂದು ಅನಿಸಿದ್ದಿದೆ. ಆದರೆ ಅವಳಿಗೆ ಯಾವಾಗಲೂ ಮುಂದಿನ ಕೆಲಸ ಮುಗಿಸುವ ಕಾತುರ. ಸುಮ್ಮನೆ ಕುಳಿತು ನಮ್ಮ ಜೊತೆ ಸಮಯ ಕಳೆದದ್ದು ನನಗೆ ನೆನಪಾಗುವುದೇ ಇಲ್ಲ.
ಅಪ್ಪ ಅಮ್ಮನ ಮದುವೆಯಾಗುವ ಹಿಂದಿನ ವರ್ಷ ಕಟ್ಟಿದ ಮನೆ, ಅಜ್ಜ ದೊಡ್ಡಮ್ಮ ಅಪ್ಪ ಚಿಕ್ಕಪ್ಪಂದಿರ ಕನಸಿನ ಮನೆ. ರಾಜ್ಯಕ್ಕೆ ಬೆಳಕು ಕೊಡಲು ತಯಾರಾದ ವಾರಾಹಿ ಹೈಡ್ರೊ ಎಲೆಕ್ಟ್ರಿಕ್ ಪವರ್ ಪ್ರೋಜೆಕ್ಟಿನ ಹಿನ್ನೀರಿನಲ್ಲಿ ಮುಳುಗಲು ಬೇಕಾಗಿದ್ದು ಬರೀ ೧೦ ವರ್ಷ. ಮನೆಯಿಂದ ಸುಮಾರು ೩೦೦ ಮೀಟರ್ ದೂರದಲ್ಲಿದ್ದ ನದಿಯ ನೀರು ಮನೆಯವರೆಗೆ ಬರುತ್ತದಂತೆ ಎಂಬ ಗಾಳಿಮಾತು ೧೯೮೫ರಲ್ಲಿ. ಕೊಡೆ ಅಮಾವಾಸ್ಯೆಯ ಸಮಯದಲ್ಲಿ ನೆರೆ ಬಂದ ನೀರು ಮನೆಯೊಳಗೇ ಮುನ್ನುಗ್ಗಿದಾಗ ಕೆಳಮನೆಯಲ್ಲಿದ್ದ ಸಾಮಾನುಗಳನ್ನೆಲ್ಲವನ್ನೂ ಉಪ್ಪರಿಗೆಗೆ ಸಾಗಿಸಿ ಅಜ್ಜ ಮತ್ತು ಅವರ ಅಣ್ಣನ ಮನೆಯವರೆಲ್ಲರೂ ಪಕ್ಕದ ಗುಡ್ಡದಲ್ಲಿದ್ದ ಈಶ್ವರ ದೇವಸ್ಥಾನದಲ್ಲಿ ೧೦-೧೨ ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ದೋಣಿಯಲ್ಲಿ ಭುಜದವರೆಗೆ ನೀರಿದ್ದ ಮನೆಯೊಳಗೇ ಹೋಗಿ ಉಪ್ಪರಿಗೆಯಿಂದ ಅಕ್ಕಿ, ಸಾಮಾನುಗಳನ್ನು ತಂದು ಮಳೆನೀರನ್ನು ಹಿಡಿದು ಅಡಿಗೆ ಮಾಡಿ ಒಟ್ಟಿಗೆ ಉಂಡು ಎಲ್ಲರೂ ಆ ಅನಿರೀಕ್ಷಿತವನ್ನು ಎದುರಿಸಿದ್ದರು. ನೆರೆಬಂದ ನೀರಿನಲ್ಲಿ ಹಾವು ಚೇಳು ಎಲ್ಲವೂ ಇರುತ್ತಿದ್ದವು. ಮನೆಯೊಳಗೇ ಅವೆಲ್ಲಾ ನುಗ್ಗಿರುವಾಗ, ನೀರಿನಲ್ಲಿ ನೆಡೆದುಕೊಂಡು ಒಳಗೆ ಹೋಗಿ ಸಾಮಾನು ತರುತ್ತಿದ್ದುದು ಇಂತಹ ಸಾಹಸ ಎಂದು ಅಮ್ಮ ಚಿಕ್ಕಮ್ಮನ ಬಾಯಲ್ಲೇ ಕೇಳಿದ್ದ ಕಥೆಗಳು. ಇಷ್ಟರ ಜೊತೆಗೆ ಮನೆಯಲ್ಲಿ ಬಂದು ಸೇರಿದ್ದ ದೂರದ ಸಂಬಂದಿ ಹಿರಿಯರೊಬ್ಬರು ಅದೇ ಸಮಯದಲ್ಲಿ ತೀರಿಕೊಂಡಿದ್ದರು. ದೋಣಿಯಲ್ಲಿ ಮೃತದೇಹವನ್ನೂ, ಕಟ್ಟಿಗೆಯನ್ನೂ ಹಾಕಿಕೊಂಡು ಹೋಗಿ ನದಿಯ ಇನ್ನೊಂದು ದಡದಲ್ಲಿದ್ದ ಸ್ಮಶಾನದಲ್ಲಿ ಸುಡಲು ಪ್ರಯತ್ನಿಸಿದರೆ ದಿನವಿಡೀ ಸುರಿಯುತ್ತಿದ್ದ ಮಳೆ ಬೆಂಕಿಯನ್ನು ಹೊತ್ತಿಸಲೇ ಬಿಡುತ್ತಿರಲಿಲ್ಲವಂತೆ. ಅಂತೋ ಕೊನೆಗೆ ಹೇಗೋ ಸುಟ್ಟುಹಾಕಿ ಬಂದ ಕಥೆಯನ್ನು ಅಪ್ಪ ಚಿಕ್ಕಪ್ಪ ಎಲ್ಲಾ ವಿವರಿಸುತ್ತಿದ್ದರೆ, ನಮಗೆ ಹೊಟ್ಟೆಯಲ್ಲಿ ನಡುಕ.
ಇನ್ನೂ ಆ ಮನೆಯಲ್ಲಿಯೇ ವಾಸಿಸಿ ನೆರೆಯನ್ನು ಕಾಯುವುದು ಮೂರ್ಖತನವೆಂದು ತಿಳಿದ ಅಜ್ಜ, ತೀರ್ಥಹಳ್ಳಿಯಲ್ಲಿ ಒಂದು ಹಳೆ ಮನೆಯನ್ನು ಕೊಂಡುಕೊಂಡು, ಕಡಗೋಡಿನ ಮನೆಯನ್ನು ಒಡೆದು, ಇದ್ದ ಸಾಮಾನುಗಳನ್ನು ತೆಗೆದುಕೊಂಡು ಬಂದು ಎಲ್ಲರೂ ತೀರ್ಥಹಳ್ಳಿಯಲ್ಲಿ ವಾಸಿಸುವುದೆಂದು ನಿರ್ಧರಿಸಿದ್ದರು. ತಾವೇ ಕಟ್ಟಿದ ಆ ಕನಸಿನ ಮನೆಯನ್ನು ಒಡೆಯುವ ಕೆಲಸಕ್ಕೆ ಅಪ್ಪ ಮತ್ತು ದೊಡ್ಡ ಚಿಕ್ಕಪ್ಪ ನಿಂತರೆ, ನಾವು ಮಕ್ಕಳನ್ನು ಸ್ಕೂಲಿಗೆ ಸೇರಿಸಿ ನಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅಜ್ಜ ದೊಡ್ಡಮ್ಮ ಮತ್ತು ಚಿಕ್ಕ ಚಿಕ್ಕಪ್ಪ ತೆಗೆದುಕೊಂಡರು. ಮನೆಯನ್ನು ಕಿತ್ತ ಮೇಲೆ ಒಮ್ಮೆ ನಾನು ಅಲ್ಲಿಗೆ ಹೋಗಿದ್ದೆ. ಅಜ್ಜ ದೊಡ್ಡಮ್ಮ ಅಪ್ಪ ಚಿಕ್ಕಪ್ಪಂದಿರ ಶ್ರಮದ ಸಂಕೇತವಾದ, ಒಂದೊಮ್ಮೆ ಶತಚಂಡಿ ಯಾಗದಲ್ಲಿ ಕಂಗೊಳಿಸಿದ, ನೂರಾರು ಜನರಿಗೆ ಅನ್ನದಾನ ಮಾಡಿದ ಆ ಮನೆ, ಯಜ್ಞಕುಂಡದಿಂದ ಶೋಭಿಸಿದ್ದ ಆ ಮನೆಯಂಗಳ ಸ್ಮಶಾನದಂತಾಗಿತ್ತು. ಸುತ್ತಮುತ್ತಲಿನ ಮರಗಳನ್ನೆಲ್ಲಾ ಸರ್ಕಾರದವರು ಕಾಂಟ್ರಾಕ್ಟ್ ಕೊಟ್ಟು ಆಗಲೇ ಕಡಿಸಿದ್ದರು. ಅಲ್ಲಿ ಆ ಮನೆಯಿತ್ತು ಎಂದೇ ಗೊತ್ತಾಗುತ್ತಿರಲಿಲ್ಲ. ಗದ್ದೆ ಅಂಗಳ ಎಲ್ಲ ಸಮನಾಗಿ ಬರಡಾಗಿತ್ತು. ಒಂದು ಹಸಿರು ಜೀವವೂ ಸುತ್ತ ಮುತ್ತಲಿನಲ್ಲಿ ಇರಲಿಲ್ಲ. ಅಪ್ಪ ಚಿಕ್ಕಪ್ಪ ರಾತ್ರಿ ಮಲಗಲು ಕಟ್ಟಿಕೊಂಡ ಜಂಕ್ ಶೀಟ್ ನ ಒಂದು ಚಿಕ್ಕ ಗುಡಾರ ಬಿಟ್ಟು ಅಲ್ಲಿ ಬೇರೇನೂ ಇರಲಿಲ್ಲ.
ಅಪ್ಪ ಅಮ್ಮನ ಮದುವೆಯಾಗಿದ್ದು ೧೯೭೭ರಲ್ಲಿ. ೧೯೮೬ರಲ್ಲಿ ೧೦ ವರ್ಷಗಳ ಆ ಜೀವನವನ್ನು ಮುಗಿಸಿ ತನ್ನ ಕನಸಿನ ತೀರ್ಥಹಳ್ಳಿಗೆ ಅಮ್ಮ ವಾಪಾಸಾಗಿದ್ದಳು. ಆದರೆ ಜೀವನ ಇನ್ನೇನೋ ಸವಾಲೊಡ್ಡುತ್ತದೆಂದು ಅಮ್ಮನಿಗೆ ಗೊತ್ತಿರಲಿಲ್ಲ. ಅಪ್ಪನ ಒತ್ತಾಯಕ್ಕೆ ಶಿವಮೊಗ್ಗಕ್ಕೆ ಹೋಗಿ ೨ ವರ್ಷದ ಟೈಲರಿಂಗ್ ಡಿಪ್ಲೋಮ ಮುಗಿಸಿದ್ದಳು. ಹಳ್ಳಿಯನ್ನು ಬಿಟ್ಟು ಪೇಟೆಗೆ ಬಂದು ನೆಲೆಯೂರುವಾಗ ಅಪ್ಪ ಚಿಕ್ಕಪ್ಪ ಯಾರಿಗೂ ತಮ್ಮ ಮುಂದಿನ ಜೀವನೋಪಾಯಕ್ಕೆ ಮಾರ್ಗವೇನೆಂದು ಇನ್ನೂ ತಿಳಿದಿರಲಿಲ್ಲ. ಅಲ್ಲಿಯವರೆಗೆ ಕಲಿತದ್ದು ವ್ಯವಸಾಯ ಮಾತ್ರ. ಪೇಟೆಯಲ್ಲಿ ಜೀವನಕ್ಕೆ ಒಂದು ದಾರಿಯನ್ನು ಹುಡುಕಲು ಎಲ್ಲರಿಗೂ ಸಮಯ ಬೇಕಾಗಿತ್ತು. ಅಪ್ಪನಿಗೆ ಮುಂಚಿನಿಂದಲೂ ಅಮ್ಮನನ್ನು ಓದಿಸಬೇಕೆಂದು ಕನಸು. ಅವರಿಗೆ ಒಂದು ರೀತಿಯ ಅಂತರ್ದೃಷ್ಟಿ ಇದ್ದಿತೇನೋ. ೪ ದಿನ ಮಾತು ಬಿಟ್ಟು ಒತ್ತಾಯದಿಂದ ಅಮ್ಮನನ್ನು ಟೈಲರಿಂಗ್ ಡಿಪ್ಲೋಮ ಮಾಡಲು ಒಪ್ಪಿಸಿದ್ದರು. ಅಮ್ಮ ಡಿಪ್ಲೋಮ ಮುಗಿಸುವಷ್ಟರಲ್ಲಿ ಅಪ್ಪ ಒಂದು ಸ್ಟೇಷನರಿ ಅಂಗಡಿ ಹಾಕಿದ್ದರು. ಅಷ್ಟರಲ್ಲೇ ಅಪ್ಪನಿಗೆ ಜ್ವರ ಶುರುವಾದದ್ದು ಮತ್ತು ದೊಡ್ಡ ಆಸ್ಪತ್ರೆಗೆ ಹೋಗಿದ್ದು.
ಡಾಕ್ಟರ್ ಆಗಬೇಕೆಂದು ಕನಸು ಕಂಡವಳ ಕನಸು ಫುಲ್ ಟೈಮ್ ನರ್ಸ್ ಆಗುವುದರಲ್ಲಿ ಕೊನೆಯಾಗಿತ್ತು. ಕೈಯಲ್ಲಿದ್ದ ಹಣ ನೀರಿನಂತೆ ಸುರಿದುಹೋಗುತ್ತಿತ್ತು. ಮುಂದೇನು ಎಂಬ ಪ್ರಶ್ನೆಗೆ ಉತ್ತರವಾಗಲೀ, ಉತ್ತರ ಕಂಡುಕೊಳ್ಳಲು ಸಮಯವಾಗಲೀ ಇರಲಿಲ್ಲ. ಯಾಕೆಂದರೆ ಅಪ್ಪ ಅಮ್ಮನ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದರು. ೩ ಗಂಟೆಗೊಮ್ಮೆ ಮೂತ್ರ ತೆಗೆಯಬೇಕು. ಮಂಚದಿಂದ ಇಳಿಯಲು ಸಹಾಯ ಮಾಡಬೇಕು. ಸ್ನಾನ ಊಟೋಪಚಾರ ಮಾಡಬೇಕು. ಹೀಗೆ ಇಡೀ ದಿನ ಅಮ್ಮನ ಸಮಯ ಅಪ್ಪನ ಸೇವೆ ಮತ್ತು ಮನೆಕೆಲಸಗಳಲ್ಲಿ ಮುಗಿಯುತ್ತಿತ್ತು. ಅಪ್ಪನನ್ನು ಬಿಟ್ಟು ಒಂದು ದಿನವೂ ೩ ಗಂಟೆಗಳಿಗಿಂತಲೂ ಹೆಚ್ಚು ಸಮಯ ತನ್ನ ತವರು ಮನೆಗಾಗಲೀ ಅಥವಾ ಇನ್ನೆಲಿಗಾಗಲೀ ಹೋಗಲು ಅಮ್ಮನಿಗೆ ಆಗುತ್ತಿರಲಿಲ್ಲ. ಅಪ್ಪ ಸಹ ಕೆಲವೊಮ್ಮೆ ಮಕ್ಕಳಂತೆ ಹಠ ಮಾಡುತ್ತಿದ್ದರು. ಅವರಿಗೆ ನಿದ್ದೆ ಎಷ್ಟೆಷ್ಟೋ ಹೊತ್ತಿಗೆ ಬರುತ್ತಿತ್ತು. ಎಷ್ಟೋ ಹೊತ್ತಿಗೆ ಎಚ್ಚರ ಆಗುತ್ತಿತ್ತು. ರಾತ್ರಿ ೧೧-೧೨ ಗಂಟೆಗೆ ಅಮ್ಮನನ್ನು ಎಬ್ಬಿಸಿ, ಟೀ ಮಾಡಿಕೊಡುವಂತೆ, ತಿನ್ನಲು ಮಾಡಿಕೊಡುವಂತೆ ಹಠ ಮಾಡುತ್ತಿದ್ದರು. ಒಮ್ಮೆ ಫ್ಯಾನ್ ಹಾಕಲು ಹೇಳುವುದು, ೨ ನಿಮಿಷದಲ್ಲಿ ಮನಸ್ಸು ಬದಲಿಸಿ, ಬೇಡ ಆಫ್ ಮಾಡು ಎನ್ನುವುದು. ಇನ್ನೆರಡು ನಿಮಿಷಗಳಲ್ಲಿ, ಸೆಕೆ ಆಗುತ್ತಿದೆ. ಪುನಃ ಫ್ಯಾನ್ ಹಾಕು ಎನ್ನುವುದು. ಹೀಗೆ, ಅವರ ಕೈ ಬುಡದಲ್ಲಿಯೇ ಯಾರಾದರೂ ಇದ್ದರೆ ಆದೀತು ಎನ್ನುವಂತೆ ಅಮ್ಮನನ್ನು ಕರೆಯುತ್ತಲೇ ಇರುತ್ತಿದ್ದರು. ಮನೆ ಬಸ್ ಸ್ಟಾಂಡ್ ಸಮೀಪದಲ್ಲಿ ಇದ್ದುದರಿಂದ ಬರುವವರು ಹೋಗುವವರೂ ಜಾಸ್ತಿ ಇರುತ್ತಿದ್ದರು. ಬಂದವರಿಗೆ ಕಾಫಿ, ಊಟ ತಿಂಡಿ ಮಾಡಬೇಕಿತ್ತು. ಇಷ್ಟರ ಜೊತೆ ಆಗೆಲ್ಲ ವಾಷಿಂಗ್ ಮಷೀನ್ ಇರಲಿಲ್ಲ. ಅಪ್ಪನ ಗಾಯದ ರಕ್ತ ತಾಗಿದ ಬಟ್ಟೆಗಳು, ಗೊತ್ತಿಲ್ಲದೇ ಟಾಯ್ಲೆಟ್ ಆದ ಬಟ್ಟೆಗಳು ಇವೆಲ್ಲವನ್ನೂ ಒಗೆಯಬೇಕಿತ್ತು.
ಅದರ ಕಷ್ಟ ನನಗೆ ಅರಿವಾಗುತ್ತಿತ್ತೋ ಇಲ್ಲವೋ. ಒಂದು ದಿನ ಅಪ್ಪ ಆಸ್ಪತ್ರೆಯಲ್ಲಿ ಇದ್ದಾಗ ಅಮ್ಮನೂ ಆಸ್ಪತ್ರೆಯಲ್ಲೇ ಇದ್ದ ಕಾರಣ, ಅವರ ಪಂಚೆಯನ್ನು ಅವರ ಮೇಲಿದ್ದ ಪ್ರೀತಿಯನ್ನೆಲ್ಲಾ ಒಟ್ಟುಗೂಡಿಸಿಕೊಂಡು ಬರುತ್ತಿದ್ದ ಗಾಯದ ರಸಿಕೆಯ ವಾಸನೆಯನ್ನು ಸಹಿಸಿಕೊಂಡು ತೊಳೆಯಲು ಶುರುಮಾಡಿದರೆ, ಆ ನನ್ನೆಲ್ಲಾ ಪ್ರೀತಿಯನ್ನೂ ತೂರಿಸಿಕೊಂಡು ಹೊಟ್ಟೆಯಿಂದ ವಾಕರಿಕೆ ತಾನಾಗಿಯೇ ನನ್ನ ನಿಯಂತ್ರಣವನ್ನೂ ಮೀರಿ ಬಂದಿತ್ತು. ನನ್ನ ಮೇಲೆಯೇ ನನಗೆ ಬೇಜಾರಾಗಿತ್ತು. ಆ ದಿನವನ್ನು ಎಂದೂ ಮರೆಯಲಾರೆ. ಅಮ್ಮ ಮಾಡುತ್ತಿದ್ದ ಅಪ್ಪನ ಆರೈಕೆಯ ಬೆಲೆ ಆ ದಿನ ನನಗೆ ಗೊತ್ತಾಗಿತ್ತು, ಯಾಕೆಂದರೆ ನಾನು ಒಂದು ಕ್ಷಣ ಮಾಡಿದ ಆ ಕೆಲಸ ಅವಳ ದಿನನಿತ್ಯದ ಕೆಲಸವಾಗಿತ್ತು. ವಾಸನೆಗಳನ್ನು ಸಹಿಸಿ ಸಹಿಸಿ, ಅವಳ ಮೂಗಿನ ಆಘ್ರಾಣ ಶಕ್ತಿಯೇ ಕುಂದಿ ಹೋಗಿತ್ತು. ಅಪ್ಪನಿಗೆ ಮೂತ್ರ ತೆಗೆಯಲು ಉಪಯೋಗಿಸುತ್ತಿದ್ದ ಜೆಲ್ಲಿಯನ್ನು ಮುಟ್ಟಿ ಮುಟ್ಟಿ ಅವಳ ಅಂಗೈಗಳು ಕರಗಿ ಹೋಗಿದ್ದವು. ಕರ್ತವ್ಯ ಪ್ರಜ್ಞೆಯಿಂದ ಮಾಡಿಕೊಂಡು ಹೋಗುತ್ತಿದ್ದ ಕೆಲಸ ದೇವರಿಗೆ ತೃಪ್ತಿ ತಂದಿರಲಿಲ್ಲವೇನೋ. ಪುನಃ ಅಪ್ಪ ಆಸ್ಪತ್ರೆ ಸೇರುವಂತೆ ಆಗಿತ್ತು. ಮೂತ್ರ ತೆಗೆಯಲು ಹೋದಾಗ ಬರುತ್ತಿದ್ದ ರಕ್ತದ ಸಮಸ್ಯೆಯನ್ನು ಪರಿಹರಿಸಲು ಮೂತ್ರನಾಳವನ್ನು ಕೊರೆದು ದೊಡ್ಡಮಾಡಲು ಹೋದ ಡಾಕ್ಟರುಗಳು ಸೋತು ಆಚೀಚೆ ಓಡಾಡುತ್ತಿದ್ದರೆ, ಏನಾಗುತ್ತಿದೆ ಎಂದು ತಿಳಿಯದೆ, ಇನ್ನೇನು ಕಾದಿದೆಯೋ ಎಂದು ಅಮ್ಮ ಆಪರೇಷನ್ ಥಿಯೇಟರ್ ಹೊರಗೆ ಕುಳಿತು ಕಂಬನಿ ತುಂಬಿದ ಕಣ್ಣುಗಳೊಂದಿಗೆ ಅಪ್ಪ ಹೊರಬರುವುದನ್ನು ಕಾಯುತ್ತಿದ್ದಳು.
ಮೂತ್ರನಾಳವನ್ನು ದೊಡ್ಡ ಮಾಡಲು ಕೊರೆಯುವಾಗ ಮಧ್ಯದಲ್ಲೇ ರಕ್ತಸ್ರಾವವಾಗಲು ಶುರುವಾದಾಗ ಇನ್ನೆಷ್ಟು ಕೊರೆಯಬೇಕು ಎಂದು ಗೊತ್ತಾಗದೆ, ರಕ್ತಸ್ರಾವ ನಿಲ್ಲುವವರೆಗೆ ಆಪರೇಷನ್ ನಿಲ್ಲಿಸುವ ನಿರ್ಧಾರ ಮಾಡಲು ನಿಶ್ಚಯಿಸಿದ ಡಾಕ್ಟರುಗಳು ಅಪ್ಪನಿಗೆ ಬ್ಯಾಂಡೇಜ್ ಮಾಡಿ ಮೂತ್ರ ಹೋಗಲು ಟ್ಯೂಬ್ ಜೋಡಿಸಿ ಪುನಃ ವಾರ್ಡಿಗೆ ಕಳಿಸಿದರು. ತುಂಬಾ ರಕ್ತ ಹೋಗಿದ್ದರಿಂದ ಅಪ್ಪ ನಿಶ್ಯಕ್ತರಾಗಿದ್ದರು. ಸುಧಾರಿಸಿಕೊಳ್ಳಲು ೧೦-೧೨ ದಿನ ಬೇಕಾಯಿತು. ಆಸ್ಪತ್ರೆಯಲ್ಲಿ ಸ್ಪೆಷಲ್ ವಾರ್ಡ್ ನಲ್ಲಿ ಇರುವಷ್ಟು ಅನುಕೂಲತೆ ಅಪ್ಪನಿಗೆ ಇರಲಿಲ್ಲ. ಜನರಲ್ ವಾರ್ಡ್ನಲ್ಲಿ ಇರುವಾಗ ಅಪ್ಪನ ಜೊತೆ ಅಮ್ಮನೂ ಕಷ್ಟ ಪಡುತ್ತಿದ್ದಳು. ಒಂದು ಬೆಡ್ ಶೀಟ್ ಹಾಕಿಕೊಂಡು ನೆಲದ ಮೇಲೆ ಮಲಗಬೇಕಿತ್ತು. ನಿದ್ದೆ ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಜೊತೆಗೆ ಮಧ್ಯ ಮಧ್ಯ ಎದ್ದು ಅಪ್ಪನ ಶುಶ್ರೂಷೆ ಬೇರೆ ಮಾಡಬೇಕಾಗುತ್ತಿತ್ತು. ಜನರಲ್ ವಾರ್ಡಿನಲ್ಲಿ ಇದ್ದ ಒಂದೇ ಬಾತ್ರೂಮ್ ಅನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕಿತ್ತು. ಅಲ್ಲೇ ಬಟ್ಟೆ ಒಗೆದುಕೊಳ್ಳುವುದು. ವಾರ್ಡಿನಲ್ಲೇ ಕುರ್ಚಿಯ ಮೇಲೆ ಹಾಕಿ ಒಣಗಿಸಿಕೊಳ್ಳುವುದು. ಹೀಗೆ ೧೦-೧೨ ದಿನ ಕಳೆಯುವುದು ೧೦-೧೨ ವರ್ಷಗಳನ್ನು ಕಳೆದ ಹಾಗೆ ಅಮ್ಮನಿಗೆ ಎನ್ನಿಸುತ್ತಿತ್ತು . ಇಷ್ಟರ ಜೊತೆಗೆ ಸುರಿದುಹೋಗುತ್ತಿದ್ದ ದುಡ್ಡಿನ ಚಿಂತೆ. ಮನೆಯಲ್ಲಿದ್ದರೆ ಹೇಗಾದರೂ ನೋಡಿಕೊಳ್ಳುವೆ. ಈ ಆಸ್ಪತ್ರೆಯ ಜೀವನ ಬೇಡ ಎಂದು ಅಮ್ಮ ಹೇಳುತ್ತಿದ್ದಳು.
ಆ ಕಷ್ಟಗಳಲ್ಲೂ ದೇವರು ಬೇರೆಯವರ ರೂಪದಲ್ಲಿ ಬಂದು ಸಹಾಯ ಮಾಡಿದ್ದಿದೆ. ಆ ಸೇವಾಭಾವದಿಂದ ಕೆಲಸ ಮಾಡುತ್ತಿದ್ದ ಆ ಡಾಕ್ಟರುಗಳ ಹೆಸರುಗಳನ್ನು ಅಪ್ಪ ತಮ್ಮ ಡೈರಿಯಲ್ಲಿ ಬರೆದಿಟ್ಟಿದ್ದಾರೆ. ಡಾಕ್ಟರ್ ಲಕ್ಷ್ಮಣ್ ಪ್ರಭು, ಡಾಕ್ಟರ್ ಅಶೋಕ್ ಪಂಡಿತ್ ಇವರು ಬೆಳಿಗ್ಗೆ ಸಂಜೆ ಬಂದು ತಾವೇ ಸ್ವತಃ ಕೈ ಹಾಕಿ ಮಲ ತೆಗೆದು ಸ್ವಚ್ಛಗೊಳಿಸುತ್ತಿದ್ದರಂತೆ. ಅವರ ಸೇವೆಗಾಗಿ ನಾನು ಕೃತಜ್ಞ. ಭಗವಂತ ಅವರನ್ನು ಸುಖವಾಗಿಡಲಿ ಎಂದು ಅಪ್ಪ ಡೈರಿಯಲ್ಲಿ ಬರೆದಿದ್ದಾರೆ. ಒಂದು ಕಡೆ ಅಂತಹ ಒಳ್ಳೆಯ ಡಾಕ್ಟರುಗಳಿದ್ದರೆ, ಇನ್ನು ಕೆಲವರು ಗಾಯದ ಮೇಲೆ ಬರೆ ಎಳೆದಂತೆ ಮನಸ್ಸಿಗೆ ನೋವಾಗುವಂತೆ ಮಾಡುತ್ತಿದ್ದರು. ಸ್ಪೆಷಲ್ ವಾರ್ಡ್ ಕೊಡಿ ಎಂದು ಕೇಳಿದ್ದಕ್ಕೆ, “ಎಷ್ಟೋ ಜನ ಆಕ್ಸಿಡೆಂಟ್ನಲ್ಲಿ ಕೈ ಕಾಲು ಕಳೆದುಕೊಳ್ಳುತ್ತಾರೆ, ಇಲ್ಲಿ ಬಂದು ಎಲ್ಲೆಲ್ಲೋ ಮಲಗಿ ಚಿಕಿತ್ಸೆ ಪಡೆದುಕೊಂಡು ಹೋಗುತ್ತಾರೆ. ನಿಮ್ಮದೇನು ಮಹಾ” ಎಂದು ಹೇಳಿದ ಡಾಕ್ಟರುಗಳೂ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಜೀವನಾಧಾರವಾದ ಆಸ್ಪತ್ರೆಯೇ ಅಪ್ಪನನ್ನು ಅರೆಜೀವಿಯನ್ನಾಗಿ ಮಾಡಿದ್ದು ಎಂದು ಅವರಿಗೆ ಮರೆತುಹೋಗಿತ್ತೇನೋ.
೧೪ ದಿನಗಳ ನಂತರ ಆಪರೇಷನ್ನಿಗೆ ಮತ್ತೊಂದು ದಿನವನ್ನು ಗೊತ್ತುಪಡಿಸಿದರಂತೆ. ಈಗಾಗಲೇ ನೋವು ಅನುಭವಿಸಿದ್ದರಿಂದ ಅಪ್ಪನಿಗೆ ಹೆದರಿಕೆ ಶುರುವಾಗಿತ್ತಂತೆ. ಡಾಕ್ಟರ್ ಲಕ್ಷ್ಮಣ್ ಪ್ರಭು, “ಭಟ್ಟರೇ, ನೀವು ಜೀವನದಲ್ಲಿ ಏನನ್ನೆಲ್ಲಾ ಕಳೆದುಕೊಳ್ಳಬಹುದೋ ಎಲ್ಲಾ ಕಳೆದುಕೊಂಡಾಗಿದೆ. ಇನ್ನೂ ಕಳೆದುಕೊಳ್ಳಲು ಇರುವುದು ಬಹಳ ಸ್ವಲ್ಪ. ಭಯ ಪಡಬೇಡಿ.” ಎಂದು ಹೇಳಿದರಂತೆ. ಅಪ್ಪನಿಗೆ ನಿಜ ಎನ್ನಿಸಿತಂತೆ. ಸಾವಿಗಿಂತ ಹೆಚ್ಚಿಗೆ ನನಗಿನ್ನೇನಾದೀತು ಎಂದು ಸಾಯಲು ಸಿದ್ಧರಾದರಂತೆ. ದೇವರನ್ನು ಪ್ರಾರ್ಥಿಸಿದರಂತೆ.
ಪದೇ ಪದೇ ವೈದ್ಯಕೀಯ ಅಪಘಾತಕ್ಕೊಳಗಾದ ಅಪ್ಪನಿಗೆ ಏನಾಗುವುದೋ ಎಂದು ಆಪರೇಷನ್ ದಿನ ಡಾಕ್ಟರುಗಳೇ ಹೆದರಿದ್ದರಂತೆ. ಅಪ್ಪ “ನೀವೇನೂ ಹೆದರಬೇಡಿ. ಧೈರ್ಯದಿಂದ ಮುಂದುವರೆಯಿರಿ. ನನಗೇನೂ ಆಗುವುದಿಲ್ಲ” ಎಂದು ಡಾಕ್ಟರುಗಳಿಗೆ ಹೇಳಿದರಂತೆ. ೧೮ನೇ ಗಾತ್ರದ ಕ್ಯಾಥೆಟರ್ ಅನ್ನು ಅಪ್ಪನಿಗೆ ಅಳವಡಿಸಿದರೆ, ಕೆಲವು ದಿನ ಅದನ್ನು ಹಾಗೆ ಬಿಟ್ಟರೆ, ಆ ಗಾತ್ರಕ್ಕೆ ಸರಿಯಾಗಿ ಗಾಯ ಒಣಗಿ ನಂತರ ೧೪-೧೬ ಸೈಜಿನ ಕ್ಯಾಥೆಟರನ್ನು ಸುಲಭವಾಗಿ ಉಪಯೋಗಿಸಬಹುದು ಎಂದು ಡಾಕ್ಟರುಗಳ ಅಭಿಪ್ರಾಯವಾಗಿತ್ತಂತೆ.
ಆಪರೇಷನ್ ಮುಗಿದು ಎಚ್ಚರವಾದಾಗ ಅಪ್ಪ ತಮ್ಮ ವಾರ್ಡಿನಲ್ಲಿ ಇದ್ದರಂತೆ. ಭೇಟಿಮಾಡಲು ಬಂದ ಡಾಕ್ಟರುಗಳ ಮುಖದಲ್ಲಿ ಜಯಗಳಿಸಿದ ಸಂತೋಷ ಕಾಣುತ್ತಿತ್ತಂತೆ. “ಭಟ್ಟರೇ ನಾವೆಷ್ಟು ಪ್ರಯತ್ನಿಸಿದರೂ ರಕ್ತ ಬರಲೇ ಇಲ್ಲ”ಎಂದು ತಮಾಷೆ ಮಾಡಿದರಂತೆ. ಒಂದು ತಿಂಗಳ ಕಾಲ ಆ ೧೮ರ ಸೈಜಿನ ಕ್ಯಾಥೆಟರನ್ನು ದೇಹದೊಳಗೆ ಇಟ್ಟು, ಯೂರಿನ್ ಬ್ಯಾಗ್ ಅಳವಡಿಸಿ ಎರಡನ್ನೂ ಒಂದು ತಿಂಗಳ ಕಾಲ ತೆಗೆಯಬಾರದೆಂದು ತಿಳಿಸಿದರಂತೆ. ಮೂತ್ರನಾಳ ೧೮ರ ಸೈಜಿಗೆ ಅಡ್ಜಸ್ಟ್ ಆದ ಮೇಲೆ ಮೊದಲಿನಂತೆ ೪ ಗಂಟೆಗೊಮ್ಮೆ ೧೪-೧೬ ಸೈಜಿನ ಕ್ಯಾಥೆಟರ್ ಹಾಕಿ ಮೂತ್ರ ತೆಗೆಯುವಂತೆ ಆಯಿತಂತೆ.
ಡಿಸ್ಚಾರ್ಜ್ ಮಾಡಿಸಿಕೊಳ್ಳಲು ಹೋದಾಗ ಪುಕ್ಕಟೆಯಾಗಿ ಚಿಕಿತ್ಸೆ ನೀಡುವೆವು ಎಂದು ಪತ್ರ ಬರೆದು ಕೋರ್ಟಿನಲ್ಲೂ ಅದೇ ಆಶ್ವಾಸನೆಯನ್ನು ಕೊಟ್ಟಿದ್ದ ಆಸ್ಪತ್ರೆಯವರು ೧೭ ಸಾವಿರ ರೂಪಾಯಿಗಳನ್ನು ಕಟ್ಟಬೇಕೆಂದು ಹೇಳಿದರಂತೆ. ಮೆಡಿಕಲ್ ಸುಪರಿಂಟೆಂಡೆಂಟ್ ಬಳಿ ವಿಷಯ ತಿಳಿಸಿದಾಗ ೪೦೦೦ ರೂಪಾಯಿಗಳಷ್ಟು ಕಡಿಮೆ ಮಾಡಿ ೧೩೦೦೦ ರೂಪಾಯಿಗಳನ್ನು ಅವರ ಪತ್ರಕ್ಕೆ ವಿರುದ್ಧವಾಗಿ ತೆಗೆದುಕೊಂಡರಂತೆ. ಅದಕ್ಕಿಂತ ಹೆಚ್ಚು ರಿಯಾಯಿತಿ ಮಾಡಲು ತಮಗೆ ಅಧಿಕಾರವಿಲ್ಲ ಎಂದು ಹೇಳಿದರಂತೆ.
ಒಂದು ದಿನ ಬೆಳಿಗ್ಗೆ ಎದ್ದು ನೋಡುವಾಗ ಅಪ್ಪನ ಬಲಗಾಲಿನ ಕಿರುಬೆರಳ ಉಗುರಿನಲ್ಲಿ ರಕ್ತ ಬಂದಿತ್ತು. ಏನೋ ತಾಗಿಸಿಕೊಂಡಿರಬೇಕು ಎಂದು ಎಂದುಕೊಂಡರೆ ಮರುದಿನ ಎಡಗಾಲ ಬೆರಳು ಗಾಯವಾಗಿತ್ತು. ಏನೆಂದು ನೋಡಿದರೆ ಅದು ರೂಮಿನಲ್ಲಿದ್ದ ಒಂದು ಚಿಕ್ಕ ಇಲಿಯ ಕೆಲಸವಾಗಿತ್ತು. ಅದು ಕಚ್ಚುವಾಗ ಅಪ್ಪನಿಗೆ ಗೊತ್ತಾಗುತ್ತಿರಲಿಲ್ಲ. ೨-೩ ದಿನ ಪ್ರಯತ್ನ ಪಟ್ಟು ಇಲಿಯನ್ನು ಹಿಡಿದು ಹೊರಗಟ್ಟಿದರು. ಮರುದಿನ ಗಾಯ ಇನ್ನೂ ದೊಡ್ಡದಾಗಿತ್ತು. ಇಲಿ ಬಂದಿರಲಿಲ್ಲ. ಆದರೆ ಇಲಿ ಮಾಡಿದ ಗಾಯವನ್ನು ಜಿರಳೆ ತಿಂದಿತ್ತು. ರೂಮಿನಲ್ಲಿದ್ದ ಜಿರಲೆಗಳನ್ನು ನಾಶ ಮಾಡುವ ಪ್ರಯತ್ನ ನೆಡೆಯಿತು. ಇನ್ನೊಂದು ದಿನ ಒಬ್ಬರೇ ರೂಮಿನಲ್ಲಿ ಮಲಗಿದ್ದರು. ಏನಾದರೂ ಬೇಕಾದಾಗ ವಿಸಲ್ ಹಾಕುವುದು ಅವರ ಅಭ್ಯಾಸವಾಗಿತ್ತು. ನಿಲ್ಲದೆ ವಿಸಲ್ ಬಂದಾಗ ಎಲ್ಲರೂ ಓಡಿ ಹೋಗಿ ನೋಡಿದರೆ ಅಪ್ಪನ ವೀಲ್ಚೇರ್ ಮೇಲೆ ಒಂದು ಸರ್ಪ. ವೀಲ್ ಚೇರಿನಿಂದ ತಮ್ಮ ಹಾಸಿಗೆಯ ಮೇಲೆ ತಲೆ ಇರಿಸುತ್ತಿದ್ದ ಹಾವನ್ನು ಪಕ್ಕದಲ್ಲಿದ್ದ ಸ್ಕೇಲಿನಿಂದ ದೂರ ಎಸೆದಿದ್ದರು. ಹಾವು ಹೆದರಿ ವೀಲ್ ಚೇರಿಗೆ ಸುತ್ತಿಕೊಂಡಿತ್ತು. ಆ ವಿಚಾರದ ಬಗ್ಗೆ ಅಪ್ಪ ಬರೆಯುತ್ತಾರೆ. “ನಾವು ದುರ್ಬಲರಾದಾಗ ಇಲಿ, ಇರುವೆ ಜಿರಲೆಗಳಂತಹ ಪ್ರಾಣಿ ಕೀಟಗಳಿಗೂ ಹೆದರಬೇಕಾಗುತ್ತದೆ. ದೇವರೇ ಅವುಗಳಿಂದ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತೇವೆ. ಅದೇ ನಾವು ಪ್ರಬಲರಾಗಿದ್ದಾಗ ನಾನು ಬಹಳ ಶಕ್ತಿಶಾಲಿ. ನಾನು ಯಾರಿಗೂ ಹೆದರುವುದಿಲ್ಲ ಎಂದು ಅಹಂಕಾರದಿಂದ ಮೆರೆಯುತ್ತೇವೆ. ಯಾರಿಗೆ ಯಾವುದೂ ಶಾಶ್ವತವಲ್ಲ. ಒಂದಲ್ಲಾ ಒಂದು ದಿನ ಮಹಾ ಪ್ರಭಾವಶಾಲಿಗಳೂ ಕೂಡ ಇಲಿ ಇರುವೆಗಳಿಗೆ ಹೆದರುವಂತಹ ಕಾಲ ಬರಬಹುದು.”
ಅಪ್ಪನಿಗೆ ಸಂಜೆಯ ವೇಳೆ ಮನೆಯ ಮುಂದೆ ವೀಲ್ ಚೇರಿನಲ್ಲಿ ಕುಳಿತು ಏನಾದರೂ ಓದುವ, ಬರೆಯುವ ಅಭ್ಯಾಸ. ಆದರೆ ಬಾಗಿಲು ದಾಟಿದರೆ ೩ ಅಡಿ ಅಗಲದ ಜಾಗ. ನಂತರ ಮೆಟ್ಟಿಲು ಶುರುವಾಗುತ್ತಿತ್ತು. ವೀಲ್ ಚೇರನ್ನು ಅಷ್ಟೇ ಜಾಗದಲ್ಲಿ ತಿರುಗಿಸಿ ರಸ್ತೆ ಕಾಣುವಂತೆ ಕುಳಿತುಕೊಳ್ಳಬೇಕಿತ್ತು. ಅಕಸ್ಮಾತ್ ಆಗಿ ಒಂದು ದಿನ ಚಕ್ರ ಕೆಳಗೆ ಹೋಗಿ ಅಪ್ಪ ಬಿದ್ದುಬಿಟ್ಟರು. ತೊಡೆಯ ಹತ್ತಿರ ಫ್ರಾಕ್ಚರ್ ಆಯಿತು. ಸ್ಟೀಲ್ ರಾಡ್ ಎಲ್ಲ ಹಾಕಿ ಸರಿಮಾಡುವಷ್ಟು ಅಪ್ಪ ಗಟ್ಟಿಯಾಗಿರಲಿಲ್ಲ. ಹೊಟ್ಟೆಯಿಂದ ಕೆಳಗೆ ಗಾಯವಾದರೆ ಅದು ಹೀಲ್ ಆಗುತ್ತದೆ ಎಂಬ ನಂಬಿಕೆಯೇ ಇರಲಿಲ್ಲ. ಮೂಳೆ ತಜ್ಞರಿಗೆ ತೋರಿಸಿ ಏನೂ ಮಾಡದಿದ್ದರೆ ಏನಾಗಬಹುದು ಎಂದು ವಿಚಾರಿಸಿದರೆ, ಕಾಲು ಉದ್ದ ಗಿಡ್ಡ ಆಗಬಹುದು. ತೆಳುವಾಗಬಹುದು. ಅಥವಾ ರೆಸ್ಟಿನಲ್ಲಿದ್ದರೆ ಸ್ವಲ್ಪ ಅಸ್ತವ್ಯಸ್ತವಾಗಿ ತಾನಾಗಿಯೇ ಕೂಡಲೂಬಹುದು ಎಂದು ಹೇಳಿದರು. ಅಪ್ಪನಿಗೆ ತಾವು ಹಳ್ಳಿಯಲ್ಲಿದ್ದಾಗ ದನಕರುಗಳಿಗೆ ಕಾಲು ಮುರಿದಾಗ ತಾವೇ ಮಾಡುತ್ತಿದ್ದ ಹಳ್ಳಿಯೌಷಧಿ ನೆನಪಾಯಿತು. ಅದೊಂದು ಸೊಪ್ಪಿನ ಔಷದಿ. ಯಾರೋ ಗೌಡರು ಅಪ್ಪನಿಗೆ ಹೇಳಿಕೊಟ್ಟಿದ್ದರಂತೆ. ಒಂದು ತಿಂಗಳು ಆ ಸೊಪ್ಪನ್ನು ಅರೆದು ತಿಂದು ಅಪ್ಪ ಆದ ಫ್ರಾಕ್ಚರ್ ಗುಣಪಡಿಸಿಕೊಂಡಿದ್ದರು.
ಆಪ್ತರೊಬ್ಬರ ಸಲಹೆಯಂತೆ ನನ್ನನ್ನು ಇಂಜಿನಿಯರಿಂಗ್ ಓದಲು ಸೇರಿಸಿದ್ದರು. ವಿದ್ಯಾಭ್ಯಾಸ ಮುಗಿದು ಒಂದು ವರ್ಷ ಕೆಲಸ ಮಾಡಿದ ಮೇಲೆ ನನ್ನನ್ನು ಮದುವೆ ಮಾಡಿ ಜರ್ಮನಿಗೆ ಕಳಿಸಿದ್ದರು. ೬ ತಿಂಗಳಾಗಿತ್ತು ಅಷ್ಟೇ. ಅಪ್ಪ ೨೦ ದಿನಕ್ಕಾಗಿ ಬಂದುಹೋಗುವಂತೆ ಹೇಳತೊಡಗಿದರು. ನಾನು ಒಬ್ಬಳೇ ಮನೆಗೆ ಬಂದಿದ್ದೆ. ೨ ದಿನ ಎಲ್ಲ ಮೊದಲಿನಂತೆ ಇತ್ತು. ಅಪ್ಪ ನಾರ್ಮಲ್ ಆಗಿ ಮಾತನಾಡುತ್ತಿದ್ದರು. ೩ನೇ ದಿನ ಕರೆದು ನನಗೆ ಇನ್ನು ಬದುಕಲು ಇಷ್ಟವಿಲ್ಲ. ನಾನು ಸಾಯಲು ತಯಾರಾಗಿದ್ದೇನೆ. ನೀನು ಹೋಗಿ ಡಾಕ್ಟರ್ ಹತ್ತಿರ ಸಲಹೆ ತೆಗೆದುಕೊಂಡು ಬಾ ಎಂದು ಒತ್ತಾಯ ಮಾಡಿ ನನ್ನನ್ನೂ ಅಮ್ಮನನ್ನೂ ಅಪ್ಪನ ಆಪ್ತ ಡಾಕ್ಟರ್ ಬಳಿಗೆ ಕಳುಹಿಸಿದರು. ಅಪ್ಪನ ವಾಕ್ ಚಾತುರ್ಯ ಎಷ್ಟಿತ್ತೆಂದರೆ, ಆ ಡಾಕ್ಟರನ್ನು ತಮಗೆ ಸಹಾಯ ಮಾಡುವಂತೆ ಆಗಲೇ ಒಪ್ಪಿಸಿಬಿಟ್ಟಿದ್ದರು. ನಮ್ಮೆಲ್ಲರನ್ನೂ ಒಪ್ಪಿಸುವ ಕೆಲಸವನ್ನು ಆ ಡಾಕ್ಟರಿಗೆ ಹಚ್ಚಿದ್ದರು. ಆ ಡಾಕ್ಟರ್ ಮನೆಗೆ ಅಮ್ಮ ಮತ್ತು ನಾನು ಹೋಗಿದ್ದೆವು. ಡಾಕ್ಟರ್ ಇನ್ನು ಎಷ್ಟು ದಿನ ಇದ್ದರೂ ಅಪ್ಪನ ಸಮಸ್ಯೆ ಹೆಚ್ಚಾಗುತ್ತಾ ಹೋಗುವುದೇ ಹೊರತು ಕಡಿಮೆಯಾಗುವುದಿಲ್ಲ. ಆ ನರಳಿಕೆಗಿಂತ ಅವರು ಆಯ್ಕೆ ಮಾಡಿಕೊಂಡ ಹಾಗೆ ಸಾವನ್ನು ಆಲಂಗಿಸುವುದು ಮೇಲು ಎಂದು ನಮ್ಮನ್ನು ಒಪ್ಪಿಸುವ ಪ್ರಯತ್ನ ಮಾಡಿದರು. ನಮಗೆ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ನಾವು ಸುಮ್ಮನಿದ್ದದ್ದನ್ನು ನೋಡಿ ನಾನು ನಿಮ್ಮ ಮನೆಗೆ ಬಂದು ನಿಮ್ಮ ತಂದೆಯವರೊಡನೆ ಮಾತನಾಡುತ್ತೇನೆ ಎಂದು ತಿಳಿಸಿ ನಮ್ಮನ್ನು ವಾಪಸು ಕಳಿಸಿದರು.
ಮನೆಗೆ ಬಂದರೆ ಅಪ್ಪನ ಗೋಗರೆತ. ಸಾಯುವಾಗ ಅದೇನೋ ದಶದಾನ ಎಂದು ೧೦ ದಾನ ಕೊಡುತ್ತಾರಂತೆ. ಅದೆಲ್ಲವನ್ನೂ ಕೊಟ್ಟು, ನನ್ನನ್ನು ಕರೆಸಿ ೩ ದಿನ ನನ್ನೊಡನೆ ಸಮಯ ಕಳೆಯುವುದು. ಆ ನಂತರ ಸತ್ತರೆ ೧೪ ದಿನಗಳ ಕ್ರಿಯಾಕರ್ಮಗಳನ್ನು ಮುಗಿಸಿಕೊಂಡು ನಾನು ಜರ್ಮನಿಗೆ ವಾಪಸು ಹೋಗಬಹುದೆಂದು ೨೦ ದಿನಗಳ ಪ್ಲಾನ್ ಮೊದಲೇ ಮಾಡಿಬಿಟ್ಟಿದ್ದರು. ಡಾಕ್ಟರ್ ಮನೆಗೆ ಬಂದರು. ಅವರಿಗೂ ಏನು ಹೇಳಬೇಕೆಂದು ಗೊತ್ತಿರಲಿಲ್ಲ. ಅಪ್ಪನ ಪರಿಸ್ಥಿತಿ ನೋಡಿದರೆ ಗುಣವಾಗುತ್ತಾರೆ ಎಂದು ಭರವಸೆಯಿರಲಿಲ್ಲ. ಎಲ್ಲರೂ ಹುಷಾರು ಮಾಡಿ ಎಂದು ಗೋಗರೆದರೆ, ಇವರೋ, ಸಾಯಲು ಸಹಾಯ ಮಾಡಿ ಎಂದು ಕೇಳುತ್ತಿದ್ದರು. ಅಪ್ಪ ಹೇಳಿದರು. “ನಿನಗೆ ಗೊತ್ತಾಗುವುದಿಲ್ಲ. ಒಂದು ಸಾರಿ ಪೂರ್ತಿ ಹಾಸಿಗೆಗೆ ಅಂಟಿದರೆ, ಸಹಾಯ ಮಾಡಿ ಎಂದು ಕೇಳುವ ಪರಿಸ್ಥಿತಿಯೂ ಇರುವುದಿಲ್ಲ. ಕೊಳೆಯುತ್ತಾ ಹೋಗಬೇಕಾಗುತ್ತದೆ. ನಮಗೂ ಕಷ್ಟ. ನೋಡುವವರಿಗೂ ಕಷ್ಟ. ಅದಕ್ಕಿಂತ ಈಗಲೇ ಸಾಯುವುದು ಮೇಲು. ನನ್ನ ನೋವು ನಿನಗೆ ಗೊತ್ತಾಗುವುದಿಲ್ಲ. ” ನಾನು ಹೇಳಿದೆ. “ಅಂತಹ ಪರಿಸ್ಥಿತಿ ಬಂದರೆ ನಾನೇ ನಿಮಗೆ ಸಹಾಯ ಮಾಡುವೆ. ಆದರೆ ಇವತ್ತು ಬೇಡ. ಈಗ ಬೇಡ. ಈ ಪ್ಲಾನ್ ಇನ್ನು ಆರು ತಿಂಗಳು ಮುಂದೆ ಹಾಕೋಣ. ಅಷ್ಟರ ಹೊತ್ತಿಗೆ ನೀವು ನಿಜವಾಗಿಯೂ ಪೂರ್ತಿ ಹಾಸಿಗೆ ಹಿಡಿದಿದ್ದರೆ, ನಾನೇ ನಿಮಗೆ ಸಹಾಯ ಮಾಡುವೆ. ಕೋರ್ಟ್ ಕೇಸು ಇನ್ನೂ ಮುಗಿದಿಲ್ಲ. ನೀವು ತೀರಿಕೊಂಡರೆ ಆ ಕೇಸು ಸೋತಂತೆ. ಅದು ಬೇಡ ” ನಮ್ಮನ್ನು ಒಪ್ಪಿಸಲು ಆಗದೆ ಇದ್ದಿದ್ದು ಒಂದಾದರೆ, ಅಪ್ಪನಿಗೆ ಇನ್ನೂ ಜೀವನದ ಮೇಲೆ ಆಸೆ ಕುಂದಿರಲಿಲ್ಲ. ತಮ್ಮ ಕೇಸಿನ ಮೇಲೆ ಇನ್ನೂ ಆಶಾಭಾವನೆ ಇನ್ನೂ ಉಳಿದಿತ್ತು . “ಸರಿ ಹಾಗಿದ್ದರೆ. ನೋಡೋಣ” ಎಂದು ಡಾಕ್ಟರೊಡನೆ ಬೇರೆ ಏನೇನೋ ಮಾತನಾಡಿ ಕಳುಹಿಸಿಕೊಟ್ಟರು.
ಬೀಸೋ ದೊಣ್ಣೆ ತಪ್ಪಿದರೆ ೧೦೦ ವರ್ಷ ಆಯಸ್ಸು ಎನ್ನುತ್ತಾರೆ. ಅಪ್ಪನಿಗೆ ೧೦೦ ವರ್ಷವಲ್ಲದಿದ್ದರೂ ಇನ್ನೂ ಹಲವು ವರ್ಷಗಳ ಆಯಸ್ಸು ಉಳಿದಿತ್ತು. ತಮ್ಮ ಮೊದಲನೇ ಮೊಮ್ಮಗುವನ್ನು ಎತ್ತಿ ಆಡಿಸುವ ಭಾಗ್ಯ ಇನ್ನೂ ಅವರ ಹಣೆಬರಹದಲ್ಲಿತ್ತು. ಏನಾದರೂ ಮಾಡಿ ಒಂದು ಕೆಲಸ ಹಿಡಿದು ಅಪ್ಪನ ಕಷ್ಟಕ್ಕೆ ನೆರವಾಗಬೇಕು ಎಂದು ನಿರ್ಧರಿಸಿ ನಾನು ಪುನಃ ಜರ್ಮನಿಗೆ ವಾಪಾಸು ಹೋದೆ. ಅಪ್ಪ ಬರೆಯುತ್ತಾರೆ, ” ಎಷ್ಟೋ ಸಾರಿ ಈ ಬದುಕು ಏಕೆ ಎಂದು ಕಾಣದಿರಲಿಲ್ಲ. ಸತ್ತು ಸಾಧಿಸುವುದೇನು? ಇದ್ದು ಸಾಧಿಸುತ್ತೇನೆ ಎಂದುಕೊಂಡೆ. ”
ಅಪ್ಪ ಮನೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ನಮ್ಮೆಲ್ಲರನ್ನೂ ಸೇರಿಸಿಕೊಂಡು ಚರ್ಚಿಸುತ್ತಿದ್ದರು. ಕೊನೆಯಲ್ಲಿ ತಮ್ಮ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ತೋಟದಿಂದ ಬರುತ್ತಿದ್ದ ಆದಾಯ ಮನೆವಾರ್ತೆ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಕೈಯಲ್ಲಿ ಇದ್ದ ಹಣವನ್ನು ಅವಶ್ಯಕತೆ ಇದ್ದವರಿಗೆ ಸಾಲವಾಗಿ ಕೊಟ್ಟು ಬರುವ ಬಡ್ಡಿಯಲ್ಲಿ ಉಳಿದ ಖರ್ಚನ್ನು ತೂಗಿಸಲು ಪ್ರಯತ್ನಿಸುತ್ತಿದ್ದರು. ಮತ್ತು ನಮ್ಮ ವಿದ್ಯಾಭ್ಯಾಸಕ್ಕೂ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ನನಗೂ ನನ್ನ ತಮ್ಮನಿಗೂ ಸರಿಸಮಾನ ಅವಕಾಶಗಳನ್ನು ಕೊಡುವ ಪ್ರಯತ್ನ ಮಾಡಿದ್ದರು. ಇಷ್ಟರ ಜೊತೆಗೆ ಅವರ ಔಷಧಿಗಳು, ದಿನನಿತ್ಯ ಮೂತ್ರ ತೆಗೆಯಲು ಬೇಕಾಗುತ್ತಿದ್ದ ಕ್ಯಾಥೆಟರ್ ಮತ್ತು ಜೆಲ್ಲಿ, ಇವೆಲ್ಲವನ್ನೂ ಬರುವ ಆದಾಯದಲ್ಲಿ ಸರಿದೂಗಿಸಬೇಕಾಗುತ್ತಿತ್ತು. ಮಕ್ಕಳು ದೊಡ್ಡವರಾಗಿ ತಮ್ಮ ಕಾಲ ಮೇಲೆ ತಾವು ನಿಂತ ಮೇಲೆ ಖರ್ಚು ಕಡಿಮೆಯಾಗಿ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಯೋಚಿಸಿದರೆ, ದಿನ ಕಳೆದಂತೆ ಅವಶ್ಯಕತೆಗಳೂ, ಖರ್ಚುಗಳೂ ಜಾಸ್ತಿಯಾಗುತ್ತಲೇ ಹೋದವು. ನಾನು ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿ ಇನ್ನು ಅಪ್ಪನಿಗೆ ಹೆಗಲು ಕೊಡಬಹುದು ಎಂದುಕೊಳ್ಳುವುದರಲ್ಲಿ ಅಲ್ಲಿನ ಆಗಿನ ಸಾಮಾಜಿಕ ಕಟ್ಟಳೆಯಂತೆ ನನ್ನ ಮದುವೆಯಾಗಿತ್ತು. ಕೆಲಸ ಬಿಟ್ಟು ಜರ್ಮನಿಗೆ ಬಂದು ಅಲ್ಲಿ ಕೆಲಸ ಹುಡುಕಲು ಶುರು ಮಾಡಿದ್ದೆ. ಆದರೆ ಜರ್ಮನ್ ಭಾಷೆ ಬರದೇ ಕೆಲಸ ಸಿಗುವುದು ಸಾಧ್ಯವಿರಲಿಲ್ಲ. ಎಷ್ಟು ಕಂಪೆನಿಗಳಿಗೆ ಅರ್ಜಿ ಹಾಕಿದರೂ ಬರೀ ರಿಗ್ರೆಟ್ ಲೆಟರ್ ಕಳಿಸುತ್ತಿದ್ದರು. ಇಂಜಿನಿಯರಿಂಗ್ ಮಾಡುವಾಗಲೂ ಪ್ರತಿವಾರ ಮನೆಗೆ ಓಡಿಹೋಗುತ್ತಿದ್ದ, ಊರನ್ನು ಮನೆಯನ್ನು ಬಿಡುವ ಯೋಚನೆಯನ್ನೂ ಒಂದು ಕ್ಷಣವೂ ಮಾಡದ ನನಗೆ, ಕೆಲಸ ಬಿಟ್ಟು ದೂರದ ದೇಶದಲ್ಲಿ ಮನೆಯಲ್ಲಿ ಒಬ್ಬಂಟಿ ಕುಳಿತ ನೋವು ಒಂದು ಕಡೆಯಾದರೆ, ಅಪ್ಪನಿಗೆ ಸಹಾಯ ಮಾಡಲು ಆಗದ ಅಸಹಾಯಕತೆ ಇನ್ನೊಂದು ಕಡೆ. ಜರ್ಮನಿಯಲ್ಲಿ ಆಕಾಶ ಹೇಗೆ ಯಾವಾಗಲೂ ಬೂದಿಬಣ್ಣದ ಮೋಡಗಳಿಂದ ತುಂಬಿರುತ್ತದೆಯೋ ಹಾಗೆಯೇ ನನ್ನ ಮನಸ್ಸೂ ಕೂಡ ಮಂಕಾಗಿರುತ್ತಿತ್ತು.
ಹುಟ್ಟಿದಂದಿನಿಂದಲೂ ಅವಿಭಕ್ತ ಕುಟುಂಬದಲ್ಲಿ ಬೆಳೆದ ನನಗೆ ಒಂಟಿತನವೆಂದರೆ ಏನೆಂದೇ ತಿಳಿದಿರಲಿಲ್ಲ. “ಎಷ್ಟು ಹೊತ್ತು ಒಳಗೆ ಕೂರುತ್ತೀಯೆ? ಹೊರಗೆ ಬಾ” ಎಂದು ಅರ್ಜೆಂಟ್ ಆದವರು ಹೊರಗಿನಿಂದ ಕೂಗುತ್ತಿದ್ದರೆ, ಇನ್ನೆರಡೇ ನಿಮಿಷ ಎಂದು ಟಾಯ್ಲೆಟ್ ಒಳಗೆ ಕುಳಿತು ಯೋಚನೆಗಳಲ್ಲಿ ಮುಳುಗಿ, ಏಕಾಂತವನ್ನು ಅನುಭವಿಸಲು ಪ್ರಯತ್ನಿಸುತ್ತಿದ್ದವಳಿಗೆ, ಒಂದು ಐದು ನಿಮಿಷವೂ ಒಬ್ಬಳೇ ಇರುವುದಕ್ಕೆ ಜನರು ಬಿಡುವುದಿಲ್ಲವಲ್ಲ ಎಂದು ಕೊರಗುತ್ತಿದ್ದವಳಿಗೆ, ಬೆಳಿಗ್ಗೆಯಿಂದ ಸಂಜೆಯವರೆಗೆ ಒಬ್ಬಳೇ ಇರುವ ಒಂಟಿತನವನ್ನು ದೇವರು ದಯಪಾಲಿಸಿದ್ದ. ಮನೆಯವರು ಆಫೀಸಿಗೆ ಹೋಗಿ ಬರುವತನಕ ಒಬ್ಬಳೇ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಯೋಚಿಸುತ್ತಿದ್ದರೆ ಕೆಲಸ ಸಿಗದೇ ಇದ್ದರೆ ಏನು ಮಾಡುವುದು? ಎಂಬ ನಿರಾಶಾದಾಯಕ ಆಲೋಚನೆಗಳು ಕಾಡುತ್ತಿದ್ದವು.
ಅವೆಲ್ಲದರ ಜೊತೆಗೆ “ವಿಶೇಷ ಇಲ್ಲವಾ? ವಿಶೇಷ ಯಾವಾಗ?” ಎಂದು ನಮ್ಮ ಅಸಹಾಯತೆಗಳನ್ನು ಅರ್ಥ ಮಾಡಿಕೊಳ್ಳದೆ ಸಂವೇದನಾಶೀಲತೆಯಿಲ್ಲದೆ ಕೇಳುವ ಆಪ್ತ ಮಿತ್ರರು ಮತ್ತು ನೆಂಟರು. ಈಗ ನೆನಪಿಸಿಕೊಂಡು “ನಿಮಗೆ ವಿಶೇಷ ಬೇಕಿದ್ದರೆ ನೀವೇ ಮಾಡಿಕೊಳ್ಳಿ. ನನ್ನನ್ನು ಕೇಳುವುದ್ಯಾಕೆ?” ಎಂದು ಕೇಳಬೇಕೆನಿಸುತ್ತಿತ್ತು ಎಂದು ನಕ್ಕರೂ ಕೆಲಸ ಸಿಗದೇ ಪರಿತಪಿಸುತ್ತಿದ್ದ ಆ ಸಮಯದಲ್ಲಿ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ವಿದ್ಯಾಭ್ಯಾಸ ಮುಗಿಯುವವರೆಗೆ ಮಕ್ಕಳೆಲ್ಲರನ್ನೂ ಗಂಡು ಹೆಣ್ಣೆಂದು ಬೇಧ ಮಾಡದೆ ಪ್ರೋತ್ಸಾಹಿಸುತ್ತಿದ್ದ ಹಿರಿಯರು ಅಷ್ಟು ಅಚಾನಕವಾಗಿ “ನಿನ್ನ ಕೆಲಸ ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು. ಹುಟ್ಟಿದ ತವರಿಗಿಂತ ಸೇರಿದ ಮನೆ ಮೊದಲು” ಎಂಬ ಧೋರಣೆ ತೋರತೊಡಗಿದಾಗ ಅಪ್ಪನ ಅಸಹಾಯಕತೆಯನ್ನು ನೆನಪಿಸಿಕೊಂಡು ಪಡೆದ ಸರ್ಟಿಫಿಕೇಟುಗಳನ್ನೆಲ್ಲಾ ಬೆಂಕಿಗೆ ಹಾಕುವಷ್ಟು ಕೋಪ. ಆದರೆ ಹಿರಿಯರಿಗೆ ಎದುರಾಡಬಾರದು ಎಂದು ಹಿರಿಯರು ಕಲಿಸಿದ ಪಾಠ ಮೌನವನ್ನು ಭೋದಿಸುತ್ತಿತ್ತು. ಆದರೆ ಕೆಲಸ ಪಡೆದೇ ತೀರುವೆ ಎಂಬ ಹಠ ಮಾತ್ರ ಕಡಿಮೆಯಾಗುತ್ತಿರಲಿಲ್ಲ.
“ನಮ್ಮ ಅನ್ನ ನಾವು ದುಡಿದುಕೊಳ್ಳಬೇಕು. ನನ್ನ ಮಕ್ಕಳು ಎಂದೂ ಯಾರೆದುರೂ ಕೈ ಚಾಚಬಾರದು. ಮೋಸ, ಸುಲಿಗೆ, ಕೊಲೆ ಮಾಡದೆ ದುಡಿಯಲು ಬೇರೇನು ದಾರಿ ಹುಡುಕಿದರೂ ತೊಂದರೆಯಿಲ್ಲ. ಮಸಾಲೆ ಮಂಡಕ್ಕಿ ಮಾರಿ ದುಡಿದರೂ ಇವರು ನನ್ನ ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನ್ಯಾಯವಾಗಿ ದುಡಿಯಬೇಕು ಅಷ್ಟೇ. ” ಎಂದು ನನ್ನ ತಮ್ಮ ತನ್ನ ಪಾಕೆಟ್ ಮನಿ ದುಡಿಯಲು ಯಾವುದೋ ಮದುವೆಯಲ್ಲಿ ಬಡಿಸಲು ಹೋಗಿ ಬಂದಾಗ, ಅವನನ್ನು ಪ್ರೋತ್ಸಾಹಿಸಿದ ಅಪ್ಪನ ಮಾತುಗಳು ನೆನಪಿಗೆ ಬರುತ್ತಿದ್ದವು. ಲೋಕಲ್ ನ್ಯೂಸ್ ಪೇಪರಿನಲ್ಲಿ ಬರುತ್ತಿದ್ದ ಕೆಲಸದ ಜಾಹೀರಾತು ನೋಡುತ್ತಿದ್ದವಳಿಗೆ ಕಾಣಿಸಿದ್ದು ಮನೆಮನೆಗೆ ಪೇಪರ್ ಹಂಚುವ ಕೆಲಸ. ತಿಂಗಳಿಗೆ ೪೦ ಯುರೋ ಸಿಕ್ಕರೆ ಅಷ್ಟೇ ಸಾಕು ಎಂದು ಅರ್ಜಿ ಹಾಕಿ ಕಾಯುತ್ತಿದ್ದರೆ ಮನೆಯಲ್ಲಿ ಹಿರಿಯರಿಗೆ ನನ್ನ ಮನಸ್ಸು ಅರ್ಥವಾಗತೊಡಗಿತ್ತು. ನಿನ್ನ ವಿಧ್ಯಾಭ್ಯಾಸಕ್ಕೆ ಸರಿಯಾದ ಕೆಲಸವೇ ಸಿಗಲಿ ಎಂದು ಆಶೀರ್ವಾದಿಸಲು ಶುರುಮಾಡಿದ್ದರು.
ಅಪ್ಪನ ಬೆಡ್ ಸೋರುಗಳೂ ಕಾಲಿನ ಗಾಯಗಳೂ ಜಾಸ್ತಿಯಾದಂತೆ ಖರ್ಚುಗಳೂ ಜಾಸ್ತಿಯಾಗಿದ್ದವು. ಪ್ರತಿದಿನ ಮನೆಗೆ ಬಂದು ಡ್ರೆಸ್ಸಿಂಗ್ ಮಾಡಿ ಹೋಗಲು ನರ್ಸ್ ಬರುತ್ತಿದ್ದರು. ಅವರಿಗೆ ಸಂಬಳ ಕೊಡಬೇಕಿತ್ತು. ಮನೆಕಟ್ಟಲು ತೆಗೆದುಕೊಂಡ ಸಾಲ ತೀರಿರಲಿಲ್ಲ. ಬಡ್ಡಿ ಬೆಳೆಯುತ್ತಿತ್ತು. ಆದ್ದರಿಂದ ಅಪ್ಪನ ನಿರಾಶಾವಾದಕ್ಕೆ, ಸಾವನ್ನು ಆಶಿಸುವ ಭಾವನೆಗಳಿಗೆ ಆಗಿನ ಅವರ ಆರ್ಥಿಕ ಪರಿಸ್ಥಿತಿಯೂ ಕಾರಣ ಎಂದು ನನಗೆ ತಿಳಿದಿತ್ತು. ಒಂದೂವರೆ ವರ್ಷಗಳ ನಂತರ ಬೆಂಗಳೂರಿಗೆ ವಾಪಸು ಬಂದು ಕೆಲಸಕ್ಕೆ ಸೇರಿದಾಗ ಒಂದು ರೀತಿಯ ನೆಮ್ಮದಿ. ಒಂದು ವರ್ಷದ ನಂತರ ಕೇಳಿದ ಎಲ್ಲರಿಗೂ ಸಂತೋಷವಾಗುವಂತೆ “ವಿಶೇಷವನ್ನು” ಸಾರಿದಾಗ, ಅಪ್ಪನಿಗೆ ಮೊಮ್ಮಗುವನ್ನು ಕಾಣುವ ಸಂಭ್ರಮ.
ಮೊಮ್ಮಗು ಹುಟ್ಟಿ ಅದರ ಬೆಳವಣಿಗೆಯಲ್ಲಿ ಮನಸ್ಸು ಆಹ್ಲಾದಿಸುತ್ತಿದ್ದ ಅಪ್ಪನಿಗೆ ಇನ್ನೊಂದು ಅನಿರೀಕ್ಷಿತ ಕಾದಿತ್ತು . ಬೆಳಿಗ್ಗೆ ಕಾಫಿ ಕುಡಿಯುತ್ತ ಪೇಪರ್ ಓದುತ್ತಿದ್ದ ತಮ್ಮ “ಅಕ್ಕ, ನಮ್ಮ ಲಾಯರ್ ಹೆಸರು ಏನು? ಬಾ ಇಲ್ಲಿ” ಎಂದು ಕರೆದಾಗ ಕುತೂಹಲದಿಂದ ಹೋಗಿ ನೋಡಿದರೆ ದಿವಂಗತರ ಕಾಲಮ್ಮಿನಲ್ಲಿ ನಮ್ಮ ಲಾಯರ್ ಫೋಟೋ ಬಂದಿತ್ತು. ಅಪ್ಪ ಆಗಲೇ ೪೫೦೦೦/- ಫೀಸನ್ನು ಕೊಟ್ಟಿದ್ದಾರೆ ಎಂದು ಗೊತ್ತಿದ್ದ ನಮಗೆ ಅಪ್ಪನಿಗೆ ಅದೆಷ್ಟು ಶಾಕ್ ಆಗಬಹುದೇನೋ ಎಂಬ ಹೆದರಿಕೆ. ಹೇಳುವುದು ಹೇಗೆ ಎಂಬ ಪ್ರಶ್ನೆ. ನಾಟಕ ಮಾಡುತ್ತಾ, ಅಪ್ಪ ನಮ್ಮ ಲಾಯರ್ ಇವರಲ್ಲವಾ ಎಂದು ಫೋಟೋ ತೋರಿಸಿದರೆ ಅಪ್ಪನ ಮುಖ ಬೆವರತೊಡಗಿತ್ತು. ಒಂದೂ ಮಾತನಾಡದೆ ತಮ್ಮ ವೀಲ್ ಚೇರನ್ನು ಟೆಲಿಫೋನಿನ ಹತ್ತಿರ ತೆಗೆದುಕೊಂಡು ಹೋಗಿ ಲಾಯರ್ ಆಫೀಸಿಗೆ ಫೋನ್ ಮಾಡಿದರು. ” ವಿಷಯ ತಿಳಿಯಿತು. ಐ ಆಮ್ ಸಾರಿ” ಎಂದು ಹೇಳಿ ಫೋನನ್ನು ಇಟ್ಟರು. ಮುಂದೇನು ಎಂಬ ಪ್ರಶ್ನೆ ಎಲ್ಲರ ಮನದಲ್ಲಿತ್ತು.
ನಮ್ಮ ಲಾಯರ್ ಸೀನಿಯರ್ ಆಗಿದ್ದರಿಂದ ಅವರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಬೇರೆ ಜೂನಿಯರ್ ಲಾಯರ್ ಇರಬಹುದು. ಅವರಿಗೆ ನಮ್ಮ ಕೇಸಿನ ವಿವರ ತಿಳಿದಿರಬಹುದು. ಅವರಲ್ಲಿ ವಿಚಾರಿಸಿದರಾಯಿತು ಎಂದು ಯೋಚಿಸಿ ನಾವೆಲ್ಲಾ ಸೇರಿ ಅಪ್ಪನ ಕೇಸಿನ ಫೈಲುಗಳನ್ನು ನೋಡಿದೆವು. ಅದರಲ್ಲಿ “ಅನ್ನಪೂರ್ಣಿ” ಎಂಬ ಜೂನಿಯರ್ ಲಾಯರ್ ಹೆಸರು ಕಾಣಿಸಿತು. ಫೈಲುಗಳನ್ನೆಲ್ಲ ಅದರದರ ಜಾಗಕ್ಕೆ ಸೇರಿಸಿ ನಾವು ನಮ್ಮ ಕೆಲಸಗಳಲ್ಲಿ ಮಗ್ನರಾದರೆ, ಅಪ್ಪ ಇನ್ನೂ ಯೋಚಿಸುತ್ತಾ ಕುಳಿತಿದ್ದರು. ಬೆಳಿಗ್ಗೆ ಅಪ್ಪನ ಟೇಬಲ್ ಮೇಲೆ ಒಂದು ಕಾಗದವಿತ್ತು. ಅಪ್ಪ ಕನ್ನಡದಲ್ಲಿ ಅನ್ನಪೂರ್ಣಿಯವರಿಗೆ ಒಂದು ಪತ್ರ ಬರೆದಿಟ್ಟಿದ್ದರು. ಸಾರಾಂಶ “ನೀವು ನಮ್ಮ ಕೇಸನ್ನು ತೆಗೆದುಕೊಳ್ಳುತ್ತೀರಾ? ನಿಮ್ಮ ಜೊತೆ ಹೇಗೆ ಮಾತನಾಡುವುದು? ನನಗೆ ಇಂಗ್ಲಿಷ್ ಬರುವುದಿಲ್ಲ. ನಿಮಗೆ ಕನ್ನಡ ಬರಲಿಕ್ಕಿಲ್ಲ” ಎಂದಾಗಿತ್ತು. ಅದನ್ನು ನೋಡಿದ ನಾನು ಆ ಪತ್ರವನ್ನು ಇಂಗ್ಲಿಷ್ ಗೆ ಭಾಷಾಂತರಿಸಿ ಆ ಪಾತ್ರ ಇದ್ದ ಜಾಗದಲ್ಲಿಯೇ ಇಟ್ಟೆ. ಸಂಜೆ ಅಪ್ಪ ಹೊರಗೆ ಕುಳಿತು ನಾನು ಬರೆದ ಪಾತ್ರವನ್ನು ಬಾಯಿಪಾಠ ಮಾಡುವುದನ್ನು ನೋಡಿದಾಗ ನನ್ನ ಕಣ್ಣಲ್ಲಿ ನೀರು ತುಂಬಿತ್ತು.
ನಮ್ಮ ಸೀನಿಯರ್ ಲಾಯರ್ ಮಗಳು ನಮ್ಮನ್ನು ಅನ್ನಪೂರ್ಣಿಗೆ ಪರಿಚಯಿಸಿ ನಾವು ಕೊಟ್ಟ ಫೀಸನ್ನು ತಿಳಿಸಿ ಜಾಸ್ತಿ ಏನೂ ಬಯಸದೆ ಕೆಲಸ ಮಾಡಿಕೊಡುವಂತೆ ಮಧ್ಯವರ್ತಿಕೆ ವಹಿಸಿದರು. ಆ ನಂತರ ಅಪ್ಪ ಮತ್ತು ಅನ್ನಪೂರ್ಣಿಯ ನಡುವಿನ ಮಾತುಕತೆಗಳು ಶುರುವಾದವು. ಅಪ್ಪ ತಾವು ಹೇಳಬೇಕಾಗಿದ್ದನ್ನೆಲ್ಲಾ ಮೊದಲೇ ವಾಕ್ಯಗಳಾಗಿ ರಚಿಸಿ ಬರೆದಿಟ್ಟುಕೊಂಡು ಓದಿ ಹೇಳಿ ತಕ್ಷಣ ಫೋನ್ ಇಟ್ಟುಬಿಡುತ್ತಿದ್ದರು. ಅನ್ನಪೂರ್ಣಿ ಪುನಃ ಏನಾದರೂ ಪ್ರಶ್ನಿಸಿದರೆ ಅಥವಾ ಏನಾದರೂ ಉತ್ತರಿಸಿದರೆ ಅಪ್ಪನಿಗೆ ತಕ್ಷಣಕ್ಕೆ ಅರ್ಥ ಮಾಡಿಕೊಳ್ಳಲು, ಉತ್ತರಿಸಲು ಆಗುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ ಅನ್ನಪೂರ್ಣಿ ಫೋನ್ ಮಾಡಿ ನಿಧಾನವಾಗಿ ಬಿಡಿಸಿ ಬಿಡಿಸಿ ಅಪ್ಪನಿಗೆ ಇಂಗ್ಲಿಷ್ ಭಾಷೆಯಲ್ಲಿ ಅವರು ಹೇಳಬೇಕಾದದ್ದನ್ನು ಹೇಳುತ್ತಿದ್ದರು. ಕೆಲವೊಮ್ಮೆ ಇಂಗ್ಲಿಷ್ ಬಲ್ಲ ಚಿಕ್ಕಪ್ಪನಿಂದಲೋ, ನನ್ನಿಂದಲೋ ಫೋನ್ ಮಾಡಿಸುತ್ತಿದ್ದರು.
ಅನ್ನಪೂರ್ಣಿಯವರು ಕೇಸು ತೆಗೆದುಕೊಂಡಮೇಲೆ ಅಪ್ಪ ತಾವಾಗಿಯೇ ಕಳಿಸಿದ ಫೀಸನ್ನು ಬಿಟ್ಟರೆ ಒಂದು ರೂಪಾಯಿಯನ್ನೂ ಅವರಾಗಿಯೇ ಬಾಯಿಬಿಟ್ಟು ಕೇಳಲಿಲ್ಲ. ಕೆಲಸ ಮಾತ್ರ ಮಾಡುತ್ತಿದ್ದರು.
ಅಪ್ಪನಿಗೆ ಮುನ್ಸೂಚನೆಯಿಲ್ಲದ ಹೆಗಲುನೋವು ಶುರುವಾಗಿತ್ತು. ಎಷ್ಟು ಔಷಧಿ ಮಾಡಿದರೂ ಸರಿಯಾಗಲಿಲ್ಲ. X-Ray ತೆಗೆದು ನೋಡಿಯಾಯಿತು. ಎಲ್ಲೂ ಫ್ರಾಕ್ಚರ್ ಆಗಿರಲಿಲ್ಲ. ಹೆಗಲುನೋವು ಜಾಸ್ತಿಯಾಗಿ ಮೈ ಕೈಯಲ್ಲೆಲ್ಲಾ ನೋವು ಶುರುವಾಯಿತು. ನೋವು ಸಹಿಸಲಾರದೆ ಪುನಃ ಸಾಯಲು ಸಹಾಯ ಮಾಡು ಎಂಬ ಯಾಚನೆ ಶುರುವಾಯಿತು. ಪ್ರತಿವಾರ ಮನೆಗೆ ಹೋಗಿ ಅಪ್ಪನನ್ನು ನೋಡಿಬರುವೆ ಎಂದು ನಿರ್ಧರಿಸಿದೆ. ಆದರೆ ರಾತ್ರಿಯಿಡೀ ನರಳುತ್ತಾ ನನ್ನ ಹೆಸರನ್ನು ಕರೆಯುತ್ತಾ, ನಿನಗೆ ಯಾಕೆ ಅರ್ಥವಾಗಲ್ಲ? ನನಗೆ ನೋವು ತಡೆಯಲು ಸಾಧ್ಯವಿಲ್ಲ, ಎಂದು ಯಾಚಿಸುತ್ತಿದ್ದ ಅಪ್ಪನನ್ನು ನೋಡುವಾಗ ಸಂಕಟವಾಗುತ್ತಿತ್ತು. ಅಮ್ಮ ಹೇಳಿದಳು. “ನಿನ್ನನ್ನು ನೋಡಿದಾಗ ಅವರು ಜಾಸ್ತಿ ಯಾಚಿಸುತ್ತಾರೆ. ನೀನು ಪ್ರತಿವಾರ ಬರಬೇಡ”. ನಾನು ಬರುವುದು ನಿಲ್ಲಿಸಿದರೂ ಅಪ್ಪ ಫೋನ್ ಮಾಡಿ ಹೆಲ್ಪ್ ಮಾಡುವಂತೆ ಕೇಳುತ್ತಿದ್ದರು. ನನಗೆ ಅವರನ್ನು ಒಪ್ಪಿಸಲು ಸಾಧ್ಯವಾಗದಿದ್ದಾಗ, ನನ್ನ ಫ್ರೆಂಡ್ಸ್ ಮೂಲಕ “ನಿಮ್ಮ ಮಾರ್ಗದರ್ಶನ ಇನ್ನೂ ಬೇಕು. ನೀವು ಇನ್ನೂ ಬದುಕಬೇಕು ” ಎಂದು ಹೇಳಿಸಲು ಪ್ರಯತ್ನಿಸಿದ್ದೆ.
ಅಷ್ಟರಲ್ಲಿ ನ್ಯಾಷನಲ್ ಕನ್ಸೂಮರ್ ಕೋರ್ಟಿನಿಂದ ಜಡ್ಜ್ಮೆಂಟ್ ಬಂದಿತು. ಅಪ್ಪ ಕೇಸನ್ನು ಗೆದ್ದಿದ್ದರು. ನ್ಯಾಯಾಧೀಶರು ಅಪ್ಪನನ್ನು ೨೩ ದಿನಗಳ ನಂತರ ನ್ಯೂರಾಲಜಿ ಡಿಪಾರ್ಟ್ಮೆಂಟ್ ಗೆ ಶಿಫ್ಟ್ ಮಾಡಿದ್ದನ್ನು ಅಲಕ್ಷ್ಯ ಎಂದು ಪರಿಗಣಿಸಿದ್ದರು. ಪೋಸ್ಟ್ ಆಪರೇಟಿವ್ ಕೇರ್ ವಿಷಯದಲ್ಲೂ ಅಲಕ್ಷ್ಯ ಕಂಡುಬಂದಿದೆ ಎಂದು ಎತ್ತಿಹಿಡಿದಿದ್ದರು. ಸ್ಪೈನಲ್ ಫ್ಲೂಯಿಡ್ ನಲ್ಲಿ ಅಯೋಡಿನ್ ಪ್ರಮಾಣ ಜಾಸ್ತಿಯಾದಾಗ ೧೦- ಸಿ ಸಿ ಯಂತೆ ತಕ್ಷಣ ಸೆರೆಬ್ರೊ ಸ್ಪೈನಲ್ ಫ್ಲೂಯಿಡ್ ರಿಮೂವಲ್ ಮಾಡಬೇಕಾಗಿದ್ದನ್ನು ಮಾಡದೆ ೨೩ ದಿನಗಳ ನಂತರ ನ್ಯೂರಾಲಜಿಯವರಿಗೆ ವರ್ಗಾಯಿಸಿದ್ದು ತಪ್ಪು ಎಂದು ಪರಿಗಣಿಸಿ ತೀರ್ಪನ್ನು ಕೊಟ್ಟಿದ್ದರು. ತೀರ್ಪು ಮಾತ್ರ ಹೀಗಿತ್ತು.
” ಇವರು ಹೆಂಡತಿ ಮತ್ತು ತಾಯಿಯ ಮೇಲೆ ಪರಾವಲಂಬಿಯಾಗಬೇಕಾಗಿದೆ ಎಂಬುದು ಸ್ಪಷ್ಟ. ತಂದೆಯಾಗಿ ತನ್ನ ಕರ್ತವ್ಯವನ್ನು ಮಾಡಲಾಗುವುದಿಲ್ಲ ಎಂಬುದೂ ಸ್ಪಷ್ಟ. ಜೊತೆಗೆ ತನ್ನ ಅಂಗಡಿ ಮತ್ತು ಜಮೀನನ್ನು ನೋಡಿಕೊಳ್ಳಲೂ ಅಶಕ್ತರಾಗಿದ್ದಾರೆ. ಉತ್ಪ್ರೇಕ್ಷೆಗೆ ಅವಕಾಶ ಕೊಡದಿದ್ದರೆ, ಜಮೀನಿನ ಕೆಲಸ ಮಾಡಲು ಸಾಧ್ಯವಾಗಿಲ್ಲದರಿಂದ ಆದ ನಷ್ಟವನ್ನು ಪರಿಗಣಿಸದೆ, ಒಬ್ಬರನ್ನು ಕೆಲಸಕ್ಕೆ ಇಟ್ಟುಕೊಂಡು ತಿಂಗಳಿಗೆ ೩೦೦೦/- ರೂಪಾಯಿಯಂತೆ ಸಂಬಳ ಕೊಟ್ಟರೆ ಮತ್ತು ಇನ್ನುಳಿದ ಔಷದಿ ಖರ್ಚುಗಳಿಗೆ ತಿಂಗಳಿಗೆ ೫೦೦ ರೂಪಾಯಿಯಂತೆ ಲೆಕ್ಕ ಹಾಕಿದರೆ ತಿಂಗಳಿಗೆ ೩೫೦೦/- ರೂಪಾಯಿಗಳಾಗುತ್ತವೆ. ೧೫ ವರ್ಷಗಳ ಸಮಯವನ್ನು ಪರಿಗಣಿಸಿದರೆ ೩೫೦೦X ೧೨X ೧೫ ರಂತೆ , ೬,೩೦,೦೦೦/- + ೫೦೦೦ ರೂಪಾಯಿ ವೆಚ್ಚವನ್ನು ಸೇರಿಸಿ ಆರು ಲಕ್ಷ ಮೂವತ್ತೈದು ಸಾವಿರ ರೂಪಾಯಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ”
ಅಂದರೆ ಅಪ್ಪ ಕಳೆದ ೧೫ ವರ್ಷಗಳನ್ನು, ತಾವು ಮಾಡಲಾಗದ ಕೆಲಸಗಳನ್ನು ಮಾಡಿಸಲು ಇನ್ನೊಬ್ಬರನ್ನು ನಿಯೋಜಿಸಿ ತಿಂಗಳಿಗೆ ೩೦೦೦ ರೂಪಾಯಿಗಳಂತೆ ಸಂಬಳ ಕೊಟ್ಟು ತೋಟ ಮತ್ತು ಅಂಗಡಿಯಿಂದ ಬಂದ ದುಡಿಮೆಯಲ್ಲಿ ತಂದೆ ಮತ್ತು ಗಂಡನ ಕರ್ತವ್ಯಗಳನ್ನು ನಿರ್ವಹಿಸಿ, ತಮ್ಮ ಔಷಧಿಯ ಖರ್ಚುಗಳನ್ನು ತಿಂಗಳಿಗೆ ೫೦೦ ರ ಒಳಗೆ ನಿಯಂತ್ರಿಸಿ ಬದುಕಬಹುದಿತ್ತುಎಂದು ನ್ಯಾಷನಲ್ ಕನ್ಸೂಮರ್ ಕೋರ್ಟ್ ನಿರ್ಧರಿಸಿತ್ತು. ಅಪ್ಪ ಕಳೆದುಕೊಂಡಿದ್ದು ಬರೀ ದುಡಿಯುವ ಶಕ್ತಿಯನ್ನು ಮಾತ್ರವಲ್ಲ. ನಮ್ಮ ಬದುಕಿನಲ್ಲಿ ಅವರು ಎಲ್ಲರಂತಿದ್ದರೆ ನಿರ್ವಹಿಸಬಹುದಾಗಿದ್ದ ಕಾರ್ಯಗಳನ್ನುಹಾಗೂಆಸ್ಥಾನವನ್ನು ಬೇರೆ ಯಾರೂ ತುಂಬಲು ಸಾಧ್ಯವಿರಲಿಲ್ಲ ಎಂಬುದು ಕೋರ್ಟಿನಲ್ಲಿ ಕುಳಿತು ಯೋಚಿಸಿ ನಿರ್ಧರಿಸಿದ ಪ್ರಾಜ್ಞರಿಗೆ ಅರ್ಥವಾಗಿರಲೇ ಇಲ್ಲ.ದುಃಖಿಸುವಅಥವಾ ತೀರ್ಪಿನ ಹಿಂದಿರುವಅವಿವೇಚನೆಯ ಬಗ್ಗೆ ನಗುವ ಪರಿಸ್ಥಿತಿಯಲ್ಲಿ ನಾವ್ಯಾರೂ ಇರಲಿಲ್ಲ. ಏಕೆಂದರೆ ಅಪ್ಪ ಸಾವಿನ ಹಾಸಿಗೆಯಲ್ಲಿದ್ದರು. ನಮ್ಮ ಲಾಯರ್ “ಕೊಟ್ಟಷ್ಟು ತೆಗೆದುಕೊಳ್ಳುವುದು ಒಳ್ಳೆಯದು.ಇಲ್ಲದಿದ್ದರೆ ಈ ಕೇಸು ಸುಪ್ರೀಂ ಕೋರ್ಟಿನಲ್ಲಿ ಇನ್ನೆಷ್ಟು ವರ್ಷಗಳ ಕಾಲ ನೆಡೆಯುತ್ತದೆಯೋ ಗೊತ್ತಿಲ್ಲ”ಎಂದು ಸೂಚಿಸಿದ್ದರು.ಅಪ್ಪ ಆಸ್ಪತ್ರೆಯಲ್ಲಿ ಮಲಗಿ ನನ್ನೊಂದಿಗೆ ಚರ್ಚಿಸಿದ್ದರು. “ಹೋರಾಟ ನಿಲ್ಲಿಸಬೇಕಾ? ಅಥವಾ ಮುಂದುವರೆಸಬೇಕಾ?” “ನಾವ್ಯಾರೂ ಆ ಹಣದ ಮೇಲೆ ಅವಲಂಬಿತರಲ್ಲ. ಹೋರಾಟವನ್ನು ಮುಂದುವರೆಸೋಣ” ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಅಪ್ಪ ಆಸ್ಪತ್ರೆಯಿಂದಲೇ ಅನ್ನಪೂರ್ಣಿಯವರಿಗೆ ಫೋನ್ ಮಾಡಿ “ನಾನು ಸುಪ್ರೀಂ ಕೋರ್ಟಿಗೆ ಹೋಗಲು ನಿರ್ಧರಿಸಿದ್ದೇನೆ. ನೀವೇ ನನ್ನ ಕೇಸನ್ನು ನೆಡೆಸಿಕೊಡುತ್ತೀರಾ? ನನ್ನ ಮಕ್ಕಳು ಮತ್ತು ಹೆಂಡತಿಯನ್ನು ಪರಿಚಯಿಸುತ್ತೇನೆ. ಅವರು ನಿಮಗೆ ಸಲ್ಲಬೇಕಾದ ಎಲ್ಲಾ ಶುಲ್ಕವನ್ನೂ ಕೊಡುತ್ತಾರೆ. “ಎಂದು ಹೇಳಿ ಫೋನನ್ನು ನನ್ನ ಕೈಗೆ ಕೊಟ್ಟಿದ್ದರು. ಆಚಿನಿಂದ ಅನ್ನಪೂರ್ಣಿಯವರು ತಾವು ಅಪ್ಪನ ಸಹೋದರಿಯೇನೋ ಎಂಬಂತೆ ಮಾತನಾಡುತ್ತಿದ್ದರು. “ಶುಲ್ಕವನ್ನು ಯಾರು ಕೇಳುತ್ತಿದ್ದಾರೆ ? ಮೊದಲು ಹುಷಾರಾಗಿ ಮನೆಗೆ ಬಾ. ಆಮೇಲೆ ಮಾತನಾಡುವ. ” ಅಪ್ಪನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅನ್ನಪೂರ್ಣಿಗೆ ತಿಳಿಸಿದೆ. ಬೇಗ ಹುಷಾರಾಗಲಿ ಎಂದು ಬೇಡಿಕೊಳ್ಳುತೇನೆ ಎಂದು ಹೇಳಿ ಮಾತು ಮುಗಿಸಿದ್ದರು.
ನಾನು ಬರೀ ೧೨ ನೇ ಕ್ಲಾಸ್ ಫೇಲ್ ಆದವನು ಎಷ್ಟು ದೊಡ್ಡ ಡಾಕ್ಟರುಗಳನ್ನು ಕಟಕಟೆ ಹತ್ತುವಂತೆ ಮಾಡಿದೆ? ಎಷ್ಟು ದೊಡ್ಡ ಸಂಸ್ಥೆಯೊಂದಿಗೆ ಹೋರಾಡಿದೆ. ನನಗೇನೋ ಶಕ್ತಿಯಿತ್ತು. ಅದೃಷ್ಟವಿತ್ತು. ಜೀವನ ಕಳೆಯಿತು. ಆದರೆ, ಅಂತಹ ಆಸ್ಪತ್ರೆಗಳು, ಡಾಕ್ಟರುಗಳು ಉಳಿದವರಿಗೆ ಹೀಗೆ ಮಾಡಬಾರದು. ಹೋರಾಟ ಮುಂದುವರೆಸೋಣ. ಆಗಿದ್ದು ಆಗಲಿ ಎಂದು ನಮಗೆ ನಿರ್ದೇಶನ ಕೊಟ್ಟು ದಿನವೆಣಿಸಿದ್ದರು. ಅಪ್ಪ ನಮ್ಮಊರಿನಲ್ಲೇ ಇದ್ದ ಆಸ್ಪತ್ರೆಯಲ್ಲಿ ೧೨ ದಿನಗಳನ್ನು ಕಳೆದು ನಮ್ಮೆಲ್ಲರನ್ನೂ ಬಿಟ್ಟು ತಮ್ಮ ಮುಂದಿನ ಪ್ರಯಾಣವನ್ನು ಕೈಗೊಂಡಿದ್ದರು. ಸಾವನ್ನು, “ನಾನು ರೆಡಿಯಾಗಿದ್ದೇನೆ. ಬಾ” ಎಂದು ಸಂತೋಷದಿಂದ ಸ್ವಾಗತಿಸಿದ್ದರು. ಸಾವೆಂದರೆ ನಷ್ಟ, ನೋವು ಎಂದು ತಿಳಿದಿದ್ದ ನನಗೆ ಸಾವಿನ ಭಯ ಹೋಗಿ ಸಾವೆಂದರೆ ಶಾಂತಿ ಎನ್ನುವ ಭಾವನೆ ಬರುವಂತೆ ಮಾಡಿ ಬಂಧುಮಿತ್ರರೆಲ್ಲಾ ನಿಂತು ಅವರನ್ನು ಮುಟ್ಟಿಕೊಂಡು ವಿಷ್ಣುಸಹಸ್ರನಾಮ ಪಠಿಸುತ್ತಿದ್ದಂತೆಯೇ ಒಂದೊಂದಾಗಿ ಉಸಿರಿನ ನಡುವಿನ ಅಂತರವನ್ನು ಹೆಚ್ಚಿಸುತ್ತಾ ಹೋಗಿ ಉಸಿರಾಡುವುದನ್ನು ನಿಲ್ಲಿಸಿದ್ದರು. ತಮ್ಮ ಅಪೇಕ್ಷೆಯಂತೆಯೇ ತಮಗೆ ಅನ್ಯಾಯ ಮಾಡಿದ ಆಸ್ಪತ್ರೆಯ ಮೂಲಕವೇ ತಮ್ಮ ಕಣ್ಣನ್ನು ದಾನ ಮಾಡಲು ನಿರ್ಧರಿಸಿದ್ದರು. ಎಲ್ಲರೂ ಅಳುತ್ತಿದ್ದರೆ ನಾನು,ಅಪ್ಪ ತಮ್ಮ ನೋವುಗಳಿಂದ ಮುಕ್ತರಾದ ಸಂತೃಪ್ತಿಯಿಂದ, ಅಪ್ಪನನ್ನು ದೂರದ ಪ್ರಯಾಣಕ್ಕೆ ಮನಃಪೂರ್ವಕವಾಗಿ ಕಳುಹಿಸಿದ ನೆಮ್ಮದಿಯಿಂದ, ಆ ದೊಡ್ಡಾಸ್ಪತ್ರೆಗೆ ಅಪ್ಪನ ಕಣ್ಣನ್ನು ತೆಗೆದುಕೊಂಡು ಹೋಗಿ ಎಂದು ಫೋನ್ ಮಾಡಲು, ಫೋನನ್ನು ಹುಡುಕುತ್ತಿದ್ದೆ. ನನ್ನನ್ನು ಸಮಾಧಾನ ಮಾಡಲು ಬಂದವರಿಗೆ ಇರುಸುಮುರುಸು. ನಂತರದ ದಿನಗಳಲ್ಲಿ “ನನಗೆ ಅಳುವೇ ಬರಲಿಲ್ಲ ಚಿಕ್ಕಪ್ಪ” ಎಂದು ಹೇಳಿದಾಗ, ಚಿಕ್ಕಪ್ಪ ಹೇಳಿದ್ದರು. “ಇರುವವರೆಗೆ ನಮ್ಮ ಇಷ್ಟಪಾತ್ರರಿಗೆ ಏನೇನು ಮಾಡುತ್ತೀವೋ ಅದು ಮಾತ್ರ ಉಪಯುಕ್ತ. ಆಮೇಲೆ ಎಷ್ಟು ಅತ್ತರೂ ಅದರಿಂದ ಉಪಯೋಗವಿಲ್ಲ.”
ದೊಡ್ಡ ಆಸ್ಪತ್ರೆಯಿಂದ ಡಾಕ್ಟರುಗಳು ಬಂದು ಅಪ್ಪನ ಕಣ್ಣನ್ನು ತೆಗೆದುಕೊಂಡು ಹೋದಮೇಲೆ ಅಪ್ಪನ ದೇಹವನ್ನು ಮನೆಗೆ ತಂದು ಮುಂದಿನ ಸಂಪ್ರದಾಯದ ಆಚರಣೆಗಳಿಗಾಗಿ ನಡುಮನೆಯಲ್ಲಿ ಮಲಗಿಸಿದರೆ, ಯಾವ ನೋವೂ ಇಲ್ಲದ ನಗುಮುಖ. ಸಾವನ್ನು ಅಷ್ಟು ಹತ್ತಿರದಿಂದ ನೋಡಿದ್ದು ಕಡಿಮೆ. ನೀರು ಬಿಡುವ ಆಚರಣೆ ಮುಗಿಯುವ ಹೊತ್ತಿಗೆ ಸಾಮಾನ್ಯವಾಗಿ ಮುಖ ಸೌಮ್ಯವಾಗಿದ್ದರೂ ಒಂದು ರೀತಿಯ ಭೀತಿಯ ಕಳೆ ಬಂದಿರುತ್ತದೆ. ಅಂತದ್ದನ್ನೇ ನೋಡಿದ್ದ ನನಗೆ ಅಪ್ಪನ ನಗುಮುಖ ಒಂದು ರೀತಿಯ ಆಶ್ವರ್ಯ. ಒಂದು ಫೋಟೋ ತೆಗೆಯುವ ತವಕ. ಮೊದಲೇ ಒಂದು ಹನಿ ಕಣ್ಣೀರನ್ನೂ ಹಾಕದವಳು ಇನ್ನು ಫೋಟೋ ತೆಗೆಯಹೊರಟರೆ ಬೈಸಿಕೊಳ್ಳುವುದು ಗ್ಯಾರಂಟೀ ಎಂದು ಗೊತ್ತಿದ್ದರಿಂದ ಬರೀ ಮನದ ಕನ್ನಡಿಯಲ್ಲಿ ಆ ನಗುಮುಖವನ್ನು ಅಚ್ಚೊತ್ತಿಸಿಕೊಳ್ಳಬೇಕಾಯಿತು. ದೇಹವನ್ನು ಸುಡಲು ತೆಗೆದುಕೊಂಡು ಹೋಗಿ ಮೊದಲ ದಿನದ ಕಾರ್ಯಗಳು ಮುಗಿದ ಮೇಲೆ ಬಂದು ಅಪ್ಪನ ಅಲಮಾರಿಯಲ್ಲಿದ್ದ, ಸಾಮಾನ್ಯವಾಗಿ ವಿಶೇಷವಾದ ಸೂಚನೆಗಳೇನಾದರೂ ಇದ್ದರೆ ಬರೆದು ಇಡುತ್ತಿದ್ದ ಬಾಕ್ಸ್ ತೆಗೆದು ನೋಡಿದರೆ ಕಂದು ಬಣ್ಣದ ಏನ್ವೆಲೋಪ್. ಅದರ ಮೇಲೆ ಮೂಡಿದ್ದ ಅಪ್ಪನ ಸುಂದರವಾದ ಕೈಬರಹದಲ್ಲಿ ಬರೆದ ಅಕ್ಷರಗಳು…”ನನ್ನ ಮರಣಾ ನಂತರ. ತಾ. ೧೧.೦೭”. ಮನಸ್ಸು ಪುನಃ ಹಿಂದಕ್ಕೆ ಓಡಿತ್ತು.ಅಪ್ಪ ತೀರಿಕೊಳ್ಳುವ ೧ ತಿಂಗಳ ಮೊದಲು ಅಪ್ಪನನ್ನು ನೋಡಲು ಮನೆಗೆ ಹೋಗಿದ್ದೆ. ಬೆಳಿಗ್ಗೆ ಅವರು ಸ್ನಾನ ಮುಗಿಸಿ ಧ್ಯಾನ ಮಾಡುವ ಸಮಯ. ನನ್ನನ್ನು ಕರೆದು, ಅವರ ಟೇಬಲ್ ಮೇಲೆ ಬರೆಯಲು ಇಟ್ಟುಕೊಂಡಿದ್ದ ಪುಸ್ತಕ ಮತ್ತು ಒಂದು ಪೆನ್ ತರಲು ಹೇಳಿದರು. ಯಾರಿಗಾದರೂ ಪಾತ್ರ ಬರೆಯುವ ಮನಸ್ಸಿದ್ದು, ಕೂತು ಬರೆಯಲು ಆಲಸ್ಯವಿದ್ದರೆ ಅಥವಾ ಕೂರಲು ಆಗದಿದ್ದರೆ ಹತ್ತಿರ ಇರುತ್ತಿದ್ದ ನನ್ನನ್ನೋ ಅಥವಾ ಇನ್ಯಾರೋ ಮಕ್ಕಳನ್ನೋ ಕರೆದು, ಡಿಕ್ಟೇಷನ್ ಕೊಟ್ಟು ಬರೆಸುವುದು ಅವರ ಅಭ್ಯಾಸವಾಗಿತ್ತು. ಹಾಗೆಯೆ ಏನೋ ಲೆಟರ್ ಬರೆಸುತ್ತಾರೆಂದು ಹೋಗಿ ಕುಳಿತರೆ, ಡಿಕ್ಟೇಷನ್ ಶುರುವಾಗಿದ್ದು ಹೀಗೆ. “ನನ್ನ ಮರಣಾ ನಂತರ”. “ಹೋಗಿ ಅಪ್ಪ. ನಿಮಗೆ ಯಾವಾಗಲೂ ಹೀಗೇ ಏನೇನೋ ಹುಚ್ಚು ಯೋಚನೆಗಳು. ನಾನು ಬರೆಯುವುದಿಲ್ಲ. ” ಎಂದು ಎದ್ದರೆ, “ನಿನಗೆ ಗೊತ್ತಾಗುವುದಿಲ್ಲ. ಹೋದ ನಂತರದ ದಿನಗಳಲ್ಲಿ ಸುತ್ತ ಮುತ್ತಲಿನ ಹಾಗೂ ಮನಸ್ಸಿನ ಭಾವನೆಗಳ ಪ್ರಭಾವ ಎಷ್ಟು ಇರುತ್ತದೆ ಎಂದರೆ, ದಾನ ಧರ್ಮ ಮಾಡಲು ಎಷ್ಟು ಖರ್ಚು ಮಾಡಿದರೂ ಸಾಲದೆಂದು ಎನ್ನಿಸುತ್ತದೆ. ೧೪ ದಿನಗಳು ಮುಗಿಯುವಷ್ಟರಲ್ಲಿ ಆ ಭಾವನೆಗಳ ಪ್ರಭಾವ ಕಡಿಮೆಯಾಗಿ ದಿನನಿತ್ಯದ ಸತ್ಯತೆ ಕಣ್ಣೆದುರು ನಿಲ್ಲುವ ಹೊತ್ತಿಗೆ ಮನೆಯಲ್ಲಿ ಉಳಿದವರು ಜೀವನ ನೆಡೆಸುವಷ್ಟು ಹಣ ಉಳಿದಿರುತ್ತದೆ ಎನ್ನುವ ಖಾತರಿ ಇರುವುದಿಲ್ಲ. ನಾನು ಹೇಳಿದಂತೆ ಬರೆ” ಎಂದು ಒತ್ತಾಯಿಸಿ ಅವರು ಅಂದುಕೊಂಡಿದ್ದನ್ನೆಲ್ಲಾ ಬರೆಸಿದ್ದರು.
ಖರ್ಚುಗಳು ಮಿತವಾಗಿದ್ದರೆ ಮಾತ್ರ ಜೀವನ ಸಾಧ್ಯ ಎಂಬುದು ಅವರ ಅನುಭವವಾಗಿದ್ದರಿಂದ, ತಮ್ಮ ದಿನಕರ್ಮಗಳಿಗೂ ಇತಿಮಿತಿಗಳನ್ನು ಸೂಚಿಸುವುದು ಅವರ “ನನ್ನ ಮರಣಾ ನಂತರ” ಪತ್ರದ ಧ್ಯೇಯವಾಗಿತ್ತು. ಒಂದು ತಿಂಗಳ ಹಿಂದೆ ನನ್ನ ಕೈಯಿಂದಲೇ ಬರೆಸಿದ ಪಾತ್ರವನ್ನು ಪುನಃ ಓದಬೇಕಲ್ಲಾ ಎಂದು ಸಂಕೋಚದಿಂದಲೇ ಪಾತ್ರ ತೆಗೆದರೆ, ಅಪ್ಪನ ಕೈ ಬರಹ.
೧) ೨೫,೦೦೦ ರೂ. ಒಳಗಿನ ಖರ್ಚಿನಲ್ಲಿ ನನ್ನ ೧ ರಿಂದ ೧೪ ರವರೆಗಿನ ದಿನಕರ್ಮಗಳನ್ನು ಮುಗಿಸತಕ್ಕದ್ದು.
೨) ಸರಳವಾಗಿ ಮಾಡಿದರೆ ಸಾಕು. ಆಡಂಬರ ಬೇಡ.
೩) ಸರಿಯಾದ ಪುರೋಹಿತರಿಂದ ಮಾಡಿಸತಕ್ಕದ್ದು.
೪) ಪುರೋಹಿತರಿಗೆ ೧೦ ದಿನಕ್ಕೆ ೨,೦೦೦ + ಗೋದಾನದ ಪ್ರಯುಕ್ತ ೨,೦೦೦ + ಹನ್ನೊಂದರಿಂದ ಹದಿನಾಲ್ಕನೇ ದಿನಗಳವರೆಗೆ ಎಲ್ಲಾ ಸೇರಿ ಒಟ್ಟು ೪,೦೦೦ ರೂಪಾಯಿಗಳನ್ನು ಕೊಡತಕ್ಕದ್ದು.
೫) ದುಃಖದ ಜವಳಿ ಕೊಡುವುದು, ತೆಗೆದುಕೊಳ್ಳುವುದು ಎರಡೂ ಬೇಡ.
೬) ಕುಟುಂಬದವರು, ಅತೀ ಹತ್ತಿರದ ಸಂಬಂಧಿಗಳಿಗೆ ಮಾತ್ರ ಹೇಳಿದರೆ ಸಾಕು
೭) ಊಟದ ದಕ್ಷಿಣೆ ೧೦ ರೂ. ಕೊಡಬಹುದು.
…….
ಹೀಗೆ ದಾನ ಎಷ್ಟು ಕೊಡಬೇಕು. ಏನೇನು ದಾನ ಕೊಡಬೇಕು. ಪಾತ್ರೆಗಳನ್ನು ದಾನ ಕೊಡುವಾಗ ಸ್ಟೀಲ್ ಪಾತ್ರೆ ಸಾಕೇ , ಹೀಗೆ ಎಲ್ಲವಕ್ಕೂ ಒಟ್ಟು ಖರ್ಚು ೨೫೦೦೦ ರೂಪಾಯಿಗಳ ಒಳಗೆ ಬರುವಂತೆ ನಿರ್ದೇಶಿಸಿದ್ದರು. ಮನೆಯ ಹಿರಿಯರೆಲ್ಲರನ್ನೂ ಒಟ್ಟು ಕೂರಿಸಿಕೊಂಡು ಅಪ್ಪನ ಪತ್ರವನ್ನು ಓದಿ ಹೇಳಿದ ಮೇಲೆ ಒಂದು ರೀತಿಯ ನಿರಾಳ. ಏಕೆಂದರೆ ಮುಂದಿನ ದಾರಿ ಅಪ್ಪ ತಾವೇ ಬರೆದು ಸೂಚಿಸಿದ್ದರು. ಕಾರ್ಯರೂಪಕ್ಕೆ ತರುವುದಷ್ಟೇ ಬಾಕಿಯಿತ್ತು. ಅವರ ಆ ದೂರದೃಷ್ಟಿಯಲ್ಲಿ, ಅಮ್ಮ ಮತ್ತು ತಮ್ಮನ ತಮ್ಮ ನಂತರದ ಮುಂದಿನ ಜೀವನ ಅತಿಮುಖ್ಯವಾಗಿತ್ತು. ಹೀಗೆ ಪ್ರತಿ ವಿಷಯದಲ್ಲಿಯೂ ಬರೀ ತಾವು ಇರುವವರೆಗಿನ ಜವಾಬ್ದಾರಿಯಲ್ಲದೆ ತಾವು ಹೋದ ಮೇಲೂ ನಾವೆಲ್ಲರೂ ಆರಾಮಾಗಿ ಇರಬೇಕು ಇನ್ನುವ ಯೋಚನೆ.
ಅಪ್ಪನ ಆಸೆಯಂತೆಯೇ ಅವರ ದಿನಕರ್ಮಗಳು ನೆಡೆದವು. ಹಾಗೆಯೇ ಅಪ್ಪನ ಅಲ್ಲಿಯವರೆಗಿನ ಮಾರ್ಗದರ್ಶನದಂತೆ ನಮ್ಮ ಜೀವನಗಳು ಮುಂದುವರೆದವು.
ಅಮ್ಮ ಮತ್ತು ತಮ್ಮ ತೋಟದ ಕೆಲಸ ಕಾರ್ಯಗಳ ಮೇಲ್ವಿಚಾರಣೆ ನೆಡೆಸಲು ಶುರುಮಾಡಿದರು. ತಮ್ಮ ತನ್ನದೇ ಬ್ಯುಸಿನೆಸ್ ಶುರು ಮಾಡಿದ್ದ. ನಾನು ಪುನಃ ಜರ್ಮನಿ ಸೇರಿದ್ದೆ.
ಅಮ್ಮನಿಗೆ ಪ್ರಯಾಣ ಮಾಡುವುದು ಎಂದರೆ ಮೊದಲಿಂದಲೂ ಬಹಳ ಇಷ್ಟ ಎಂದು ನನಗೆ ಗೊತ್ತಿದ್ದ ವಿಷಯ. ಅಪ್ಪ ತಮ್ಮ ಓಡಾಡುವ ಶಕ್ತಿ ಕಳೆದುಕೊಳ್ಳುವ ಮೊದಲೇ, ಅವರೆಲ್ಲರೂ ಯಾವಾಗಲೂ ಕೆಲಸದಲ್ಲಿ ಮಗ್ನರಾಗಿರುತ್ತಿದ್ದಾಗ, ಕೆಲವೊಮ್ಮೆ ತನ್ನ ಪ್ರವಾಸದ ಮೇಲಿನ ಆಸಕ್ತಿಯನ್ನು, ಹೇಗೆ ತಮ್ಮ ಕೆಲಸ ಕಾರ್ಯಗಳ ಮಧ್ಯೆ ಆ ಕನಸುಗಳಿಗೆ ಅವಕಾಶವೇ ಇಲ್ಲ ಎಂಬುದನ್ನೂ ನಮಗೆ ವಿವರಿಸುತ್ತಿದ್ದಳು. ಅಮ್ಮನ ಜೊತೆ ಪ್ರವಾಸ ಮಾಡುವುದು ನನ್ನ ಕನಸಾಗಿತ್ತು. ಆ ಕನಸನ್ನು ನನಸು ಮಾಡುವ ಸಮಯ ಬಂದಿತ್ತು. ೧೮ ವರ್ಷಗಳ ಕಾಲ ಎಲ್ಲೂ ಒಂದು ರಾತ್ರಿ ಕಳೆಯದ, ಒಬ್ಬಳೇ ಎಲ್ಲೂ ಓಡಾಡದ ಅಮ್ಮ ವಿಮಾನದಲ್ಲಿ ಪಯಣಿಸಲು ತಯಾರಾಗಿದ್ದಳು.
ಜರ್ಮನಿಗೆ ವೀಸಾ ಮಾಡಿಸಲು ಚೆನ್ನೈ ಗೆ ಹೋಗುವುದರಿಂದ ಹಿಡಿದು ಅಮ್ಮ ಜರ್ಮನಿಗೆ ಬರುವವರೆಗಿನ, ಯೂರೋಪಿನ ಹಲವಾರು ದೇಶಗಳನ್ನು ಸುತ್ತುವ ಎಲ್ಲಾ ಪ್ರವಾಸಗಳೂ, ಅಮ್ಮನ ಪ್ರವಾಸದ ಕನಸನ್ನು ನನಸು ಮಾಡುವುದಕ್ಕಿಂತ ಹೆಚ್ಚು ನನ್ನ ಮನದಾಳದ ಆಸೆಯನ್ನು ತೀರಿಸಿಕೊಂಡ ಅನುಭವವಾಗಿತ್ತು. ಜೊತೆಗೆ ಅಮ್ಮನ ಬಳಿ ಕುಳಿತು ಮನಸ್ಸು ತುಂಬುವವರೆಗೂ ಮಾತನಾಡುವ ಅವಕಾಶವಾಗಿತ್ತು. ಒಂದು ದಿನವೂ ಅನ್ನ ತಿನ್ನದೇ ಇರಲು ಸಾಧ್ಯವಿಲ್ಲದ ಅಮ್ಮನನ್ನು ಬ್ರೆಡ್ ಮತ್ತು ಪಿಜ್ಜಾ ತಿಂದು ಓಡಾಡುವಂತೆ ಮಾಡಿದ ಸಾಹಸವೂ ಅದಾಗಿತ್ತು.
ಪ್ರವಾಸಗಳೆಲ್ಲಾ ಮುಗಿದು ಅಮ್ಮ ವಾಪಸು ಹೊರಡುವ ಸಮಯ ಬಂದರೆ ಸಂಕಟ. ಒಬ್ಬಳನ್ನೇ ವಾಪಸು ಕಳಿಸುವ ಆತಂಕ. ಅಮ್ಮನಾದರೋ ಏನೂ ಪರವಾಗಿಲ್ಲ. ಬಾಯಿ ಇದ್ದರೆ ಬದುಕಬಹುದು. ಹೆದರಬೇಡಿ ಎಂದು ತನ್ನ ಮೊದಲ ಒಬ್ಬಂಟಿ ಪಯಣವನ್ನು ಕೈಗೊಂಡಿದ್ದಳು. ದುಬೈನಲ್ಲಿ ಬೇರೆ ವಿಮಾನವನ್ನು ಹತ್ತಬೇಕಿತ್ತು. ಮಧ್ಯೆ ೫-೬ ಗಂಟೆಗಳ ಸಮಯಾವಧಿ. ಅಮ್ಮ ವಾಪಸು ತಲುಪಿ ಫೋನ್ ಬಂದಮೇಲಷ್ಟೇ ನಿರಾತಂಕ. ಪಕ್ಕದಲ್ಲಿ ಕುಳಿತವರೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡಿದುದನ್ನು ಹೇಳಿದಾಗ ಆಶ್ಚರ್ಯ. ಅಮ್ಮ ಇಂಗ್ಲಿಷ್ ಮಾತನಾಡುವುದನ್ನು ಯಾವತ್ತೂ ನೋಡಿರಲಿಲ್ಲ.
ವಾಪಸು ತಲುಪಿದ ಅಮ್ಮ ಮನೆ ಮತ್ತು ತೋಟವನ್ನು ನೋಡಿಕೊಳ್ಳುವ ಕೆಲಸವನ್ನು ನಿರ್ವಹಿಸುವ ಜೊತೆಗೆ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್, ಸಂಸ್ಕೃತ ಭಾಷೆಯ ಕಲಿಕೆ ಮತ್ತು ಸೌಂದರ್ಯ ಲಹರಿ ಪಠಣಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಬಿಡುವಿಲ್ಲದಂತಾದಳು. ತಮ್ಮ ತನ್ನ ಬಿಸಿನೆಸ್ ನೆಡೆಸಿಕೊಂಡು ಹೋಗುತ್ತಿದ್ದ. ನಾನು ಜರ್ಮನಿಯಲ್ಲಿ ಕೆಲಸ ಹುಡುಕುತ್ತಿದ್ದೆ. ಅಪ್ಪನ ಕೇಸನ್ನು ಸುಪ್ರೀಂ ಕೋರ್ಟಿನಲ್ಲಿ ಅಪೀಲ್ ಮಾಡಿಯಾಗಿತ್ತು. ಅನ್ನಪೂರ್ಣಿಯವರೇ ನಮ್ಮ ಕೇಸನ್ನು ನಿರ್ವಹಿಸುತ್ತಿದ್ದರು.
ನನಗೆ ಕೆಲಸ ದೊರಕಿದಾಗ, ಮೊದಲ ಸಂಬಳ ಅನ್ನಪೂರ್ಣಿಯವರಿಗೆ ಫೀಸನ್ನು ಕಳಿಸಲು ಎಂದು ನಿರ್ಧರಿಸಿದ್ದೆ. ಹಾಗೆಯೇ ಅವರಿಗೆ ಹಣವನ್ನು ಕಳಿಸಿ ಫೋನ್ ಮಾಡಿ ಹೇಳಿದರೆ, “ಈಗ ಯಾಕೆ ಕಳಿಸಿದೆ? ಖರ್ಚುಗಳೇನೂ ಇಲ್ಲ.” ಎಂದು ಹೇಳಿದ್ದರು. ನಮ್ಮ ಜೀವನಗಳನ್ನು ರೂಪಿಸಿಕೊಳ್ಳುವುದರ ಜೊತೆಗೆ ಆಗಾಗ ಫೋನ್ ಮಾಡಿ ನಮ್ಮ ಕೇಸು ಲಿಸ್ಟ್ ಆಗಿದೆಯಾ? ಎಂದು ಕೇಳುವುದನ್ನು ಬಿಟ್ಟು ಕೇಸಿನ ವಿಚಾರದಲ್ಲಿ ನಾವು ಏನೂ ಮಾಡಲು ಸಾಧ್ಯವಿರಲಿಲ್ಲ.
೨೦೧೫ ರಲ್ಲಿ ಅಮ್ಮನಿಗೆ ಅಡಿಕೆಯ ಸಹಕಾರ ಸಂಸ್ಥೆಯ ಡೈರೆಕ್ಟರ್ ಆಗಲು ಎಲೆಕ್ಷನ್ ನಲ್ಲಿ ನಿಲ್ಲಲು ಅವಕಾಶ ಕೂಡಿ ಬಂದಿತು. ಹಿಂಜರಿಕೆಯಿಂದಲೇ ಎಲೆಕ್ಷನ್ ನಲ್ಲಿ ನಿಲ್ಲಲು ತಯಾರಾಗಿ, ಗೆದ್ದು ತನ್ನ ಐವತ್ತೇಳನೇ ವಯಸ್ಸಿನಲ್ಲಿ ಹೊಸ ವೃತ್ತಿಜೀವನ ಪ್ರಾರಂಭಿಸಿದ್ದಳು. ಜೊತೆಯಲ್ಲಿಯೇ ತಾನು ಭಾಗವಹಿಸುತ್ತಿದ್ದ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸಿನಲ್ಲಿ ತಾನೇ ಪಾಠ ಮಾಡಲು ಶುರು ಮಾಡಿದ್ದಳು. ಜೊತೆಗೆ ಸಂಸ್ಕೃತ ಅಭ್ಯಾಸ, ಸೌಂದರ್ಯ ಲಹರಿ, ಭಜನಾ ಸಂಘ ಹೀಗೆ ಒಂದಲ್ಲಾ ಒಂದರಲ್ಲಿ ಬಿಡುವಿಲ್ಲದಂತೆ ಕಾರ್ಯಪ್ರವೃತ್ತಳಾಗಿದ್ದಳು.
ನನಗೂ ಇಬ್ಬರು ಮಕ್ಕಳಾಗಿ, ನನ್ನ ಕೆಲಸ, ಮಕ್ಕಳ ಪಾಲನೆ ಪೋಷಣೆಗಳಲ್ಲಿ ಮಗ್ನರಾಗಿರುತ್ತಿದ್ದರೆ, ಮಾಡುತ್ತಿದ್ದ ಎಲ್ಲಾ ಕೆಲಸಕ್ಕೂ ಅಪ್ಪ ನಾವು ಚಿಕ್ಕವರಿದ್ದಾಗ ನಮಗೆ ಕೊಟ್ಟ ಮಾರ್ಗದರ್ಶನವೇ ದಾರಿದೀಪದಂತಾಗಿತ್ತು. ಮಾಡುವ ಪ್ರತಿ ಕೆಲಸದಲ್ಲೂ ಅಪ್ಪ ಕಾಣುತ್ತಿದ್ದರು. ಮಕ್ಕಳಿಗೆ ಹೇಳುತ್ತಿದ್ದ ಪ್ರತಿ ಬುದ್ಧಿಮಾತಿನ ಹಿಂದೆಯೂ ಅಪ್ಪ ನಮಗೆ ಕೊಟ್ಟ ಉಪದೇಶವಿರುತ್ತಿತ್ತು.
ಮಕ್ಕಳೊಂದಿಗೆ ಮನೆಯ ಹಿಂಬದಿಯಲ್ಲಿದ್ದ ಹಿತ್ತಲಿನಲ್ಲಿ ಗಿಡಗಳನ್ನು ನೆಡುವಾಗ ಕಾಣಿಸಿದ ಎರೆಹುಳುವನ್ನು ನೋಡಿ ಹೆದರಿಕೊಂಡು ದೂರ ಓಡುವ ಮಕ್ಕಳಿಗೆ ಹೇಳುತ್ತಿದ್ದ ಕಥೆಗಳಲ್ಲಿಯೂ ಅಪ್ಪನ ನೆನಪುಗಳೇ. ನಾವು ಚಿಕ್ಕವರಿದ್ದಾಗ, ಒಂದಷ್ಟು ಚಿಕ್ಕು, ಪೇರಳೆ, ಹಲಸು ಮುಂತಾದ ಗಿಡಗಳನ್ನು ನರ್ಸರಿಯಿಂದ ತರಿಸಿ, ನನ್ನನ್ನೂ ನನ್ನ ತಮ್ಮನನ್ನೂ ಬಸ್ಸಿನಲ್ಲಿ ನಮ್ಮ ತೋಟವಿದ್ದ ಊರಿಗೆ ಕಳುಹಿಸುತ್ತಿದ್ದರು. ನಮ್ಮ ಕೈಯಲ್ಲೇ ಗುಂಡಿ ತೋಡಿಸಿ ಗಿಡ ನೆಡೆಸುವಂತೆ ಕೆಲಸದವರಿಗೆ ಫೋನ್ ಮಾಡಿ ಮೊದಲೇ ಹೇಳಿರುತ್ತಿದ್ದರು. ಬಸ್ಸಿನಲ್ಲಿ ಹೋಗುವುದೇನೋ ಉತ್ಸಾಹದ ಕೆಲಸ. ಆದರೆ ಬಸ್ಸಿನಿಂದ ಇಳಿದು ಸುಮಾರು ಒಂದು ಕಿಲೋಮೀಟರು ದೂರದಲ್ಲಿದ್ದ ನಮ್ಮ ತೋಟಕ್ಕೆ ಬಿಸಿಲಿನಲ್ಲಿ ನೆಡೆದುಕೊಂಡು ಹೋಗುವಷ್ಟರಲ್ಲಿ ನಮ್ಮ ಉತ್ಸಾಹವೆಲ್ಲಾ ಇಳಿದು, ಬೇಗ ವಾಪಸು ಹೋದರೆ ಸಾಕು ಎನ್ನುವ ಭಾವನೆ ತುಂಬಿರುತ್ತಿತ್ತು.
ಇಷ್ಟರ ಜೊತೆಗೆ ತೋಟದಲ್ಲಿ ಎಲ್ಲ ಮೂಲೆಗಳಿಗೂ ಹೋಗಿ ಆ ಮರ ಏನಾಗಿದೆ. ಈ ಗಿಡ ಎಷ್ಟು ಬೆಳೆದಿದೆ ಎಂದು ಬೇರೆ ವರದಿ ತಯಾರಿಸಿಕೊಂಡು ಹೋಗಬೇಕು. ತೋಟವೋ ಇಂಬಳಗಳ ಸಮುದ್ರ. ಕಾಲಿಗೆ ಹತ್ತಿಕೊಂಡ ಒಂದು ಇಂಬಳ ತೆಗೆಯುವಷ್ಟರಲ್ಲಿ ಇನ್ನೊಂದು ಹತ್ತಿಕೊಂಡಿರುತ್ತಿತ್ತು. ಒಣಗಿದ ಕಡ್ಡಿಯಂತೆ ಕಾಣುವ ಅವು ಹತ್ತಿಕೊಂಡು ಕಚ್ಚಿ ರಕ್ತ ಹೀರಿ ದಪ್ಪವಾದ ಮೇಲೆಯೇ ಸ್ವಲ್ಪ ತುರಿಕೆ ಶುರುವಾಗುವುದು ಹಾಗೂ ಇಂಬಳ ಹತ್ತಿಕೊಂಡಿದೆ ಎಂದು ಗೊತ್ತಾಗುವುದು. ಅಪಾಯಕಾರಿ ಅಲ್ಲದಿದ್ದರೂ ಸಿಂಬಳದ ಹುಳಗಳಂತೆ ಅಸಹ್ಯಕರ. ನಾವು ತೋಟದ ಮೂಲೆಗಳಿಗೆ ಹೋಗದೆ ಅಪ್ಪನಿಗೆ ಸುಳ್ಳು ವರದಿ ಕೊಟ್ಟರೆ, ಕೆಲಸದವರು ಸತ್ಯ ಹೇಳಿ ನಾವು ಬೈಸಿಕೊಳ್ಳುವಂತೆ ಮಾಡುತ್ತಿದ್ದರು. ಬುದ್ಧಿ ಬಂದ ಮೇಲೆ, “ಒಂದು ಕೊಟ್ಟರೆ ಹತ್ತು ವಾಪಸು ಕೊಡುವ ಗುಣ ಭೂಮಿಗೆ ಮಾತ್ರ ಇರುವುದು. ವ್ಯವಸಾಯ ಎಂದೂ ಕೈ ಬಿಡುವುದಿಲ್ಲ. ಜುಟ್ಟಿಗೆ ಮಲ್ಲಿಗೆ ಸಿಗದಿರಬಹುದು. ಆದರೆ ಹೊಟ್ಟೆಗೆ ಅನ್ನಕ್ಕಂತೂ ಎಂದೂ ತೊಂದರೆಯಾಗುವುದಿಲ್ಲ.” ಎಂದು ವಿವರಿಸುತ್ತಿದ್ದರು. ಜೊತೆಯಲ್ಲಿ ರೋಡಿನಲ್ಲಿ ಬಿದ್ದಿರುತ್ತಿದ್ದ ಸಗಣಿಯನ್ನು ತರಿಸಿ, ನಮ್ಮ ಕೈಯಲ್ಲೇ ಅದನ್ನು ನೀರಿನಲ್ಲಿ ಕದರಿಸಿ, ಸಗಣಿ ನೀರನ್ನು ಅಂಗಳದಲ್ಲಿದ್ದ ಗಿಡಗಳಿಗೆ ಹಾಕಿಸುತ್ತಿದ್ದರು. ಕೋಲು ತೆಗೆದುಕೊಂಡು ಕದರುತ್ತೇವೆ ಎಂದರೆ ಒಪ್ಪುತ್ತಿರಲಿಲ್ಲ. ಆಗ ಒತ್ತಾಯದಿಂದ ಮಾಡುತ್ತಿದ್ದ ಕೆಲಸಗಳು ಈಗ ಆಪ್ತವಾಗಿ ಕಾಣುತ್ತವೆ. ದನದ ಫ್ರೆಶ್ ಸಗಣಿ ನೋಡಿದರೆ ಗಿಡಗಳ ನೆನಪಾಗುತ್ತದೆ. ಅದರ ಗಂಧ ಕೆಟ್ಟ ವಾಸನೆ ಎನಿಸುವುದಕ್ಕಿಂತ ಪರಿಚಿತ ಎನ್ನಿಸುತ್ತದೆ. ನೆನಪು ಬೇರಿನೊಡನೆ ಬೆಸೆಯುತ್ತದೆ. ಅಪ್ಪನ ವ್ಯವಸಾಯದ ಬಗ್ಗೆ ಇದ್ದ ಆಸಕ್ತಿಯೊಂದಿಗೆ, ಪ್ರೀತಿಯೊಂದಿಗೆ ಬೆಸೆಯುತ್ತದೆ.
ಸುಮ್ಮನೆ ಕಾಲಹರಣ ಮಾಡುತ್ತಿದ್ದರೆ ಅಪ್ಪನಿಗೆ ತುಂಬಾ ಸಿಟ್ಟು ಬರುತ್ತಿತ್ತು. ನಾನು ೬ನೇ ತರಗತಿಯಲ್ಲಿದ್ದಾಗಲೇ ಒಂದು ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರತಿ ಗಂಟೆಯನ್ನು ಹೇಗೆ ಕಳೆದೆ ಎಂದು ಪ್ರತಿ ಗಂಟೆಯ ವಿವರವನ್ನು ಬರೆದು ಕೊಡುವಂತೆ ಆದೇಶಿಸಿದ್ದರು. ಆ ದಿನ ಸ್ಕೂಲ್ ಇರಲಿಲ್ಲ. ಸಂಜೆಯ ಹೊತ್ತಿಗೆ ವಿವರಗಳನ್ನು ನೋಡುವಾಗ ನನಗೇ ನಾಚಿಕೆಯಾಗಿತ್ತು. ಊಟ, ತಿಂಡಿ, ಓದು, ಆಟಗಳಿಗೆ ಕಳೆದ ಸಮಯಕ್ಕಿಂತಾ ಅಲ್ಲಿಲ್ಲಿ ಕುಳಿತು ನಿಂತು ಮಾತನಾಡಿ ಕಳೆದ ಸಮಯವೇ ಹೆಚ್ಚಾಗಿತ್ತು. ಆಟ ಅಥವಾ ನಿದ್ದೆಗೆ ವ್ಯಯವಾಗಿದ್ದರೂ ಪರವಾಗಿರಲಿಲ್ಲ. ಆದರೆ, ಆ ಸುಮ್ಮನೆ ಕಳೆದ ಸಮಯದಿಂದ ಏನೂ ಉಪಯೋಗವೇ ಇರಲಿಲ್ಲ. ಆ ಸಮಯದಿಂದ ನನ್ನ ಮನಸ್ಸಿಗೂ ಸಂತೋಷ ದೊರಕಿರಲಿಲ್ಲ. ಸಮಯದ ಮಹತ್ವವು ಇಂದು ಅರಿವಾದಂತೆ ಅಂದು ತಿಳಿಯದಿದ್ದರೂ, ಆ ವಯಸ್ಸಿಗೆ ಅನುಗುಣವಾಗಿ ಉಪಯೋಗಕ್ಕೆ ಬರುವುದಕ್ಕೆ ಅಲ್ಲದಿದ್ದರೂ ಮನಸ್ಸಿಗೆ ಸಂತೋಷ ಕೊಡುವ ಕೆಲಸಗಳಿಗೆ ಸಮಯವನ್ನು ಉಪಯೋಗಿಸುವುದು ಜಾಣತನವೆಂಬ ಅರಿವಾಗಿತ್ತು. ನನ್ನ ಮಕ್ಕಳು ಸುಮ್ಮನೆ ಕಾಲಹರಣವನ್ನು ಮಾಡುವುದನ್ನು ನೋಡಿದಾಗ ಅಪ್ಪನಿಗೆ ಬರುತ್ತಿದ್ದ ಅದೇ ಕೋಪ, ನನ್ನ ಅರಿವಿಲ್ಲದೆಯೇ ನನ್ನ ಮುಖಭಾವಗಳಲ್ಲಿ, ಮಾತುಗಳಲ್ಲಿ ತಾನಾಗಿಯೇ ಪ್ರಕಟಿತವಾಗುವುದನ್ನು ನೋಡಿದಾಗ ಅಪ್ಪ ಇನ್ನೂ ನಮ್ಮಲ್ಲಿಯೇ ಜೀವಂತವಾಗಿ ಇದ್ದಾರೆ ಎನ್ನಿಸುತ್ತದೆ.
ಬರೀ ಪುಸ್ತಕದ ಹುಳವಾಗಬಾರದು. ಸರ್ವತೋಮುಖ ಬೆಳವಣಿಗೆ ಮುಖ್ಯ ಎಂಬುದು ಅಪ್ಪನ ನಂಬಿಕೆಯಾಗಿತ್ತು. ಅದಕ್ಕಾಗಿ ನಾವು ಚಿಕ್ಕವರಿರುವಾಗ ಏನೇನು ಕಲಿಯಲು ಅವಕಾಶ ಇತ್ತೋ ಎಲ್ಲವನ್ನೂ ದುಡ್ಡಿನ ಮುಖ ನೋಡದೆ ಕಲಿಸುವ ಪ್ರಯತ್ನ ಮಾಡಿದ್ದರು. ಬಟ್ಟೆ ಚಪ್ಪಲಿ ಮುಂತಾದವಕ್ಕೆ ದುಡ್ಡು ಹಾಕಲು ಅಗತ್ಯವಿದೆಯೇ ಎಂಬ ಪ್ರಶ್ನೆ ಕೇಳುವವರು, ಪುಸ್ತಕಗಳ ವಿಷಯಕ್ಕೆ ಎಂದೂ ದುಡ್ಡೆಷ್ಟು ಎಂದು ಕೇಳಿದ್ದಿಲ್ಲ. ಅವರದ್ದೇ ಆದ ಪುಸ್ತಕದ ಬಂಡಾರವೂ ಇತ್ತು. ನಾನು ಓದಲು ಕಲಿಯುವ ಮೊದಲೇ, ಅಮರಚಿತ್ರ ಕಥೆಯ ಪೂರ್ತಿ ಮಾಲಿಕೆಯೇ ಅವರ ಪುಸ್ತಕದ ಬೀರುವಿನಲ್ಲಿ ನಾನು ಓದಲು ಕಲಿಯುವುದನ್ನು ಕಾಯುತ್ತಿತ್ತು. ಆ ಕಲಿಕೆಯ ವಿಷಯದ ಹಾಗೂ ಪುಸ್ತಕದ ಮೇಲಿನ ಆಸಕ್ತಿ ನನಗೆ ಗೊತ್ತಿಲ್ಲದೇ ನನ್ನೊಳಗೆ ಮರವಾಗಿ ಬೆಳೆದಿದೆ. ಹಾಗಾಗಿ ಪುಸ್ತಕಗಳಲ್ಲೂ ನನಗೆ ಅಪ್ಪ ಕಾಣಿಸುತ್ತಾರೆ.
ಅಪ್ಪ ಹೇಳಿದ್ದನ್ನೇ ಪುನಃ ಪುನಃ ಹೇಳುತ್ತಿರುತ್ತಾರೆ ಎಂಬ ಭಾವನೆಯಿಂದ ಕೆಲವೊಮ್ಮೆ ಅವರು ಉಪದೇಶಿಸಲು ಶುರು ಮಾಡಿದರೆ ಜಾರಿಕೊಳ್ಳುತ್ತಿದ್ದೆವು. ಹೇಳುತ್ತಿರುವುದನ್ನು ಕೇಳಿಸಿಕೊಳ್ಳಲು ನಾವು ಅಲ್ಲಿ ನಿಲ್ಲದಿದ್ದರೆ, ಹೇಳಬೇಕಾಗಿದ್ದನ್ನೆಲ್ಲಾ ಒಂದು ಪೇಪರಿನಲ್ಲಿ ಬರೆದು ನಮ್ಮ ನಡುಮನೆಯಲ್ಲಿ ನೇತುಹಾಕುತ್ತಿದ್ದರು. ಅದಂತೂ ನಮ್ಮನ್ನು ಇನ್ನೂ ಮುಜುಗರಕ್ಕೀಡುಮಾಡುತ್ತಿತ್ತು. ಯಾಕೆಂದರೆ ಉಪದೇಶಗಳ ಸಾಲಿನಲ್ಲಿ “ದಿನ ಬೆಳಿಗ್ಗೆ ಎದ್ದ ಕೂಡಲೇ ಹಲ್ಲು ಉಜ್ಜಬೇಕು. ಮುಖ ತೊಳೆಯಬೇಕು” ಎಂಬಂತಹ ನಾವು ದಿನಾಲೂ ಮಾಡುತ್ತಿದ್ದ ಕಾರ್ಯಗಳೂ ಇರುತ್ತಿದ್ದವು. ನೇತುಹಾಕಿದ ಉಪದೇಶಗಳ ಪಟ್ಟಿಯನ್ನು ಮನೆಗೆ ಬಂದವರೆಲ್ಲಾ ಓದಿ ಶ್ಲಾಘಿಸುತ್ತಿದ್ದರು. ಆದರೆ ನಮಗೋ, ಅವರೆಲ್ಲಾ ನಾವು ಬೆಳಿಗ್ಗೆ ಎದ್ದು ಹಲ್ಲು ಉಜ್ಜುವುದಿಲ್ಲ, ಮುಖ ತೊಳೆಯುವುದಿಲ್ಲ. ಅದಕ್ಕೆ ಅಪ್ಪ ಈ ರೀತಿ ಬರೆದಿದ್ದಾರೆ ಎಂದು ಅಂದುಕೊಳ್ಳುತ್ತಾರೇನೋ ಎಂದು ಮುಜುಗರ. ಈಗ ನನ್ನ ಮಕ್ಕಳು ಹೇಳಿದ್ದು ಕೇಳದಿದ್ದಾಗ, ತಪ್ಪಿಸಿಕೊಂಡು ಹೋದಾಗ ಪುನಃ ಅನುಸರಿಸುವುದು ಅಪ್ಪನನ್ನೇ. ಬಾಯಲ್ಲಿ ಹೇಳುವುದಕ್ಕಿಂತ ಕೆಲವೊಮ್ಮೆ ಪ್ರೀತಿಯಿಂದ ಮಕ್ಕಳಿಗೆ ಬರೆದಿಟ್ಟ ಪತ್ರ ಪರಿಣಾಮಕಾರಿ ಹಾಗೂ ಮಾತುಗಳಿಗಿಂತ ಹೆಚ್ಚು ನಾಟುತ್ತದೆ ಎಂಬುದು ನಾನು ನನ್ನ ಅನುಭವದಲ್ಲಿ ಕಂಡುಕೊಂಡ ಸತ್ಯ.
ಅಪ್ಪ ನಮಗಾಗಿ ಬರೆದಿಟ್ಟ ಡೈರಿಯನ್ನು ನಾನು ತೆಗೆದುಕೊಂಡು ಬಂದಿದ್ದೆ. ತಮ್ಮನಿಗೆ ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಒಂದು ದಿನ ” ಅಕ್ಕಾ, ಅಪ್ಪನ ಡೈರಿಯನ್ನು ವಾಪಸು ಕಳುಹಿಸುತ್ತೀಯಾ? ಅಥವಾ ಸ್ಕ್ಯಾನ್ ಮಾಡಿ ಪ್ರತೀ ಪುಟವನ್ನೂ ಕಳುಹಿಸುತ್ತೀಯಾ? ಅಪ್ಪ ಬರೆದಿಡುತ್ತಿದ್ದುದನ್ನು ಮಿಸ್ ಮಾಡುತ್ತಾ ಇದೀನಿ.” ಎಂದು ಹೇಳಿದಾಗ, ಅವನಲ್ಲೂ ಅಪ್ಪನ ಗುಣಗಳು ಜಾಗ್ರತವಾಗಿದ್ದು ಕಂಡು ಒಂದೆಡೆ ಸಂತೋಷವಾದರೆ ಇನ್ನೊಂದೆಡೆ ನಗು. ಯಾಕೆಂದರೆ ಅಪ್ಪನ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದುದು ನನಗಿಂತ ಅವನು ಹೆಚ್ಚು.
ಅಪ್ಪ ತೀರಿ ಹೋಗಿ ೧೧ ವರ್ಷಗಳಾಗಿ, ಅಮ್ಮ ತಮ್ಮ ಮತ್ತು ನನ್ನ ಜೀವನಗಳು ಸ್ವಾವಲಂಬನೆಯಿಂದ ನೆಡೆಯುತ್ತಿದ್ದಾಗ ಅಂತೂ ಒಂದು ದಿನ ಅಪ್ಪನ ಕೇಸಿನ ಕೊನೆಯ ತೀರ್ಪು ಬಂದಿತ್ತು. ಮುಂಚೆ ನ್ಯಾಷನಲ್ ಕನ್ಸೂಮರ್ ಕೋರ್ಟಿನಲ್ಲಿ ಆರ್ಡರ್ ಆಗಿದ್ದ ಆರು ಲಕ್ಷದ ಮೂವತ್ತು ಸಾವಿರ ರೂಪಾಯಿಗಳನ್ನು ಬಡ್ಡಿ ಜೊತೆಗೆ ಪಾವತಿಸಬೇಕೆಂದೂ ಹಾಗೂ ಇನ್ನೂ ಮೂರು ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದೂ ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ಒಟ್ಟಿನಲ್ಲಿ ಸುಮಾರು ಹನ್ನೊಂದು ಲಕ್ಷ ರೂಪಾಯಿಗಳನ್ನು ಆ ಕೇಸಿನ ವತಿಯಿಂದ ನಮಗೆ ಸಲ್ಲುವುದೆಂದು ನಿರ್ಧಾರವಾಗಿತ್ತು. ನಮ್ಮ ಲಾಯರ್ ಅನ್ನಪೂರ್ಣಿಯವರನ್ನು ನಿಮ್ಮ ಫೀಸು ಎಷ್ಟು ಪಾವತಿಸಬೇಕು ಎಂದು ಕೇಳಿದರೆ, ನಿಮ್ಮ ಮನಸ್ಸಿಗೆ ತೋಚಿದಷ್ಟು ಕೊಡಿ ಎಂದು ನಿರ್ಧಾರವನ್ನು ನಮಗೇ ಬಿಟ್ಟರು. ಅವರಿಗೆ ಸಲ್ಲಬೇಕಾದುದನ್ನು ಅವರಿಗೆ ಪಾವತಿಸಿ, ಅಲ್ಲಿಯವರೆಗೂ ಆ ಕೇಸಿಗೆ ಮಾಡಿದ ಖರ್ಚನ್ನು ಕಳೆದರೆ ಉಳಿದದ್ದು ಸುಮಾರು ೭.೫ ಲಕ್ಷ ರೂಪಾಯಿಗಳು.
ಕೊನೆಗೂ ವಿಜಯಿಯಾದ ಭಾವನೆ ಉಳಿಯಿತಾದರೂ, ನ್ಯಾಯ ದೊರಕಿದೆ ಎಂಬ ಭಾವನೆ ಉಳಿಯಲಿಲ್ಲ ಎಂದು ಒಂದು ದೃಷ್ಟಿಯಿಂದ ಯೋಚಿಸಿದರೂ, ಆ ಕೇಸು ಅಷ್ಟು ದಿನ ನೆಡೆದಿದ್ದೇ ಅಪ್ಪನ ಆ ಧೀರ್ಘವಾದ ಹಾಸಿಗೆಯ ಮೇಲಿನ ಜೀವನಕ್ಕೆ ಸ್ಪೂರ್ತಿಯಾಗಿತ್ತೆಂಬುದೂ ಸತ್ಯ. ಅಪ್ಪ ತೀರಿಕೊಳ್ಳುವಷ್ಟರಲ್ಲಿ ನಮ್ಮ ಕಾಲ ಮೇಲೆ ನಾವು ನಿಂತಾಗಿತ್ತು. ಹಾಗಾಗಿ, ಕೇಸಿನ ಸೋಲು ಗೆಲುವಿನ ಮೇಲೆ ನಮ್ಮ ಜೀವನಗಳು ನಿರ್ಧರಿತವಾಗಿರಲಿಲ್ಲ. ಜೀವನ ಯಾರು ಯಾರಿಗೆ, ಯಾವ ಯಾವ ರೀತಿಯಲ್ಲಿ ಹೋರಾಡಲು ಶಕ್ತಿ ಮತ್ತು ಸ್ಪೂರ್ತಿಯನ್ನು ಕೊಡುತ್ತದೆಯೋ ಅದು ಯಾವತ್ತಿಗೂ ನಿಗೂಢವೇ. ಆದರೆ ಅಪ್ಪನಿಗೆ ಮಾತ್ರ ಖಂಡಿತವಾಗಿಯೂ ಈ ಕೇಸಿನ ರೂಪದಲ್ಲಿ, ಅವರಲ್ಲಿರುವ ಹೋರಾಟದ ಶಕ್ತಿಯನ್ನು ಪ್ರಚೋದಿಸಿ, ಕೇಸನ್ನು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಬದುಕಲು ಪ್ರೇರೇಪಿಸಿತ್ತು. ಅಕಸ್ಮಾತ್ ಆ ಆಸ್ಪತ್ರೆಯವರು ನನಗೂ ನನ್ನ ತಮ್ಮನಿಗೂ ಶಿಕ್ಷಣವನ್ನು ಕೊಟ್ಟು, ಅಪ್ಪನಿಗೆ ಪರಿಹಾರವನ್ನು ಅವತ್ತೇ ಕೊಟ್ಟಿದ್ದರೆ, ಇಂದಿನಂತೆ ನಾವು ಯಾವುದೇ ಹಂಗಿಲ್ಲದೇ ಸ್ವತಂತ್ರರಾಗಿ ಬದುಕಲು ಸಾಧ್ಯವಿರಲಿಲ್ಲವೇನೋ. ಧನ್ಯವಾದದ ರೂಪದಲ್ಲಿ ಋಣ ನಮ್ಮನ್ನು ಕಟ್ಟಿಹಾಕುತ್ತಿತ್ತೇನೋ. ಆ ಕೇಸು ಅಪ್ಪನ ಜೀವನದ ಗುರಿಯಾಗಿರದಿದ್ದರೆ ಅಪ್ಪನಿಗೆ ಜೀವನದಲ್ಲಿ ಇನ್ನೂ ಮೊದಲೇ ಆಸಕ್ತಿ ಹೊರಟು ಹೋಗುತ್ತಿತ್ತೇನೋ.
ದೊಡ್ಡ ಆಸ್ಪತ್ರೆಯವರ ಆರ್ಗ್ಯುಮೆಂಟಿನ ಪ್ರಕಾರ ಅಪ್ಪನ ಲಿವರಿನಲ್ಲಿ ಹೇಮಾಗ್ಲಿಯೊಮ ಎಂಬಂತಹ ಒಂದು ರೀತಿಯ ನಿಷ್ಕ್ರಿಯ ಗೆಡ್ಡೆ ಇದ್ದಿತ್ತಂತೆ. ಆ ರೀತಿಯ ಗೆಡ್ಡೆಗಳು ಸಾಧಾರಣವಾದರೂ, ಕಾನ್ಸರ್ ಅಲ್ಲದಿದ್ದರೂ, ಆ ಗೆಡ್ಡೆಗಳ ಗಾತ್ರಕ್ಕನುಗುಣವಾಗಿ ಅವು ಒಡೆಯುವ ಸಾಧ್ಯತೆ ಇರುತ್ತದಂತೆ. ಅವು ಒಡೆದಾಗ ತಕ್ಷಣವೇ ಹೊಟ್ಟೆ ನೋವು ಶುರುವಾಗಿ ಆಂತರಿಕ ರಕ್ತಸ್ರಾವದಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳಿರುತ್ತದಂತೆ. ಹಾಗೇನಾದರೂ ಹೇಮಾಗ್ಲಿಯೊಮ ಒಡೆದು ಆಂತರಿಕ ರಕ್ತಸ್ರಾವ ಶುರುವಾದರೆ, ಅಂತಹ ಪರಿಸ್ಥಿತಿಯಲ್ಲಿ ಆಪರೇಷನ್ ಮಾಡುವುದೂ ಕಷ್ಟವಂತೆ. ೪ ಸೆಂಟಿಮೀಟರ್ ಗಿಂತ ಕಡಿಮೆ ಗಾತ್ರದ ಗೆಡ್ಡೆಗಳನ್ನು ಸಣ್ಣ ಗೆಡ್ಡೆಗಳೆಂದು ಪರಿಗಣಿಸಿದರೆ, ಅಪ್ಪನ ಲಿವರಿನಲ್ಲಿ ೪ ಸೆಂಟಿಮೀಟರಿಗಿಂತ ದೊಡ್ಡದಾದ ಹೇಮಾಗ್ಲಿಯೊಮ ಇತ್ತಂತೆ. ಅದು ಲೆಪ್ರೊಸ್ಕೋಪಿ ಎಂಬ ಟೆಸ್ಟಿನಿಂದ ತಿಳಿದಿತ್ತಂತೆ. ಅಂತಹ ಸ್ಥಿತಿಯಲ್ಲಿ ಆ ಗೆಡ್ಡೆಯನ್ನು ಆಪರೇಷನ್ ಮಾಡಿ ತೆಗೆಯುವುದೇ ಸೂಕ್ತವಂತೆ. ಲೆಪ್ರೊಸ್ಕೋಪಿಯಲ್ಲಿ ತಿಳಿದ ವಿಷಯವನ್ನು ನಿರ್ಧರಿಸಲು ಲಿವರಿನ ಆಂಜಿಯೋಗ್ರಾಮ್ ಮಾಡಲು ನಿರ್ಧರಿಸಿದರಂತೆ. ಆಂಜಿಯೋಗ್ರಾಮಿನಲ್ಲಿ ಆದಂತಹ ಪ್ಯಾರಾಪ್ಲೀಜಿಯ ಅಷ್ಟು ಸಾಮಾನ್ಯವಲ್ಲದ ಕಾರಣ, ಹೀಗೆ ಆಗುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲವಂತೆ. ಹಾಗಾಗಿ ತಾವು ಮಾಡಲು ಪ್ರಯತ್ನಿಸಿದ್ದು ಒಳ್ಳೆಯ ಉದ್ದೇಶದಿಂದಲೇ ಎಂದು ಕೋರ್ಟಿನಲ್ಲಿ ಹೇಳಿಕೆ ಕೊಟ್ಟಿದ್ದರು.
ಹಾಗಾಗಿ ಇವತ್ತು ನಮ್ಮ ಸ್ಥಾನದಲ್ಲಿ ನಿಂತು ಯೋಚಿಸಿದರೆ, ಅಪ್ಪನಿಗೆ ನೆಡೆಯಲು ಸಾಧ್ಯವಾಗದಿದ್ದರೂ, ನಮ್ಮ ಜೊತೆ ಇದ್ದು, ನಮ್ಮ ಜೀವನಕ್ಕೆ ಸಾಕಾಗುವಷ್ಟು ಮಾರ್ಗದರ್ಶನ ಮಾಡುವ ಅವಕಾಶವನ್ನೂ ಮತ್ತು ಸಮಯವನ್ನೂ ಅನುಕೂಲ ಅನಾನುಕೂಲಗಳ ರೂಪದಲ್ಲಿ ಜೀವನ ಪರಿಪಾಲಿಸಿತ್ತು. ಅಪ್ಪ ಅಮ್ಮ ಪಟ್ಟ ಕಷ್ಟಗಳು ಸತ್ಯವಾದರೂ, ದೇವರು ಇದ್ದುದರಲ್ಲಿ ನಮಗೆ ಒಳ್ಳೆಯದನ್ನೇ ಮಾಡುತ್ತಾನೆ ಎಂದು ನಂಬಿ, ಸಿಕ್ಕ ಜೀವನವನ್ನು ತೃಪ್ತಿಯಿಂದ ಜೀವಿಸುವುದೇ ಮೇಲು ಎಂದು ಅಪ್ಪ ಅಮ್ಮನ ಜೀವನದಿಂದ ನಾವು ಕಲಿತ ಸತ್ಯ. ಜೊತೆಗೆ, ನಾವು ಎದುರಿಸುವ ಸವಾಲುಗಳು ಮತ್ತು ಕಷ್ಟಗಳು ಅಪ್ಪ ಅಮ್ಮ ಎದುರಿಸಿದ ಕಷ್ಟಗಳ ಎದುರಿಗೆ ಅತ್ಯಲ್ಪವಾಗಿ ಕಾಣುವುದು ಹಾಗೂ ಅವುಗಳನ್ನು ಎದುರಿಸುವಾಗ ಬೇಕಾಗುವ ಮನಸ್ಥಿತಿಯೂ ಸಹ ಅಪ್ಪ ಅಮ್ಮನ ಜೀವನದಿಂದ ಕಲಿತ ನೀತಿಗಳು. ಅಪ್ಪನ ಜೀವನದ ಹೋರಾಟ, ಬೇರೆಯವರ ವಿರುದ್ಧ, ಆಸ್ಪತ್ರೆಯ ವಿರುದ್ಧ , ಡಾಕ್ಟರುಗಳ ವಿರುದ್ಧ ಹೋರಾಟಕ್ಕೆ ಪ್ರೇರಣೆಯಾಗುವಕ್ಕಿಂತ ಹೆಚ್ಚು ಜೀವನದ ಕಷ್ಟಗಳನ್ನು ಎದುರಿಸುವ ಪ್ರಯತ್ನಕ್ಕೆ ಪ್ರೇರಣೆಯಾಗಬೇಕೆಂಬುದೇ ಈ ಲಿಖಿತದ ಉದ್ದೇಶ ಹೊರತು ಯಾರನ್ನೂ ತಪ್ಪಿತಸ್ಥರೆಂದು ಬಿಂಬಿಸುವ ಉದ್ದೇಶವಲ್ಲ. ಅಪ್ಪ ನೆಡೆಯುವ ಶಕ್ತಿ ಕಳೆದುಕೊಂಡಾದ ಮೇಲೆ ಬಂದಂತಹ ತೊಂದರೆಗಳಿಗೆ ನಮ್ಮ ಊರಲ್ಲಿದ್ದ ಡಾಕ್ಟರ್ ನಾರಾಯಣ ಸ್ವಾಮಿ, ಡಾಕ್ಟರ್ ಅರುಣಾಚಲ, ಡಾಕ್ಟರ್ ನಂದಕಿಶೋರ್, ಡಾಕ್ಟರ್ ಉಪಾಧ್ಯಾಯರು ಮತ್ತು ದೊಡ್ಡಾಸ್ಪತ್ರೆಯ ಡಾಕ್ಟರ್ ಎಸ್. ಏನ್ ರಾವ್ , ಡಾಕ್ಟರ್ ಲಕ್ಷ್ಮಣ ಪ್ರಭು ಹೀಗೆ ಹಲವಾರು ವೈದ್ಯರುಗಳು ದಿನ ರಾತ್ರಿ ಎಂದು ನೋಡದೆ ಕರೆದಾಗ ಬಂದು ಅಪ್ಪನ ಶುಶ್ರೂಷೆ ಮಾಡಿದ್ದಾರೆ. ಹಾಗೂ ಅಪ್ಪನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಹಾಗೆಯೇ ಬಷೀರ್ ಅವರು ಮನೆಗೆ ಬಂದು ಅಪ್ಪನ ಬೆಡ್ ಸೊರ್ ಗಳಿಗೆ ವರ್ಷಾನುಗಳ ಕಾಲ ಡ್ರೆಸ್ಸಿಂಗ್ ಮಾಡಿದ್ದಾರೆ. ಮಾನಸ ನರ್ಸಿಂಗ್ ಹೋಮಿನಲ್ಲಿ ಕೆಲಸ ಮಾಡುತ್ತಿದ್ದ ಖತೀಜಾ ಮತ್ತು ಇನ್ನಿತರ ನರ್ಸುಗಳು ಅಪ್ಪನ ಕೊನೆಯ ದಿನಗಳಲ್ಲಿ ನಗುನಗುತ್ತಾ ಅಪ್ಪನ ಶುಶ್ರೂಷೆಯನ್ನು ಮಾಡಿದ್ದಾರೆ. ಹಾಗಾಗಿ ಕೆಲವೊಮ್ಮೆ ತಪ್ಪುಗಳು ನೆಡೆದರೂ ಸದ್ಭಾವನೆಯಿರುವ ವೈದ್ಯರುಗಳಿರುತ್ತಾರೆ.
ನಂಬಿಕೆಯಿದ್ದಲ್ಲಿ ಅವರು ಕೊಡುವ ಒಂದು ಹನಿ ನೀರೂ ಅಮೃತವಾದೀತು. ನಂಬಿಕೆ ಇಲ್ಲದಿದ್ದಲ್ಲಿ ಅಮೃತವೂ ವಿಷವಾಗಿ ಪರಿಣಮಿಸಬಹುದು ಎಂಬುದು ಅಪ್ಪನ ನಂಬಿಕೆಯಾಗಿತ್ತು.
ಅಪ್ಪ ತಮ್ಮ ಅನುಭವ ಕಥನವನ್ನು ಪುಸ್ತಕ ರೂಪದಲ್ಲಿ ತಂದಾಗ ಅದಕ್ಕಿಟ್ಟ ಹೆಸರು, “ಮಣಿಪಾಲಿನ ಬಲಿಪಶು”. ಆದರೆ ಅವರ ಜೀವನದಲ್ಲಿ ಅವರೆಂದೂ ಬಲಿಪಶುವಂತೆ ವರ್ತಿಸಿದ್ದೇ ಇಲ್ಲ. ಒಂದು ದಿನವೂ ಅವರ ಮುಖದಿಂದ ನಗು ಮಾಯವಾಗಿದ್ದಿಲ್ಲ. ಮಾತುಗಳಲ್ಲಿ ಬಲಾಹೀನತೆ ಕಂಡುಬಂದಿದ್ದಿಲ್ಲ. ಅವರ ಆಕ್ರೋಶವೇನಿದ್ದರೂ ತಪ್ಪುಗಳು ನೆಡೆದಾಗ ತಪ್ಪು ಮಾಡಿದವರು, ಸಹಾಯ ಮಾಡಬೇಕಾದ ಸ್ಥಾನದಲ್ಲಿ ಇರುವವರು ತೆಗೆದುಕೊಳ್ಳದೆ ಹೋದ ಜವಾಬ್ದಾರಿಗಳ ಬಗ್ಗೆ ಮಾತ್ರ ಇದ್ದ ಸಾತ್ವಿಕ ಕ್ರೋಧವಾಗಿತ್ತು. ಹಾಗಾಗಿ ಅಪ್ಪನ ಜೀವನದ ಕಥೆಗೆ “ಬಲಿಪಶು” ಎಂಬ ಶೀರ್ಷಿಕೆ ಹೊಂದುವುದಿಲ್ಲ ಎಂಬುದು ನನ್ನ ಭಾವನೆ.
ಅಪ್ಪನ ಪುಸ್ತಕದಲ್ಲಿದ್ದ ಕೊನೆಯ ಅಧ್ಯಾಯವನ್ನು ಸೇರಿಸಿ ನನ್ನ ಈ ಬರಹವನ್ನು ಮುಗಿಸುತ್ತಿದ್ದೇನೆ.
“ಮಣಿಪಾಲಿನ ಜೀವಧಾತರೇ,
ಕೇವಲ ಆರೇಳು ದಶಕಗಳಲ್ಲಿ ನೀವು ಮತ್ತು ನಿಮ್ಮ ತಲೆಮಾರಿನ ಹಿರಿಯರು ಮಾಡಿರುವ ಸಾಧನೆ ಪ್ರಶಂಸಾರ್ಹ ಮತ್ತು ಮಹತ್ವಪೂರ್ಣವಾದದ್ದು. ಮಹತ್ವಪೂರ್ಣ ಸಾಧನೆಗೈಯುವುದರ ಮೂಲಕ ದೇಶ ವಿದೇಶಗಳಲ್ಲಿ ನಿಮ್ಮ ಹಾಗೂ ಭಾರತ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದೀರಿ. ಏಳೆಂಟು ದಶಕಗಳ ಹಿಂದೆ ಕೇವಲ ಕಲ್ಲುಗುಡ್ಡವಾಗಿದ್ದ ಒಂದು ಸ್ಥಳ ಕೋಟ್ಯಾಂತರ ವಿಧ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಸರಸ್ವತಿ ಮಂದಿರವಾಗಿರುವುದು, ಅಶ್ವಿನೀ ದೇವತೆಗಳ ನಿವಾಸ ಸ್ಥಾನವಾಗಿರುವುದು ನೂರಕ್ಕೆ ನೂರು ಸತ್ಯ. ಇವೆಲ್ಲಾ ನಿಮ್ಮ ಮಹತ್ಸಾಧನೆಯ ಫಲವೆಂಬುದರಲ್ಲಿ ಎರಡು ಮಾತಿಲ್ಲ. ನಿಮ್ಮಲ್ಲಿ ಪ್ರತಿಭಾವಂತ ವೈದ್ಯರಿದ್ದಾರೆ. ಸನ್ನಡತೆಯ ಸಹೋದರ ಸಹೋದರಿಯರಿದ್ದಾರೆ. ಒಳ್ಳೆಯ ಆಡಳಿತ ವರ್ಗವೂ ಇದೆ. ಲಕ್ಷಾಂತರ ಜನರಿಗೆ ನಿಮ್ಮ ಸಂಸ್ಥೆ ಉದ್ಯೋಗ ನೀಡಿ ಅನ್ನ ಒದಗಿಸಿದೆ. ಯಾರೋ ಒಬ್ಬಿಬ್ಬರ ದುಡುಕಿನ ಅಜಾಗರೂಕತೆಯ ಹೊಣೆಗೇಡಿತನದ ವರ್ತನೆಯಿಂದಾಗಿ ನನ್ನಂತೆ ಒಬ್ಬೊಬ್ಬರು “ಬಲಿಪಶುಗಳಾಗುವುದು” ಅಸಹಜವೇನಲ್ಲ. ಸತ್ಯವನ್ನು ಅರಿತು, ತಪ್ಪಿತಸ್ಥರನ್ನು ಶಿಕ್ಷಿಸಿ, ನೊಂದವರಿಗೆ ಸಹಾಯಹಸ್ತ ನೀಡುವುದರಿಂದ ನಿಮ್ಮ ಘನತೆ ಗೌರವ, ಪ್ರತಿಷ್ಠೆಗಳು ಹೆಚ್ಚುವುದೇ ಹೊರತು, ನಿಮ್ಮಲ್ಲಿ ತಪ್ಪೇ ಇಲ್ಲವೆಂದು ವಾದಿಸುವುದರಿಂದಾಗಲೀ, ತಪ್ಪಿತಸ್ಥರಿಗೆ ರಕ್ಷಣೆ ಒದಗಿಸುವುದರಿಂದಾಗಲೀ, ನಿಮ್ಮ ಮನಸ್ಸಿನಲ್ಲಿ ಆದ ತಪ್ಪಿನ ಅರಿವಿದ್ದೂ, ನಮ್ಮಂತಹ ಬಲಿಪಶುಗಳ ವಿರುದ್ಧ ಕೋರ್ಟಿನಲ್ಲಿ ಹೋರಾಡಿ ಗೆಲ್ಲುವುದರಿಂದಲ್ಲ. ನಿಮ್ಮಂತಹ ಬುದ್ಧಿಶಾಲಿ ವಿವೇಕಿಗಳು ನಮ್ಮಂತಹ ನೊಂದವರಿಗೆ ನೆರಳು ನೀಡುವ ಅಶ್ವತ್ಥ ವೃಕ್ಷವಾಗಬೇಕೇ ಹೊರತು, ಗಾಯದ ಮೇಲೆ ಬರೆ ಎಳೆಯುವವರಾಗಬಾರದು. ನನ್ನಂತಹ ನೊಂದವರ ನೋವಿನ ನಿಟ್ಟುಸಿರು ನಿಮ್ಮಂತಹವರಿಗೆ ತಟ್ಟಬಾರದು. ನಿಮ್ಮ ಕೀರ್ತಿ ಪತಾಕೆ ನಮ್ಮಂತಹವರ ಸಜೀವ ಸಮಾಧಿಯ ಮೇಲೆ ಹಾರಾಡಬಾರದು. ಬದಲಾಗಿ ನೀವು ನಿರ್ಮಿಸಿದ ಸರಸ್ವತೀ ಮಂದಿರದ ಮೇಲೆ ಹಾರಾಡಬೇಕು. ಅಶ್ವಿನೀ ದೇವತೆಗಳ ನಿವಾಸದ ಮೇಲೆ ಹಾರಾಡಬೇಕು. ದೇವರು ನಿಮಗೆ, ನೊಂದವರಿಗೆ ನೆರಳು ನೀಡುವ ಮನಸ್ಸು ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ”
ಓದುಗರಲ್ಲಿ ಅಪ್ಪನ ಹೋರಾಟದ ಈ ಕಥನಕ್ಕೆ ಹೊಂದುವ ಶೀರ್ಷಿಕೆಯನ್ನು ಹಾಗೂ ಅನಿಸಿಕೆಗಳನ್ನು ಸೂಚಿಸಲು ವಿನಂತಿ. ಇದು ನನ್ನ ಮೊದಲ ಕನ್ನಡ ಬರಹವಾದ್ದರಿಂದ, ಬರವಣಿಗೆಯ ಅರಿವಿದ್ದವರು ಬರವಣಿಗೆಯನ್ನು ತಿದ್ದಿಕೊಳ್ಳಲು, ಸುಧಾರಿಸಿಕೊಳ್ಳಲು ಸಲಹೆಗಳನ್ನು ಸೂಚಿಸಿದರೆ ಸಹಾಯವಾದೀತು.
– ಅಶ್ವಿನಿ ಕೋಟೇಶ್ವರ